Gujarat migrant workers fired ಗುಜರಾತ್‌ನ ಸೂರತ್‌ನಲ್ಲಿ ವಾರದ ರಜೆ ಮತ್ತು 12 ಗಂಟೆಗಳ ಕೆಲಸದ ಅವಧಿಯನ್ನು ವಿರೋಧಿಸಿ ಪ್ರತಿಭಟಿಸಿದ ಸುಮಾರು 200 ಜವಳಿ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಬಿಹಾರ, ಉತ್ತರ ಪ್ರದೇಶ ಮತ್ತು ಒಡಿಶಾದ ವಲಸೆ ಕಾರ್ಮಿಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸೂರತ್‌: ವಾರಕ್ಕೊಮ್ಮೆ ರಜೆ ಕೋರಿ ಹಾಗೂ ದಿನಕ್ಕೆ 12 ಗಂಟೆಗಳ ಕೆಲಸದ ಅವಧಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಸುಮಾರು 200 ಜವಳಿ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿರುವ ಘಟನೆ ಗುಜರಾತ್‌ನ ಸೂರತ್‌ನಲ್ಲಿ ವರದಿಯಾಗಿದೆ.

ಗುಜರಾತ್ ಜವಳಿ ಕಾರ್ಮಿಕರು ಪ್ರತಿಭಟನೆ

ಇಲ್ಲಿನ ಜವಳಿ ಕೇಂದ್ರಗಳಲ್ಲಿ ಕಾರ್ಮಿಕರು ಯಾವುದೇ ಖಚಿತವಾದ ವಾರದ ರಜೆ ಇಲ್ಲದೆ ಪ್ರತಿದಿನ 12 ಗಂಟೆಗಳಿಗೂ ಹೆಚ್ಚು ಕಾಲ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಸ್ವಾತಂತ್ರ್ಯ ದಿನಾಚರಣೆಯಂತಹ ರಾಷ್ಟ್ರೀಯ ಹಬ್ಬದ ದಿನಗಳಂದೂ ಅವರಿಗೆ ರಜೆ ನೀಡುತ್ತಿರಲಿಲ್ಲ ಎನ್ನಲಾಗಿದೆ. ಇದರ ವಿರುದ್ಧ ಮೊದಲು ಆಗಸ್ಟ್‌ನಲ್ಲಿ ಅಮ್ರೋಲಿಯಲ್ಲಿ ಕಾರ್ಮಿಕರು ಪ್ರತಿಭಟನೆಗಳನ್ನು ಪ್ರಾರಂಭಿಸಿದರು. ನಂತರ ಅದು ಅಂಜನಾ ಇಂಡಸ್ಟ್ರಿಯಲ್ ಎಸ್ಟೇಟ್, ಕತರ್ಗಮ್, ಸಚಿನ್ ಜಿಐಡಿಸಿ, ಪಿಪೋದರ ಮತ್ತು ಕಡೋದರ ಸೇರಿದಂತೆ ಇದರ ಕೈಗಾರಿಕಾ ಪ್ರದೇಶಗಳಲ್ಲೂ ಭುಗಿಲೆದ್ದಿತು. ಪ್ರತಿಭಟನಾಕಾರರಲ್ಲಿ ಬಿಹಾರ, ಉತ್ತರ ಪ್ರದೇಶ ಹಾಗೂ ಒಡಿಶಾದ ವಲಸೆ ಕಾರ್ಮಿಕರು ಸೇರಿದ್ದರು.

200 ಜವಳಿ ಕಾರ್ಮಿಕರು ಕೆಲಸದಿಂದ ವಜಾ

ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಸುಮಾರು 200 ಜವಳಿ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ‘ದಿನನಿತ್ಯ 12 ಗಂಟೆಗಳ ಸುದೀರ್ಘ ಕೆಲಸದ ಅವಧಿಯ ಹೊರತಾಗಿಯೂ ನಮಗೆ ಕನಿಷ್ಠ ವಾರದ ರಜೆಯನ್ನೂ ನೀಡುತ್ತಿಲ್ಲ. ಸ್ವಾತಂತ್ರ್ಯ ದಿನಾಚರಣೆಯಂತಹ ರಾಷ್ಟ್ರೀಯ ಹಬ್ಬದ ದಿನಗಳಂದೂ ರಜೆ ನೀಡದೆ ಶೋಷಣೆ ಮಾಡಲಾಗುತ್ತಿದೆ. ನಾವು ಏನು ಮನುಷ್ಯರಲ್ಲವೇ?’ ಎಂದು ಕಾರ್ಮಿಕರು ಕಣ್ಣೀರಿಟ್ಟಿದ್ದಾರೆ.

ಇನ್ನೊಂದೆಡೆ, ಕಾರ್ಮಿಕರ ಈ ಬೇಡಿಕೆಯನ್ನು ಪೂರೈಸುವುದು ಆರ್ಥಿಕವಾಗಿ ಕಾರ್ಯಸಾಧುವಲ್ಲ ಹಾಗೂ ಇದರಿಂದ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಉದ್ಯಮದ ಆಡಳಿತ ಮಂಡಳಿಯು ವಜಾ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಆದರೆ, ವಿಶ್ರಾಂತಿಯಿಲ್ಲದೆ ನಿರಂತರ ದುಡಿಸಿಕೊಳ್ಳುವುದು ಕಾರ್ಮಿಕ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಉದ್ಯೋಗಿಗಳ ವಜಾ ಖಂಡಿಸಿ ಕಾರ್ಮಿಕ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.