Asianet Suvarna News Asianet Suvarna News

ಆಂಧ್ರದ ಸಿಎಂ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿರುವ ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್

ಇಂದು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಎನ್. ಚಂದ್ರಬಾಬು ನಾಯ್ಡು ಅವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಇವರ ಜೊತೆಗೆ ಜನ ಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಸೇರಿದಂತೆ ಒಟ್ಟು 25 ಜನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Chandrababu Naidu and Pawan Kalyan to be sworn as Andhra Pradesh CM as well as DCM Today akb
Author
First Published Jun 12, 2024, 11:29 AM IST

ವಿಜಯವಾಡ: ಇಂದು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಎನ್. ಚಂದ್ರಬಾಬು ನಾಯ್ಡು ಅವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಇವರ ಜೊತೆಗೆ ಜನ ಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಸೇರಿದಂತೆ ಒಟ್ಟು 25 ಜನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆಂಧ್ರದಲ್ಲಿ ಅಧಿಕಾರಕ್ಕೇರಿರುವ ಎನ್‌ಡಿಎ ಮೈತ್ರಿಕೂಟದ ಈ ಸಮ್ಮಿಶ್ರ ಸರ್ಕಾರದಲ್ಲಿ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರು ಆಂಧ್ರಪ್ರದೇಶ ಸರ್ಕಾರದಲ್ಲಿರುವ ಏಕೈಕ ಉಪಮುಖ್ಯಮಂತ್ರಿಯಾಗಲಿದ್ದಾರೆ. 

ಇಂದು ಮುಂಜಾನೆ ಪ್ರಮಾಣ ವಚನ ಸ್ವೀಕರಿಸಲಿರುವ 24 ಸಚಿವರ ಪಟ್ಟಿ ಪ್ರಕಟಿಸಲಾಗಿದೆ.  ಈ 24 ಸಚಿವರಲ್ಲಿ ಜನಸೇನಾದ ಮೂವರು ಹಾಗೂ ಬಿಜೆಪಿಯ ಒಬ್ಬರು ಸೇರಿದ್ದಾರೆ. ಉಳಿದ ಎಲ್ಲರೂ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಇಂದು ಪ್ರಮಾಣವಚನ ಸ್ವೀಕರಿಸಲಿರುವ ಸಚಿವರುಗಳ ಪಟ್ಟಿಯನ್ನು ಚಂದ್ರಬಾಬು ನಾಯ್ಡು ಅವರು ಈಗಾಗಲೇ ಆಂಧ್ರಪ್ರದೇಶ ರಾಜ್ಯಪಾಲರಾದ ಅಬ್ದುಲ್ ನಜೀರ್ ಅವರಿಗೆ ಕಳುಹಿಸಿಕೊಟ್ಟಿದ್ದಾರೆ. ಇಂದು ವಿಜಯವಾಡದ ಗನ್ನವರಂ ಏರ್‌ಪೋರ್ಟ್ ಬಳಿ ಇರುವ ಕೆಸರಪಲ್ಲಿ ಐಟಿ ಪಾರ್ಕ್‌ನಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು,  ರಾಜ್ಯಪಾಳರಾದ ಅಬ್ದುಲ್ ನಜೀರ್ ಅವರು ಸಿಎಂ, ಡಿಸಿಎಂ ಸಚಿವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. 

ಚಂದ್ರಬಾಬು ನಾಯ್ಡು ಕ್ಯಾಬಿನೆಟ್‌ಗೆ ಚಂದ್ರಬಾಬು ಅವರ ಪುತ್ರ, ಟಿಡಿಪಿ ಜನರಲ್ ಸೆಕ್ರೆಟರಿ ನಾರಾ ಲೋಕೇಶ್, ಟಿಡಿಪಿ ಆಂಧ್ರ ಪ್ರದೇಶ ಘಟಕದ ಅಧ್ಯಕ್ಷ ಕೆ. ಅಚ್ಚಂನಾಯ್ಡು ಹಾಗೂ ಜನಸೇನಾ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯ ಚೇರ್‌ಮ್ಯಾನ್‌ ನಂದೆಂಡ್ಲಾ ಮನೋಹರ್ ಸೇರಿದಂತೆ ಒಟ್ಟು 24 ಜನ ಸಚಿವರಾಗಿ ಸೇರಲಿದ್ದಾರೆ.  

74 ವರ್ಷದ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷವೂ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿತ್ತು. ಇನ್ನು ಇಂದು ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ಎನ್‌ಡಿಎ ಮೈತ್ರಿಕೂಟದ ನಾಯಕರಾದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಜೆ.ಪಿ, ನಡ್ಡಾ, ಹಾಗೂ ಇತರ ಕೇಂದ್ರ ಸಚಿವರು, ಎನ್‌ಡಿಎ ಮೈತ್ರಿಕೂಟದ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. 

ನಿನ್ನೆ ಸಂಜೆ ಅಮಿತ್ ಶಾ ಹಾಗೂ ಜೆಪಿ ನಡ್ಡಾ ಜೊತೆಗಿನ ಮಾತುಕತೆ ನಂತರ ಚಂದ್ರಬಾಬು ನಾಯ್ಡು ಅವರು ಸಚಿವರ ಲಿಸ್ಟ್‌ನ್ನು ಅಂತಿಮಗೊಳಿಸಿದ್ದರು. ಶಾಸಕ ಸತ್ಯ ಕುಮಾರ್ ಯಾದವ್ ಅವರು ಆಂಧ್ರ ಪ್ರದೇಶ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವ  ಬಿಜೆಪಿಯ ಏಕೈಕ ನಾಯಕರಾಗಿದ್ದಾರೆ. ಹಾಗೆಯೇ ಜನಸೇನಾ ಪಕ್ಷದ ಪವನ್ ಕಲ್ಯಾಣ್ ನಂದೆಂಡ್ಲಾ ಮನೋಹರ್ ಹಾಗೂ ಕಂಡುಲಾ ದುರ್ಗೇಶ್ ಅವರು ಕೂಡ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 

ನಾಯ್ಡು ಅವರ ಸಚಿವ ಸಂಪುಟದಲ್ಲಿ 17 ಹೊಸ ಮುಖಗಳಿಗೆ ಜಾಗ ನೀಡಲಾಗಿದೆ. ಉಳಿದವರು ಈ ಹಿಂದೆಯೂ ಸಚಿವರಾಗಿ ಕೆಲಸ ಮಾಡಿದ ಅನುಭವ ಇರುವವರಾಗಿದ್ದಾರೆ.  ಹಾಗೆಯೇ ಸಚಿವ ಸಂಪುಟದಲ್ಲಿ ಮೂವರು ಮಹಿಳೆಯರಿಗೂ ಸ್ಥಾನ ನೀಡಲಾಗಿದೆ. ಹಿರಿಯ ನಾಯಕ ಎನ್ ಮೊಹಮ್ಮದ್ ಫಾರೂಕ್ ಅವರು ನಾಯ್ಡು ಸಂಪುಟದಲ್ಲಿರುವ ಏಕೈಕ ಮುಸ್ಲಿಂ ಸಚಿವರಾಗಿದ್ದಾರೆ.

ಹಾಗೆಯೇ ಸಚಿವರ ಪಟ್ಟಿಯಲ್ಲಿ 8 ಜನ ಹಿಂದುಳಿದ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಾಗೆಯೇ ಮೂವರು ಪರಿಶಿಷ್ಟ ಜಾತಿಗೆ ಹಾಗೂ ಒಬ್ಬರು ಪರಿಶಿಷ್ಟ ಸಮುದಾಯಕ್ಕೆ ಸೇರಿದವರಾಗಿದ್ದಾರೆ.  ಹಾಗೆಯೇ ಕಮ್ಮ ಹಾಗೂ ಕಾಪು ಸಮುದಾಯದ ತಲಾ ನಾಲ್ವರನ್ನು ನಾಯ್ಡು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಮೂವರು ರೆಡ್ಡಿ ಸಮುದಾಯದವರು ಒಬ್ಬರು ವೈಶ್ಯ(ವ್ಯಾಪಾರಿ) ಸಮುದಾಯಕ್ಕೆ ಸಮುದಾಯಕ್ಕೆ ಸೇರಿದವರಿಗೆ ಸಂಪುಟದಲ್ಲಿ ಜಾಗ ನೀಡಲಾಗಿದೆ. ಮುಖ್ಯಮಂತ್ರಿಯಾಗಿರುವ ಚಂದ್ರಬಾಬು ನಾಯ್ಡು ಅವರು ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಪ್ರಬಲವಾಗಿರುವ ಕಮ್ಮ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಾಗೆಯೇ ನಟ ಪವನ್ ಕಲ್ಯಾಣ್ ಅವರು ಕಾಪು ಸಮುದಾಯಕ್ಕೆ ಸೇರಿದ್ದಾರೆ. 

Latest Videos
Follow Us:
Download App:
  • android
  • ios