ವಂದೇ ಭಾರತ್ ಟ್ರೈನ್‌ನಲ್ಲಿ ಸೆಲ್ಫಿ ತೆಗೆಯಲು ಹೋಗಿ ರೈಲಿನೊಳಗೆ ಸಿಲುಕಿದ ಭೂಪ..!
ವಂದೇ ಭಾರತ್ ರೈಲಿನಲ್ಲಿ ಸೆಲ್ಫಿ ತೆಗೆದುಕೊಳ್ಳಲೆಂದು ಟ್ರೈನ್ ಹತ್ತಿದ ವ್ಯಕ್ತಿಯೊಬ್ಬರು, ರೈಲಿನೊಳಗೆ ಸಿಲುಕಿಕೊಳ್ಳುವಂತಾಗಿದೆ. ಇದಕ್ಕೆ ಕಾರಣ ಸ್ವಯಂಚಾಲಿತ ರೈಲಿನ ಬಾಗಿಲುಗಳು ಬಂದ್ ಆಗಿರುವುದು.
ವಂದೇ ಭಾರತ್ ರೈಲು ಇತ್ತೀಚೆಗೆ ಉತ್ತರ ಭಾರತದಲ್ಲಿ ಮಾತ್ರವಲ್ಲ ದಕ್ಷಿಣ ಭಾರತದಲ್ಲೂ ಉದ್ಘಾಟನೆಯಾಗಿದ್ದು, ಹಲವು ದಿನಗಳಿಂದ ಸಂಚರಿಸುತ್ತಿದೆ. ಈ ರೈಲು ಅತ್ಯಾಧುನಿಕ ಸೌಲಭ್ಯಗಳಿಗೆ ಹೆಸರುವಾಸಿಯಾಗಿದೆ. ಈ ಹಿನ್ನೆಲೆ ಈ ಟ್ರೈನ್ ಹಲವರ ಆಕರ್ಷಣೆಯ ಕೆಂದ್ರಬಿಂದುವಾಗಿದೆ. ಈ ಹಿನ್ನೆಲೆ ವಂದೇ ಭಾರತ್ ಟ್ರೈನ್‌ನಲ್ಲಿ ಒಮ್ಮೆಯಾದರೂ ಪ್ರಯಾಣಿಸಲೆಂದೇ ಹಲವರು ರೈಲಿನಲ್ಲಿ ಹೋಗುತ್ತಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ರೈಲಿನ ಹಾಗೂ ತಮ್ಮ ಪ್ರಯಾಣದ ಫೊಟೋ, ವಿಡಿಯೋಗಳನ್ನೂ ಹಲವರು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಇಲ್ಲೊಬ್ಬರು ರೈಲಿನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಅದರೊಳಗೇ ಸಿಲುಕಿಕೊಂಡಿದ್ದಾರೆ.
ಹೌದು, ಆಂಧ್ರ ಪ್ರದೇಶದ (Andhra Pradesh) ವ್ಯಕ್ತಿಯೊಬ್ಬರು ಇತ್ತೀಚೆಗೆ ಉದ್ಘಾಟನೆಯಾದ ವಿಶಾಖಪಟ್ಟಣದಿಂದ (Visakhapatnam) ಸಿಕಂದರಾಬಾದ್‌ವರೆಗೆ (Secunderabad) ಚಲಿಸುವ ವಂದೇ ಭಾರತ್ ರೈಲನ್ನು (Vande Bharat Train) ಹತ್ತಿದ್ದಾರೆ. ಆದರೆ, ಇವರು ಕೇವಲ ಸೆಲ್ಫಿ (Selfie) ತೆಗೆದುಕೊಳ್ಳಲೆಂದು ಮಾತ್ರ ಈ ಟ್ರೈನ್ ಹತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಅವರು ರೈಲಿನೊಳಗೆ ಸಿಲುಕಿಕೊಳ್ಳುವಂತಾಯ್ತು. ಇದಕ್ಕೆ ಕಾರಣ ವಂದೇ ಭಾರತ್ ರೈಲಿನ ಸ್ವಯಂಚಾಲಿತ ಬಾಗಿಲುಗಳು (Automatic Doors) ಬಂದ್ ಆಗಿವೆ. ಆಂಧ್ರದ ರಾಜಮುಂಡ್ರಿ ರೈಲು ನಿಲ್ದಾಣದಲ್ಲಿ (Rajahmundry Railway Station) ಸೆಲ್ಫಿ ತೆಗೆದುಕೊಳ್ಳಲೆಂದು ಅವರು ರೈಲು ಹತ್ತಿದ್ದರು ಎಂದು ತಿಳಿದುಬಂದಿದೆ.
ಇದನ್ನು ಓದಿ: ಉದ್ಘಾಟನೆಗೂ ಮುನ್ನವೇ ವಿಶಾಖಪಟ್ಟಣದಲ್ಲಿ ವಂದೇ ಭಾರತ್ ರೈಲಿಗೆ ಕಲ್ಲೆಸೆದ ಕಿಡಿಗೇಡಿಗಳು..!
ಅವರು ರೈಲಿನಲ್ಲಿ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದ ವೇಳೆ, ನಿರ್ದಿಷ್ಟ ಸಮಯದ ನಂತರ ರೈಲಿನ ಬಾಗಿಲುಗಳು ಬಂದ್ ಆಗಿವೆ. ಆ ಕಾರಣ ಅವರು ವಿಜಯವಾಡವರೆಗೆ ರೈಲಿನಲ್ಲಿ ಪ್ರಯಾಣಿಸಿದ್ದು, ನಂತರ ಅಲ್ಲಿಂದ ಕೆಳಕ್ಕೆ ಇಳಿದು ಮತ್ತೆ ವಾಪಸ್ ರಾಜಮುಂಡ್ರಿಗೆ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಜಯವಾಡ ಮುಂದಿನ ನಿಲ್ದಾಣ ಎಂದು ರೈಲಿನ ಟಿಕೆಟ್ ಕಲೆಕ್ಟರ್ ಒಬ್ಬರು ಹೇಳಿರುವುದು ಸಹ ಈ ವಿಡಿಯೋದಲ್ಲಿ ಸೆರೆಯಾಗಿದೆ.
ಜನವರಿ 16 ರಂದು ವ್ಯಕ್ತಿಯೊಬ್ಬರು ರಾಜಮುಂಡ್ರಿ ರೈಲು ನಿಲ್ದಾಣದಲ್ಲಿ ಸೆಲ್ಫಿ ತೆಗೆಯಲು ಹೋದಾಗ ಈ ಘಟನೆ ನಡೆದಿದೆ. ಅವರು ರೈಲಿನಿಂದ ಇಳಿಯಲು ಪ್ರಯತ್ನಿಸಿದರು. ಆದರೆ, ಅಷ್ಟರೊಳಗೆ ರೈಲಿನ ಆಟೋಮ್ಯಾಟಿಕ್ ಡೋರ್‌ಗಳು ಬಂದ್ ಆಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆಯ ಮುಖಯ ಪಿಆರ್‌ಒ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಆತನನ್ನು ನೋಡಿದರು, ನಂತರ ವಿಚಾರಣೆ ನಡೆಸಿದಾಗ ಅವರು ನಡೆದ ಘಟನೆಯನ್ನು ವಿವರಿಸಿದ್ದಾರೆ.
ಇದನ್ನೂ ಓದಿ: ವಂದೇ ಭಾರತ್‌ಗೆ ಕಲ್ಲೆಸೆದ ಮೂವರು ಬಾಲಕರ ಬಂಧನ
ಆದರೆ, ಈ ಘಟನೆ ನಡೆದರೂ ವ್ಯಕ್ತಿಗೆ ಯಾವುದೇ ದಂಡ ಹಾಕಿಲ್ಲ. ಅಲ್ಲದೆ, ಅವರು ರಾಜಮುಂಡ್ರಿಗೆ ಹೇಗೆ ವಾಪಸ್ ಹೋದರು ಎಂಬುದು ನನ್ನ ಗಮನಕ್ಕೆ ಬಂದಿಲ್ಲ ಎಂದೂ ರೈಲ್ವೆ ಅಧಿಕಾರಿ ಹೇಳಿದ್ದಾರೆ. ಅಲ್ಲದೆ, ರಾಜಮುಂಡ್ರಿಯಂದ ವಿಜಯವಾಡಕ್ಕೆ ಅವರು ವಂದೇ ಭಾರತ್ ರೈಲಿನ ಟಿಕೆಟ್ ದರ ನೀಡಿ ಪ್ರಯಾಣ ಮಾಡಿದರು ಎಂದೂ ಈ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಪ್ರಧಾನಿ ಮೋದಿ ಮಕರ ಸಂಕ್ರಾಂತಿ ದಿನವಾದ ಭಾನುವಾರ ತೆಲಂಗಾಣದ ಸಿಕಂದರಾಬಾದ್‌ನಿಂದ ಆಂಧ್ರದ ವಿಶಾಖಪಟ್ಟಣದವರೆಗೆ ಚಲಿಸುವ ರೈಲನ್ನು ವರ್ಚುವಲ್ ಆಗಿ ಹಸಿರು ನಿಶಾನೆ ತೋರಿದ್ದರು. ಬಳಿಕ, ಜನವರಿ 16 ರಿಂದ ರೈಲು ಸಂಚಾರ ಆರಂಭವಾಗಿದ್ದು, ಶನಿವಾರದಿಂದಲೇ ಬುಕ್ಕಿಂಗ್ ಆರಂಭವಾಗಿದೆ. ಈ ರೈಲು 14 ಎಸಿ ಚೇರ್ ಕಾರಿನ ಬೋಗಿಗಳು ಹಾಗೂ ಎರಡು ಎಕ್ಸಿಕ್ಯುಟಿವ್ ಎಸಿ ಚೇರ್ ಕಾರಿನ ಬೋಗಿಗಳನ್ನು ಹೊಂದಿದ್ದು, ಇದರಲ್ಲಿ 1,128 ಪ್ರಯಾಣಿಕರು ಸಂಚಾರ ಮಾಡಬಹುದಾಗಿದೆ. ಸಿಕಂದರಾಬಾದ್‌ನಿಂದ ವಿಶಾಖಪಟ್ಟಣದವರೆಗೆ ಸಂಚರಿಸುವ ಈ ರೈಲು ಪ್ರಯಾಣಿಕರಿಗೆ ವೇಗದ ಪ್ರಯಾಣ ಸೌಲಭ್ಯವನ್ನೂ ನೀಡುತ್ತದೆ.
ಇದನ್ನೂ ಓದಿ: ಬರಲಿದೆ ಬೈಕ್‌ನಂತೆ ಬಾಗುವ ರೈಲು: 2025ಕ್ಕೆ ಟಿಲ್ಟಿಂಗ್ ರೈಲು ಆಗಮನ