ತಮ್ಮ ನಾಯಕಿ ಹಾಗೂ ದಿವಂಗತ ಸಿಎಂ ಜಯಲಲಿತಾ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ವಿರುದ್ಧ ಎಐಎಡಿಎಂಕೆ ತಿರುಗಿಬಿದ್ದಿದೆ. ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಯೋಚನೆ ಮಾಡುವುದಾಗಿ ತಿಳಿಸಿದೆ.

ಚೆನ್ನೈ(ಜೂ.13): ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ತಮ್ಮ ಅಧಿನಾಯಕಿ ದಿವಂಗತ ಜೆ.ಜಯಲಲಿತಾ ಅವರ ಹೆಸರಿಗೆ ಕಳಂಕ ತಂದಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಐಪಿಎಸ್‌ ಅಧಿಕಾರಿ ಕೆ.ಅಣ್ಣಾಮಲೈ ವಿರುದ್ಧ ಖಂಡನಾ ನಿರ್ಣಯ ಅಂಗೀಕರಿಸಲಾಗಿದೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮಂಗಳವಾರ ಹೇಳಿದ್ದಾರೆ. ಸಂದಶರ್ನವೊಂದರಲ್ಲಿ ಮಾತನಾಡುವ ವೇಳೆ, 'ತಮಿಳುನಾಡು ರಾಜ್ಯದಲ್ಲಿ ಅಧಿಕಾರ ಹಿಡಿದ ಸಾಕಷ್ಟು ಆಡಳಿತಗಾರರು ಭ್ರಷ್ಟರು. ಮಾಜಿ ಮುಖ್ಯಮಂತ್ರಿಗಳೇ ಕೋರ್ಟ್‌ನಿಂದ ಶಿಕ್ಷೆಗೆ ಒಳಗಾದವರು' ಎಂದು ಅಣ್ಣಾಮಲೈ ಹೇಳಿದ್ದರು. ಇದರ ಬೆನ್ನಲ್ಲಿಯೇ ಕಿಡಿಕಿಡಿಯಾಗಿರುವ ಎಐಎಡಿಎಂಕೆ, ಇದನ್ನು ತಮ್ಮ ಮಾಜಿ ನಾಯಕಿ ಜಯಲಲಿತಾ ವಿರುದ್ಧ ಮಾಡಿರುವ ಟೀಕೆ ಎಂದೇ ಭಾವಿಸಿದೆ. ತಮಿಳುನಾಡಿನಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿರುವ ಎಐಎಡಿಎಂ ಅಣ್ಣಾಮಲೈ ಈ ಹೇಳಿಕೆ ನೀಡುವ ಮೂಲಕ ತಮ್ಮ ನಾಯಕಿಯನ್ನು ಗೇಲಿ ಮಾಡಿದ್ದಾರೆ ಎಂದಿದೆ. ಅದರೊಂದಿಗೆ ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆಯೂ ಯೋಚನೆ ಮಾಡುತ್ತೇವೆ ಎಂದು ತಿಳಿಸಿದೆ.

“ನಮ್ಮ ನಾಯಕಿ ಜಯಲಲಿತಾ ಅವರ ಹೆಸರಿಗೆ ಕಳಂಕ ತರುವ ಮೂಲಕ ಇಂಗ್ಲಿಷ್ ದಿನಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರುವ ಕೆ ಅಣ್ಣಾಮಲೈ ವಿರುದ್ಧ ಖಂಡನಾ ನಿರ್ಣಯವನ್ನು ಅಂಗೀಕರಿಸಲಾಗಿದೆ. ನಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ದುಃಖಿತರಾಗಿದ್ದಾರೆ' ಎಂದು ಎಡಪ್ಪಾಡಿ ಕೆ ಪಳನಿಸ್ವಾಮಿ ಹೇಳಿದ್ದಾರೆ. ಜಯಲಲಿತಾ ಅವರು ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳನ್ನು ಬೆಂಬಲಿಸಿದರು ಮತ್ತು ಬಿಜೆಪಿಯ ಅನೇಕ ಹಿರಿಯ ನಾಯಕರು ಮಾಜಿ ಮುಖ್ಯಮಂತ್ರಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು ಎಂದು ಪಳನಿಸ್ವಾಮಿ ಹೇಳಿದ್ದಾರೆ.

ಬಿಜೆಪಿಯ ಹಲವು ಹಿರಿಯ ನಾಯಕರು ನಮ್ಮ ನಾಯಕಿ ಜಯಲಲಿತಾ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು ಮತ್ತು ಅವರ ಮನೆಯಲ್ಲಿ ಅವರನ್ನು ಭೇಟಿಯಾಗಿ ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು. ಕೇಂದ್ರದ ಬಿಜೆಪಿ ಸರ್ಕಾರವನ್ನು ಮೊದಲು ಬೆಂಬಲಿಸಿದ ನಾಯಕಿ ಅವರು. ಜಯಲಲಿತಾ ಅವರು ಅನೇಕರಿಗೆ ಮಾದರಿಯಾಗಿದ್ದರು. ಅನೇಕರಿಗೆ ದಾರಿ ತೋರಿಸಿದ ನಾಯಕಿ. ನಾವು ಅಣ್ಣಾಮಲೈ ಅವರ ಹೇಳಿಕೆಯನ್ನು ಖಂಡಿಸುತ್ತೇವೆ ಎಂದು ಎಡಪ್ಪಾಡಿ ಕೆ ಪಳನಿಸ್ವಾಮಿ ತಿಳಿಸಿದ್ದಾರೆ.

2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಎಐಡಿಎಂಕೆ ನಡುವಿನ ಭಿನ್ನಮತ ಸ್ಫೋಟಗೊಂಡಿದೆ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ತಮಿಳುನಾಡಿನ ಬಿಜೆಪಿ ಕಾರ್ಯಕರ್ತರಿಗೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ 25 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎನ್ನುವ ಗುರಿ ನೀಡಿದ್ದಾರೆ.

'ಚೆನ್ನೈ ಗೆಲುವಿಗೆ ಸಹಾಯ ಮಾಡಿದ್ದು ಬಿಜೆಪಿ ಕಾರ್ಯಕರ್ತ' ಡಿಎಂಕೆಗೆ ತಿವಿದ ಅಣ್ಣಾಮಲೈ!

ಪತ್ರಿಕೆಗೆ ನೀಡಿದ ಸಂದರ್ಶನ ನೀಡಿದ ಕೆ ಅಣ್ಣಾಮಲೈ ಹಿಂದಿನ ಸರ್ಕಾರಗಳ ಭ್ರಷ್ಟಾಚಾರದ ಬಗ್ಗೆ ಮಾತನಾಡಿದರು. “ತಮಿಳುನಾಡಿನ ಹಲವು ನಾಯಕರು ಭ್ರಷ್ಟರಾಗಿದ್ದರು. ಮಾಜಿ ಮುಖ್ಯಮಂತ್ರಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗಿದೆ. ಹಾಗಾಗಿಯೇ ತಮಿಳುನಾಡು ಅತ್ಯಂತ ಭ್ರಷ್ಟ ರಾಜ್ಯಗಳಲ್ಲೊಂದಾಗಿದೆ. ಭ್ರಷ್ಟಾಚಾರದಲ್ಲಿ ಇದು ಮೊದಲ ಸ್ಥಾನದಲ್ಲಿದೆ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದ್ದರು. 2019 ರ ಲೋಕಸಭೆ ಚುನಾವಣೆ ಮತ್ತು 2021 ರ ತಮಿಳುನಾಡು ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಎಐಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿತು, ಆದರೆ ಎರಡೂ ಪಕ್ಷಗಳ ಸಾಧನೆ ನೀರಸವಾಗಿತ್ತು.

ಮೇಕೆದಾಟು ಹೋರಾಟಗಾರ ಡಿಕೆಶಿ ಪದಗ್ರಹಣಕ್ಕೆ ಸ್ಟಾಲಿನ್‌: ಅಣ್ಣಾಮಲೈ ಆಕ್ಷೇಪ