ಹೈದರಾಬಾದ್‌ (ಫೆ.12): ಕೊರೋನಾ ಲಸಿಕೆ ಪಡೆದು ಬಳಿಕ ಮೃತಪಟ್ಟಮುಂಚೂಣಿ ಕಾರ್ಯಕರ್ತೆ ಕುಟಂಬಕ್ಕೆ ಆಂಧ್ರಪ್ರದೇಶ ಸರ್ಕಾರ 50 ಲಕ್ಷ ರು. ಪರಿಹಾರ ಘೋಷಿಸಿದೆ. ಇಲ್ಲಿನ ಶ್ರೀಕಾಕುಲಂ ಜಿಲ್ಲೆಯ ಪಾಲಸ ಮಂಡಲದ ಪಿಲ್ಲಾ ಲಲಿತಾ (28) ಎಂಬ ಮಹಿಳೆ ಭಾನುವಾರ ಸ್ವಯಂ ಪ್ರೇರಿತವಾಗಿ ಲಸಿಕೆ ಪಡೆದಿದ್ದರು. ಬಳಿಕ ಲಲತಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಆಕೆ ಮೃತಪಟ್ಟಿದ್ದರು. ಈ ಬೆನ್ನಲ್ಲೇ ಸಂತ್ರಸ್ತೆಯ ಕುಟಂಬಕ್ಕೆ ಮುಖ್ಯಮಂತ್ರಿಗಳ ವಿಪತ್ತು ನಿಧಿಯಿಂದ 50 ಲಕ್ಷ ರು. ಪರಿಹಾರ ನೀಡುವುದಾಗಿ ಜಗನ್‌ಮೋಹನ್‌ ರೆಡ್ಡಿ ನೇತೃತ್ವದ ಸರ್ಕಾರ ಘೋಷಿಸಿದೆ. ಲಲಿತಾ ಅವರಿಗೆ 8 ವರ್ಷ ಮಗನಿದ್ದಾನೆ.

ದೇಶಾದ್ಯಂತ ನಾಳೆಯಿಂದ 2ನೇ ಡೋಸ್‌ ಲಸಿಕೆ
 
 ಮಹಾಮಾರಿ ಕೊರೋನಾ ವೈರಸ್‌ನಿಂದ ರಕ್ಷಣೆ ಪಡೆಯಲು ಕೊರೋನಾ ಲಸಿಕೆಯ ಮೊದಲ ಡೋಸ್‌ ಪಡೆದವರಿಗೆ ಫೆ.13ರಿಂದ ದೇಶಾದ್ಯಂತ ಲಸಿಕೆಯ 2ನೇ ಡೋಸ್‌ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ. ದೇಶಾದ್ಯಂತ ಲಸಿಕೆ ಅಭಿಯಾನ ಆರಂಭವಾಗಿದ್ದ ಜನವರಿ 16ರ ಮೊದಲ ದಿನವೇ 1.91 ಲಕ್ಷ ಮಂದಿ ವೈದ್ಯರು ಸೇರಿದಂತೆ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿತ್ತು. ಆ ಎಲ್ಲರಿಗೂ ನಾಳೆಯಿಂದಲೇ 2ನೇ ಡೋಸ್‌ ಲಸಿಕೆಯನ್ನು ವಿತರಿಸಲಾಗುತ್ತದೆ. ಇದಕ್ಕಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕೊರೋನಾ: ಫೆ.10ರ ಅಂಕಿ-ಸಂಖ್ಯೆ ತಿಳಿದುಕೊಳ್ಳಿ ..

ಮೊದಲ ಹಂತದಲ್ಲಿ ಲಸಿಕೆ ಪಡೆದವರು 28 ದಿನಗಳ ಬಳಿಕ ತಾವು ಮೊದಲ ಡೋಸ್‌ ಪಡೆದ ಕೇಂದ್ರಗಳಲ್ಲೇ 2ನೇ ಡೋಸ್‌ ಪಡೆಯುವಂತೆ ಆರೋಗ್ಯ ಇಲಾಖೆಯ ಆಯುಕ್ತ ಸೂಚಿಸಿದ್ದಾರೆ. ಜೊತೆಗೆ ಮೊದಲ ಡೋಸ್‌ ಪಡೆಯದ ಆರೋಗ್ಯ ಸಿಬ್ಬಂದಿ ಫೆ.25ರ ಮೊದಲು ಲಸಿಕೆ ಪಡೆಯುವಂತೆ ಅವರು ಇದೇ ವೇಳೆ ತಿಳಿಸಿದ್ದಾರೆ.