ಪಾಕಿಸ್ತಾನಕ್ಕೆ ತೆರಳಿ ಮದುವೆ -ಮತಾಂತರದಲ್ಲಿ ISI ಷಡ್ಯಂತ್ರ, ಭಾರತದ ಅಂಜು ಪ್ರಕರಣ ತನಿಖೆಗೆ ಆದೇಶ!
ಭಾರತದ ಅಂಜು ಪಾಕಿಸ್ತಾನಕ್ಕೆ ತೆರಳಿ ನಸ್ರುಲ್ಲಾ ಮದುವೆಯಾಗಿರುವ ಪ್ರಕರಣದ ಹಿಂದೆ ಪಾಕಿಸ್ತಾನ ಐಎಸ್ಐ ನಂಟಿನ ಅನುಮಾನ ಕಾಡತೊಡಗಿದೆ. ಬ್ರೇನ್ ವಾಶ್ ಮಾಡಿ ಅಂಜುವನ್ನು ಪಾಕಿಸ್ತಾನಕ್ಕೆ ಕರೆಸಿದ್ದಾರೆ, ಬಳಿಕ ಮದುವೆ ಮಾಡಿ ಮತಾಂತರ ಮಾಡಲಾಗಿದೆ ಅನ್ನೋ ಅನುಮಾನಗಳು ಹೆಚ್ಚಾಗತೊಡಗಿದೆ. ಇದರ ಬೆನ್ನಲ್ಲೇ ಮಧ್ಯ ಪ್ರದೇಶ ಸರ್ಕಾರ ತನಿಖೆಗೆ ಆದೇಶ ನೀಡಿದೆ.
ಭೋಪಾಲ್(ಜು.31) ಪಾಕಿಸ್ತಾನ ಐಎಸ್ಐ ಕುಮ್ಮಕ್ಕಿನಿಂದ ಭಾರತದ ಅಂಜು ಪಾಕಿಸ್ತಾನ ಪ್ರವಾಸ ಮಾಡಿದ್ದಳೇ? ಗೆಳೆಯನ ಭೇಟಿ, ಒಂದು ವಾರದಲ್ಲಿ ವಾಪಸ್ ಎಂದಿದ್ದ ಅಂಜು, ಪಾಕಿಸ್ತಾನದಲ್ಲಿ ಬಂಧಿಯಾದಳೇ? ಅಥವಾ ಐಎಸ್ಐ ಅಂಜು ಬ್ರೈನ್ ವಾಶ್ ಮಾಡಿ ಪಾಕಿಸ್ತಾನಕ್ಕೆ ಕರೆಯಿಸಿಕೊಳ್ಳಲಾಗಿತ್ತಾ? ಇದೀಗ ಅಂಜು-ನಸ್ರುಲ್ಲಾ ಮದುವೆ ಬೆನ್ನಲ್ಲೇ ಹಲವು ಅನುಮಾನಗಳು ಕಾಡತೊಡಗಿದೆ. ಸಾಮಾಜಿಕ ಜಾಲತಾಣದಲ್ಲಿನ ಪರಿಚಯ, ಗೆಳೆತನ, ಪ್ರೀತಿ ಹಿಂದೆ ಪಾಕಿಸ್ತಾನದ ಸಂಚಿನ ಅನುಮಾನ ಹೆಚ್ಚಾಗ ತೊಡಗಿದೆ. ಇದರ ಬೆನ್ನಲ್ಲೇ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅಂಜು ಪ್ರಕರಣದ ಸಂಪೂರ್ಣ ತನಿಖೆಗೆ ಆದೇಶಿಸಿದ್ದಾರೆ.
ಅಂಜು ಮೂಲ ರಾಜಸ್ಥಾನ. 34ವರ್ಷದ ವಿವಾಹಿತ ಮಹಿಳೆ, ಇಬ್ಬರು ಮಕ್ಕಳನ್ನು ಬಿಟ್ಟು ನೇರವಾಗಿ ಪಾಕಿಸ್ತಾನದ ಖೈಬರ್ ಪಖ್ತುಂಕ್ವಾಗೆ ತೆರಳಿದ್ದಳು. ಒಂದೇ ವಾರದಲ್ಲಿ ಮರಳಿ ಬರುತ್ತೇನೆ ಎಂದು ಮಕ್ಕಳಲ್ಲಿ ಹೇಳಿದ್ದ ಅಂಜು, ಸೋಶಿಯಲ್ ಮಿಡಿಯಾದಲ್ಲಿ ಪರಿಚಯವಾಗಿದ್ದ ನಾಸ್ರುಲ್ಲಾ ಭೇಟಿಗೆ ಪಾಕಿಸ್ತಾನ ಪ್ರವಾಸ ಮಾಡಿದ್ದಳು. ಇತ್ತ ಅಮ್ಮನ ಬರುವಿಕೆಗಾಗಿ ಕಾದ ಮಕ್ಕಳು ನಿರಾಸೆಗೊಂಡಿದ್ದಾರೆ. ಗೆಳೆಯ, ಇಲ್ಲೊಂದು ಮದುವೆ ಕಾರ್ಯಕ್ರಮ, ಮೂರು ದಿನಕ್ಕೆ ವಾಪಸ್ ಎಂದಿದ್ದ ಅಂಜು ನಾಸ್ರುಲ್ಲಾ ಜೊತೆ ಮದುವೆಯಾಗಿದ್ದಾಳೆ. ಬಳಿಕ ಇಸ್ಲಾಂಗೆ ಮತಾಂತರವಾಗಿದ್ದಾಳೆ. ಇಷ್ಟೇ ಅಲ್ಲ ಇದೀಗ ಭಾರತದ ಅಂಜು, ಪಾಕಿಸ್ತಾನದಲ್ಲಿ ಫಾತಿಮಾ ಆಗಿ ಮತಾಂತರಗೊಂಡಿದ್ದಾಳೆ.
ಅಮ್ಮನಿಗೆ ಕಾಯುತ್ತಿದ್ದ ಮಕ್ಕಳು ತಬ್ಬಲಿ, ಇಸ್ಲಾಂಗೆ ಮತಾಂತರವಾಗಿ ಪಾಕ್‌ನ ನಾಸ್ರುಲ್ಲಾ ಮದ್ವೆಯಾದ ಅಂಜು!
ಅಂಜು ನಸ್ರುಲ್ಲಾ ಮದುವೆಯಾದ ಬೆನ್ನಲ್ಲೇ ಪಾಕಿಸ್ತಾನದ ಉದ್ಯಮಿ, ನವ ದಂಪತಿಗಳನ್ನು ಭೇಟಿಯಾಗಿ ಹಣ , ಚೆಕ್, ಮನೆ ಸೇರಿದಂತೆ ಕೆಲ ದುಬಾರಿ ಉಡುಗೊರೆಗಳನ್ನು ನೀಡಿದ್ದಾರೆ. ಈ ಎಲ್ಲಾ ಘಟನೆಗಳ ಹಿಂದೆ ಷಡ್ಯಂತ್ರ ಕಾಣಿಸುತ್ತಿದೆ ಎಂದು ನರೋತ್ತಮ್ ಮಿಶ್ರಾ ಹೇಳಿದ್ದಾರೆ. ಅಂಜು ವಿಷಯದಲ್ಲಿ ವಿದೇಶಿಗರ ಕೈವಾಡದ ಬಗ್ಗೆ ತನಿಖೆ ಮಾಡಲಾಗುವುದು ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು,‘ಅಂಜು ಅವರು ಪಾಕಿಸ್ತಾನಕ್ಕೆ ತೆರಳಿ ಅಲ್ಲಿ ಉಡುಗೊರೆಗಳನ್ನು ಸ್ವೀಕರಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ವಿಷಯ ಗ್ವಾಲಿಯರ್ ಜಿಲ್ಲೆಗೆ ಸಂಬಂಧಿಸಿದ್ದರಿಂದ, ತನಿಖೆ ನಡೆಸುವಾಗ ಎಲ್ಲ ಆಯಾಮಗಳನ್ನು ಸೂಕ್ಷ್ಮವಾಗಿ ಪರೀಕ್ಷೆ ನಡೆಸಲು ವಿಶೇಷ ಪೊಲೀಸ್ ಪಡೆಗೆ ನಿರ್ದೇಶನ ನೀಡಲಾಗಿದೆ. ಜೊತೆಗೆ ವಿದೇಶಿಗರ ಕೈವಾಡ ಇದೆಯೋ ಇಲ್ಲವೇ ಎಂಬುದರ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿದೆ’ ಎಂದರು.
ಸೀಮಾ, ಅಂಜು ಬಳಿಕ ಭಾರತ-ಬಾಂಗ್ಲಾ ಲವ್ ಸ್ಟೋರಿ, ಆದ್ರೆ ಕಹಾನಿಯಲ್ಲಿ ಹಲವು ಟ್ವಿಸ್ಟ್!
ಪಾಕಿಸ್ತಾನಕ್ಕೆ ಹೋಗಿ ಆತನನ್ನೇ ಮದುವೆಯಾದ ಭಾರತೀಯ ಮಹಿಳೆ ಅಂಜು ಇಸ್ಲಾಂಗೆ ಮತಾಂತರವಾಗಿದ್ದಕ್ಕಾಗಿ ಆಕೆಗೆ ಹಣ ಮತ್ತು ಭೂಮಿಯನ್ನು ಉಡುಗೊರೆಯಾಗಿ ನೀಡಲಾಗಿದೆ. ಖೈಬರ್ ಪಕ್ತುಂಖ್ವಾ ಮೂಲದ ರಿಯಲ್ ಎಸ್ಟೇಟ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹ್ಸಿನ್ ಖಾನ್ ಅಬ್ಬಾಸಿ, ಫಾತಿಮಾ ಎಂದು ಹೆಸರು ಬದಲಿಸಿಕೊಂಡಿರುವ ಅಂಜುಳನ್ನು ಭೇಟಿಯಾಗಿ ಚೆಕ್ ಮತ್ತು 2,722 ಚದರ ಅಡಿ ಜಾಗದ ದಾಖಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ‘ಅಂಜುಳನ್ನು ನಮ್ಮ ಧರ್ಮಕ್ಕೆ ಸ್ವಾಗತಿಸಿ ಈ ಉಡುಗೊರೆ ನೀಡಿದ್ದೇವೆ’ ಎಂದು ಅಬ್ಬಾಸಿ ಹೇಳಿದ್ದಾರೆ.