ನವದೆಹಲಿಯ ಜಂತರ್‌ ಮಂತರ್‌ನಲ್ಲಿ ಜಾತಿ ಆಧಾರಿತ ಮೀಸಲಾತಿಯನ್ನು ವಿರೋಧಿಸಿ ನೂರಾರು ಮಂದಿ ಪ್ರತಿಭಟನೆ ನಡೆಸಿದರು. ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಸವಲತ್ತುಗಳನ್ನು ನೀಡಬೇಕು ಮತ್ತು ಮೀಸಲಾತಿಯಲ್ಲಿ ಕೆನೆ ಪದರ ವ್ಯವಸ್ಥೆ ತರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ನವದೆಹಲಿ(ಆ.22): ಜಾತಿಯ ಆಧಾರದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ನೀಡಲಾಗುವ ಮೀಸಲಾತಿಯನ್ನು ವಿರೋಧಿಸಿ ಶುಕ್ರವಾರ ಜಂತರ್‌ ಮಂತರ್‌ನಲ್ಲಿ ನೂರಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ. ಸಿಜೆಪಿ ಮಾದರಿಯಲ್ಲಿ ಹುಟ್ಟಿಕೊಂಡ ‘ರಿಸರ್ವೇಷನ್‌ ಹಟಾವೋ ಆಂದೋಲನ’ ಎಂಬ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಈ ಹೋರಾಟಕ್ಕೆ ಕರೆ ನೀಡಲಾಗಿತ್ತು.

ಪೊಲೀಸರ ಅನುಮತಿ ಸಿಗದ ಹೊರತಾಗಿಯೂ ಬ್ಯಾನರ್‌, ಪೋಸ್ಟರ್‌, ಕೇಸರಿ ಧ್ವಜ ಹಿಡಿದು ಬಂದ ನೂರಾರು ಮಂದಿ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ. ಸ್ಥಳದಲ್ಲಿ ಭದ್ರತೆಗಾಗಿ ಪೊಲೀಸರು ಹಾಗೂ ಅರೆಸೇನಾಪಡೆಗಳನ್ನು ನಿಯೋಜಿಸಲಾಗಿತ್ತು.

‘ಸರ್ಕಾರದಿಂದ ಯಾರಿಗೆ ನೆರವು ಸಿಗಬೇಕು ಎಂಬುದನ್ನು ಆರ್ಥಿಕ ಸ್ಥಿತಿಯ ಆಧಾರದಲ್ಲಿ ನಿರ್ಧರಿಸಬೇಕು. ಜಾತಿಯ ಹಂಗಿಲ್ಲದೆ ಎಲ್ಲಾ ಬಡವರಿಗೆ ಶಿಕ್ಷಣ, ತರಬೇತಿ ಇತ್ಯಾದಿಗಳ ಸವಲತ್ತು ಲಭಿಸಬೇಕು’ ಎಂದು ಅಖಿಲ ಭಾರತೀಯ ಕ್ಷತ್ರಿಯ ಮಹಾಸಭಾ ನಂಟಿನ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಇದೇ ವೇಳೆ, ‘ಸದ್ಯದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗೆ ಅನುಗುಣವಾಗಿ ನೀತಿಗಳನ್ನು ರೂಪಿಸಬೇಕು. ಮೀಸಲಾತಿಯಲ್ಲೂ ಕೆನೆ ಪದರದ ವ್ಯವಸ್ಥೆ ತರಬೇಕು’ ಎಂದು ಆಗ್ರಹಿಸಲಾಗಿದೆ. ಯುಜಿಸಿ ಸಮಾನತೆ ನಿಯಮಾವಳಿ, 2026ರ ಬಗ್ಗೆಯೂ ಈ ಪ್ರತಿಭಟನೆ ವೇಳೆ ಅಪಸ್ವರ ಎತ್ತಲಾಯಿತು.