ಕೊಚ್ಚಿ(ಜು.11): ರಾಜತಾಂತ್ರಿಕ ರಕ್ಷಣೆ ಇರುವ ಬ್ಯಾಗ್‌ನಲ್ಲಿ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮಾಹಿತಿ ತಂತ್ರಜ್ಞಾನ ಇಲಾಖೆಯ ಮಹಿಳಾ ಅಧಿಕಾರಿ ಸ್ವಪ್ನಾ ಸುರೇಶ್‌ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣವೊಂದನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಕೇರಳ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಇದೇ ವೇಳೆ ಸ್ವಪ್ನಾ ಸುರೇಶ್‌ ಕ್ರಿಮಿನಲ್‌ ಹಿನ್ನೆಲೆಯನ್ನು ಹೊಂದಿದ್ದಾಳೆ ಮತ್ತು ಆಕೆ ಚಿನ್ನ ಕಳ್ಳಸಾಗಣೆಗೆ ಕಾಗದಪತ್ರಗಳನ್ನು ವ್ಯವಸ್ಥೆ ಮಾಡುವುದರಲ್ಲಿ ಭಾಗಿಯಾಗಿದ್ದಾಳೆ ಎಂದು ಆರೋಪಿಸಿರುವ ಎನ್‌ಐಎ, ಸ್ವಪ್ನಾ ಸುರೇಶ್‌ಗೆ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಹೈಕೋರ್ಟ್‌ಗೆ ಮನವಿ ಮಾಡಿಕೊಂಡಿದೆ.

ದೂತಾವಾಸ ಕಚೇರಿ ಮೂಲಕವೇ 30 ಕೆಜಿ ಅಕ್ರಮ ಚಿನ್ನ ಸಾಗಣೆ: ಸಿಎಂಗೆ ಢವ ಢವ..!

ಏನಾಗಿತ್ತು?

ಡಿಪ್ಲೊಮ್ಯಾಟಿಕ್‌ ಬ್ಯಾಗೇಜ್‌ನಲ್ಲಿ ಸ್ನಾನಗೃಹದ ಉಪಕರಣಗಳ ಒಳಗೆ ಚಿನ್ನವನ್ನು ಅಡಗಿಸಿಡಲಾಗಿತ್ತು. ಈ ಬ್ಯಾಗ್‌ ಎರಡು ದಿನದ ಹಿಂದೆಯೇ ವಿಮಾನ ನಿಲ್ದಾಣಕ್ಕೆ ಬಂದಿತ್ತಾದರೂ, ಅದನ್ನು ಕೇಳಿಕೊಂಡು ಯಾರೂ ಬಂದಿರಲಿಲ್ಲ. ಹೀಗಾಗಿ ಪರಿಶೀಲನೆ ನಡೆಸಿದಾಗ ಚಿನ್ನ ಪತ್ತೆಯಾಯಿತು ಎಂದು ಕಸ್ಟಮ್ಸ್‌ ಆಯುಕ್ತ ಸುಮೀತ್‌ ಕುಮಾರ್‌ ತಿಳಿಸಿದ್ದಾರೆ. ತಿರುವನಂತಪುರದ ಸಂಯುಕ್ತ ಅರಬ್‌ ಸಂಸ್ಥಾನದ ದೂತಾವಾಸ ವಿಳಾಸವನ್ನು ಈ ಬ್ಯಾಗ್‌ ಹೊಂದಿದೆ ಎಂದು ವರದಿಗಳು ತಿಳಿಸಿವೆ.

ಆಭರಣಕ್ಕೆ ಬೇಡಿಕೆ ಇಲ್ಲ, ಚಿನ್ನದ ದರ ಮಾತ್ರ ಕೆಳಗಿಳಿಯುತ್ತಿಲ್ಲ; 3 ವಿಚಿತ್ರ ಕಾರಣ!

ತಿರುವನಂತಪುರದ ಮನ್ಸಾಡ್‌ನಲ್ಲಿ ಇರುವ ಅರಬ್‌ ಸಂಯುಕ್ತ ಸಂಸ್ಥಾನದ ವಿಳಾಸಕ್ಕೆ ಈ ಬ್ಯಾಗ್‌ ಅನ್ನು ಕಳುಹಿಸಲಾಗಿತ್ತು. ಎರಡು ದಿನಗಳ ಹಿಂದೆ ಬಾಡಿಗೆ ವಿಮಾನವೊಂದರಲ್ಲಿ ಈ ಬ್ಯಾಗ್‌ ಬಂದಿಳಿದಿತ್ತು. ಆದರೆ, ಇದೊಂದು ಡಿಪ್ಲೋಮಾಟಿಕ್‌ ಬ್ಯಾಗೇಜ್‌ ಆಗಿದ್ದರಿಂದ ಹೆಚ್ಚಿನ ತಪಾಸಣೆಗೆ ಒಳಗಾಗಿರಲಿಲ್ಲ. ಆದರೆ, ಎರಡು ದಿನವಾದರೂ ಅದನ್ನು ಒಯ್ಯಲು ಯಾರೂ ಬರದೇ ಇದ್ದಿದ್ದರಿಂದ ಅನುಮಾನ ಬಂದು ತಪಾಸಣೆಗೆ ಒಳಪಡಿಸಿದ ವೇಳೆ ಅದರಲ್ಲಿ ಚಿನ್ನ ಇರುವುದು ಗೊತ್ತಾಗಿದೆ.