ವಿಜಯವಾಡ(ಡಿ.20): ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ಉಂಟಾದ ಆರ್ಥಿಕ ಆಘಾತದಿಂದ ಇನ್ನೂ ಚೇತರಿಸಿಕೊಳ್ಳದ ಚಿತ್ರಮಂದಿರಗಳ ನೆರವಿಗೆ ಆಂಧ್ರಪ್ರದೇಶ ಸರ್ಕಾರ ಧಾವಿಸಿದೆ. ಮುಖ್ಯಮಂತ್ರಿ ವೈ.ಎಸ್‌.ಜಗನ್ಮೋಹನ ರೆಡ್ಡಿ ನೇತೃತ್ವದಲ್ಲಿ ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚಿತ್ರಮಂದಿರಗಳಿಗೆ ಆರ್ಥಿಕ ಪ್ಯಾಕೇಜ್‌ ನೀಡಲು ನಿರ್ಧರಿಸಲಾಗಿದೆ. ಇದೇ ವೇಳೆ, ಕನ್ನಡ ಚಿತ್ರರಂಗಕ್ಕೂ ಕರ್ನಾಟಕ ಸರ್ಕಾರ ಪ್ಯಾಕೇಜ್‌ ಒದಗಿಸುತ್ತಾ ಎಂಬ ನಿರೀಕ್ಷೆ ಚಿತ್ರೋದ್ಯಮದಿಂದ ವ್ಯಕ್ತವಾಗತೊಡಗಿದೆ.

ವಿದ್ಯುತ್‌ ಶುಲ್ಕ ವಿನಾಯ್ತಿ: ಆಂಧ್ರ ಪ್ಯಾಕೇಜ್‌ನಡಿ, ರಾಜ್ಯ ಸರ್ಕಾರವು ಎಲ್ಲಾ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್‌ಗಳಿಗೆ ಕಳೆದ ಏಪ್ರಿಲ್‌, ಮೇ ಹಾಗೂ ಜೂನ್‌ ತಿಂಗಳ ವಿದ್ಯುತ್‌ ಬಿಲ್‌ನ ಫಿಕ್ಸೆಡ್‌ ಚಾಜ್‌ರ್‍ ಮನ್ನಾ ಮಾಡಿದೆ. ಜೊತೆಗೆ ಎಲ್ಲಾ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್‌ಗಳಿಗೆ ಆರು ತಿಂಗಳ ವಿದ್ಯುತ್‌ ಬಿಲ್‌ ಪಾವತಿಯನ್ನು ಮುಂದೂಡಲಾಗಿದೆ. ರಾಜ್ಯಾದ್ಯಂತ ಇರುವ 1100 ಸಿನಿಮಾ ಥಿಯೇಟರ್‌ಗಳಿಗೆ ಇದರ ಲಾಭ ಸಿಗಲಿದೆ.

ಹಾಗೆಯೇ ಎ ಮತ್ತು ಬಿ ದರ್ಜೆಯ ಚಿತ್ರಮಂದಿರಗಳನ್ನು ಪುನಾರಂಭಿಸಲು ಸರ್ಕಾರ 10 ಲಕ್ಷ ರು. ಸಾಲ ನೀಡಲಿದೆ. ಸಿ ದರ್ಜೆಯ ಚಿತ್ರಮಂದಿರಗಳನ್ನು ಪುನಾರಂಭಿಸಲು 5 ಲಕ್ಷ ರು. ಸಾಲ ನೀಡಲಿದೆ. ಈ ಸಾಲದ ಮರುಪಾವತಿಯನ್ನು ಆರು ತಿಂಗಳು ಮುಂದೂಡಿಕೆ ಮಾಡಿಕೊಳ್ಳುವ ಸೌಲಭ್ಯ ನೀಡಲಾಗಿದೆ. ಜೊತೆಗೆ ಈ ಸಾಲಕ್ಕೆ ಶೇ.4.5ರಷ್ಟುಬಡ್ಡಿ ಸಬ್ಸಿಡಿಯನ್ನು ಸರ್ಕಾರ ನೀಡಲಿದೆ. ಇದರಿಂದ ಸರ್ಕಾರಕ್ಕೆ 4.18 ಕೋಟಿ ರು. ಹೊರೆಯಾಗಲಿದೆ ಎಂದು ಮಾಹಿತಿ ಸಚಿವ ಪಿ.ವೆಂಕಟರಾಮಯ್ಯ ತಿಳಿಸಿದ್ದಾರೆ. ಆಂಧ್ರದಲ್ಲಿ ಮಾಚ್‌ರ್‍ನಲ್ಲಿ ಬಂದ್‌ ಆಗಿರುವ ಅನೇಕ ಚಿತ್ರಮಂದಿರಗಳು ಆರ್ಥಿಕ ಸಂಕಷ್ಟದಿಂದಾಗಿ ಇನ್ನೂ ಪುನಾರಂಭವಾಗಿಲ್ಲ.