ವಿಜಯವಾಡ(ಏ.28): ಮಾರಕ ಕೊರೋನಾ ವೈರಸ್‌ ಆಂಧ್ರಪ್ರದೇಶದ ರಾಜಭವನಕ್ಕೂ ಕಾಲಿಟ್ಟಿದ್ದು, ರಾಜ್ಯಪಾಲ ವಿಶ್ವಭೂಷಣ್‌ ಹರಿಚಂದನ್‌ ಅವರ ಮುಖ್ಯ ಭದ್ರತಾ ಅಧಿಕಾರಿ ಮತ್ತು ಒಡಿಶಾ ಮೂಲದ ಬಾಣಸಿಗ ಸೇರಿ 4 ಸಿಬ್ಬಂದಿಗೆ ಸೋಂಕಿರುವುದು ಭಾನುವಾರ ದೃಢಪಟ್ಟಿದೆ. ಉಳಿದ ಇಬ್ಬರು ಅಟೆಂಡೆಂಟ್‌ ಮತ್ತು ನರ್ಸ್‌ ಎಂದು ತಿಳಿದುಬಂದಿದೆ. 

ಮೂಲಗಳ ಪ್ರಕಾರ, 85 ವರ್ಷದ ರಾಜ್ಯಪಾಲರ ಗಂಟಲು ದ್ರವ ಮಾದರಿಯನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿದ್ದು, ಫಲಿತಾಂಶಕ್ಕಾಗಿ ಎದುರು ನೋಡಲಾಗುತ್ತಿದೆ. ಕಳೆದ ವಾರ ಪರೀಕ್ಷೆ ವೇಳೆ ನೆಗೆಟಿವ್‌ ಫಲಿತಾಂಶ ಬಂದಿತ್ತು. ವಿಜಯವಾಡದಲ್ಲಿರುವ ರಾಜಭವನದ ಸುತ್ತ ಮುನ್ನೆಚ್ಚರಿಕಾ ಕ್ರಮವಾಗಿ ಸೋಡಿಯಂ ಹೈಫೋಕ್ಲೋರೈಡ್ ಸಿಂಪಡಿಸಲಾಗಿದೆ. 

ಅಮೆರಿಕದ ಪ್ರತಿ 7 ಕೊರೋನಾ ವೀರರಲ್ಲಿ ಒಬ್ಬ ಭಾರತೀಯ!

ಆಂಧ್ರದ ಆಡಳಿತರೂಢ ಪಕ್ಷದ ನಾಯಕನ ಕುಟುಂಬದ ಆರು ಮಂದಿಗೆ ಕೊರೋನಾ ಸೋಂಕು ತಗುಲಿದೆ. ಕರ್ನೂಲ್‌ ಸಂಸದ ಡಾ.ಸಂಜೀವ್‌ ಕುಮಾರ್‌ ಅವರ ಕುಟುಂಬಕ್ಕೂ ಕೊರೋನಾ ಸೋಂಕು ತಗುಲಿದ್ದು, ಅವರ 83 ವರ್ಷದ ತಂದೆಯ ಪರಿಸ್ಥಿತಿ ಗಂಭೀರವಾಗಿದೆ. ಕರ್ನೂಲ್‌ ಸಂಸದ ಡಾ.ಸಂಜೀವ್‌ ಕುಮಾರ್‌ ಯೂರಿಯೋಲಾಜಿಸ್ಟ್ ಆಗಿ ಕಾರ್ಯ ನಿರ್ವಹಿಸಿದ ಅನುಭವವಿದೆ. ಇನ್ನು ಇನ್ನು ಅವರ ಪತ್ನಿ ಕೂಡಾ ವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆಂಧ್ರದಲ್ಲೇ ಕೊರೋನಾ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ಈ ಪೈಕಿ 231 ಜನರು ಕೊರೋನಾದಿಂದ ಗುಣಮುಖರಾಗಿದ್ದು, 31 ಸಾವು ಸಂಭವಿಸಿದೆ. ಸ್ವತಃ ಜಗನ್‌ ಮೋಹನ್ ರೆಡ್ಡಿ ಕೊರೋನಾ ಟೆಸ್ಟ್ ಮಾಡಿಸಿಕೊಂಡು ಗಮನ ಸೆಳೆದಿದ್ದರು.