ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ವೀರಮರಣವನ್ನಪ್ಪಿದ ಸೇನಾ ಶ್ವಾನ ಫ್ಯಾಂಟಮ್
ಜಮ್ಮುಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಸೇನಾ ಶ್ವಾನ ಫ್ಯಾಂಟಮ್ ವೀರಮರಣವನ್ನಪ್ಪಿದೆ. ಉಗ್ರರೊಂದಿಗೆ ಹೋರಾಡುತ್ತಾ ಮಾರಣಾಂತಿಕ ಗಾಯಗಳಿಂದ ಫ್ಯಾಂಟಮ್ ಪ್ರಾಣ ಬಿಟ್ಟಿದೆ. ಈ ಕಾರ್ಯಾಚರಣೆಯಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ.
ಜಮ್ಮುಕಾಶ್ಮೀರದಲ್ಲಿ ಉಗ್ರರ ಹಿಮ್ಮೆಟ್ಟಿಸುವ ಕಾರ್ಯಾಚರಣೆ ವೇಳೆ ಭಾರತೀಯ ಸೇನೆಯ ಶ್ವಾನವೊಂದು ವೀರಮರಣವನ್ನಪ್ಪಿದೆ. ಜಮ್ಮುವಿನ ಅಖ್ನೂರ್ ಸೆಕ್ಟರ್‌ನಲ್ಲಿ ಭಾರತೀಯ ಸೇನೆಯ ಯೋಧ(ಶ್ವಾನ) ಫ್ಯಾಂಟಮ್ ಉಗ್ರರೊಂದಿಗೆ ಹೋರಾಡಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದೆ. ನಿನ್ನೆ ಮುಂಜಾನೆ ಈ ಉಗ್ರರು ಹಾಗೂ ಸೇನಾಪಡೆಯ ಮಧ್ಯೆ ಗುಂಡಿನ ಕಾಳಗ ಆರಂಭವಾಗಿತ್ತು. ಉಗ್ರರು ಜಮ್ಮುವಿನಿಂದ 85 ಕಿಲೋ ಮೀಟರ್ ದೂರದಲ್ಲಿರುವ ಅಖ್ನೂರ್‌ನ ಖೌರ್ ಬಳಿ ಸೇನೆಗೆ ಸೇರಿದ ಆಂಬುಲೆನ್ಸ್ ಮೇಲೆ ದಾಳಿ ಮಾಡಿದ ನಂತರ ಈ ಉಗ್ರರ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಆರಂಭವಾಗಿತ್ತು.
ನಮ್ಮ ಪಡೆಗಳು ಸಿಕ್ಕಿಬಿದ್ದ ಭಯೋತ್ಪಾದಕರ ಮೇಲೆ ಮುಗಿಬೀಳುತ್ತಿದ್ದಂತೆ ಫ್ಯಾಂಟಮ್ ಕೂಡ ಶತ್ರುಗಳ ಬೆನ್ನಟ್ಟಿದ್ದು, ಈ ವೇಳೆ ಉಂಟಾದ ಗುಂಡಿನ ಚಕಮಕಿ ವೇಳೆ ಫ್ಯಾಂಟಮ್‌ಗೆ ಮಾರಣಾಂತಿಕ ಗಾಯಗಳಾಗಿ ವೀರ ಮರಣವನ್ನಪ್ಪಿದೆ. ಅವರ ಧೈರ್ಯ, ನಿಷ್ಠೆ ಮತ್ತು ಸಮರ್ಪಣೆಯನ್ನು ಎಂದಿಗೂ ಮರೆಯಲಾಗದು. ಇಲ್ಲಿಯವರೆಗೆ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ, ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ ಎಂದು ವೈಟ್ ನೈಟ್ ಕಾರ್ಪ್ಸ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ.
ಫ್ಯಾಂಟಮ್ ಒಬ್ಬ ಬೆಲ್ಜಿಯನ್ ಮಾಲಿನೊಯಿಸ್ ತಳಿಯ ಗಂಡು ಶ್ವಾನವಾಗಿದ್ದು, ನಿರ್ದಿಷ್ಟವಾಗಿ ಆಕ್ರಮಣಕಾರಿ ನಾಯಿಯಾಗಿ ತರಬೇತಿ ಪಡೆದಿತ್ತು. 2022ರ ಆಗಸ್ಟ್‌ನಲ್ಲಿ ಸೇನೆಗೆ ನಿಯೋಜನೆಗೊಂಡಿತ್ತು. ಮೀರತ್‌ನಲ್ಲಿರುವ ಆರ್‌ವಿಸಿ ಕೇಂದ್ರದಿಮದ ತರಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸೇನಾ ನಾಯಿಗಳಿಗೆ ಗಜೆಟ್‌ಗಳನ್ನು ನೀಡಲಾಗಿದ್ದು, ಅದರ ಮೂಲಕ ಹತ್ತಿರದಿಂದಲೇ ದೂರದಲ್ಲಿರುವ ಶತ್ರು ಸ್ಥಳಗಳ ಮೇಲೆ ಶ್ವಾನಗಳು ಕಣ್ಣಿಡಲು ಸಹಾಯ ಮಾಡುತ್ತವೆ. ಈ ಗುಂಡಿನ ದಾಳಿಯಲ್ಲಿ ಮೂವರು ಭಯೋತ್ದಾಕರು ಭಾಗಿಯಾಗಿದ್ದಾರೆ. ಅದರಲ್ಲಿ ಓರ್ವನನ್ನು ಹತ್ಯೆ ಮಾಡಲಾಗಿದೆ. ಹತ್ಯೆಯಾದವ ಸೇನಾ ಸಮವಸ್ತ್ರ ಧರಿಸಿದ್ದ ಈ ಭಯೋತ್ಪಾದಕರು ಜೈಷಿ ಇ ಮೊಹಮ್ಮದ್ ಭಯೋತ್ಪಾದಕ ಗುಂಪಿಗೆ ಸೇರಿದ್ದಾರೆ ಎಂದು ಭಾರತೀಯ ಸೇನೆ ಅನುಮಾನ ಪಟ್ಟಿದೆ.