Alcohol Free Village: ಇತ್ತೀಚಿನ ದಿನಗಳಲ್ಲಿ ಹುಡುಗ-ಹುಡುಗಿ ಅನ್ನೋ ಭೇದವಿಲ್ಲದೆ ಎಲ್ಲರೂ ಮದ್ಯಕ್ಕೆ ದಾಸರಾಗುತ್ತಿದ್ದಾರೆ. ಒಂದೇ ಒಂದು ದಿನ ಕುಡಿಯದೇ ಇರಲು ಸಾಧ್ಯವಿಲ್ಲ ಎನ್ನುವವರು ಖಂಡಿತವಾಗಿಯೂ ಈ ಹಳ್ಳಿಗೆ ಒಮ್ಮೆ ಭೇಟಿ ನೀಡಲೇಬೇಕು.

ಒಂದು ಕಾಲದಲ್ಲಿ ಕುಡಿಯುವ ಅಭ್ಯಾಸ ಇದ್ದವರನ್ನು ಕೆಟ್ಟದಾಗಿ ನೋಡಲಾಗುತ್ತಿತ್ತು. ಆದರೆ ಈಗ ಅದು ಟ್ರೆಂಡ್ ಆಗಿದೆ. ಕುಡಿಯದವರನ್ನು ವಿಚಿತ್ರವಾಗಿ ನೋಡುತ್ತಾರೆ. ಗಂಡು-ಹೆಣ್ಣು ಭೇದವಿಲ್ಲದೆ ಎಲ್ಲರೂ ಕುಡಿಯುತ್ತಿದ್ದಾರೆ. ಇಂತಹ ದಿನಗಳಲ್ಲಿ ಒಂದು ಗ್ರಾಮ ಈ ವಿಷಯದಲ್ಲಿ ಮಾದರಿಯಾಗಿದೆ. ಎಲ್ಲರೂ ಪಬ್, ಪಾರ್ಟಿ ಎಂದು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದರೆ, ಈ ಗ್ರಾಮಸ್ಥರು ಬಾರ್‌ಗೆ ಹೋಗುವುದಿಲ್ಲ. ಈ ನಿರ್ಧಾರವನ್ನು ಅವರು ನಿನ್ನೆ ಮೊನ್ನೆ ತೆಗೆದುಕೊಂಡಿದ್ದಲ್ಲ, ಬರೋಬ್ಬರಿ 26 ವರ್ಷಗಳಿಂದ ಈ ಹಳ್ಳಿಯಲ್ಲಿ ಯಾರೂ ಮದ್ಯ ಸೇವಿಸಿಲ್ಲ. ಹಾಗಾದರೆ ಆ ಗ್ರಾಮ ಎಲ್ಲಿದೆ? ಅವರು ಯಾಕೆ ಈ ನಿರ್ಧಾರ ತೆಗೆದುಕೊಂಡರು? ಈ ಎಲ್ಲ ವಿಚಾರಗಳನ್ನು ಈಗ ತಿಳಿಯೋಣ.

ಆಂಧ್ರಪ್ರದೇಶದ ಜಂಗಾರೆಡ್ಡಿ ಗೂಡೆಂ ಸಮೀಪದ ಅಮ್ಮಪಾಲೆಂ ಗ್ರಾಮದಲ್ಲಿ 26 ವರ್ಷಗಳಿಂದ ಮದ್ಯಪಾನ ನಿಷೇಧವನ್ನು ಪಾಲಿಸಲಾಗುತ್ತಿದೆ. ಅವರು ತಮ್ಮ ಹಳ್ಳಿಯಲ್ಲಿ ಮದ್ಯ ಮಾರಾಟ ಮಾಡುವುದಿಲ್ಲ. ಬೇರೆಯವರಿಗೂ ಮಾರಾಟ ಮಾಡಲು ಬಿಡುವುದಿಲ್ಲ. ಈ ಗ್ರಾಮಸ್ಥರು ಯಾರೂ ಕುಡಿಯುವುದಿಲ್ಲ, ಯಾರಾದರೂ ಕುಡಿಯುತ್ತಿದ್ದರೆ ಅವರನ್ನು ತಡೆಯುತ್ತಾರೆ. ಈ ಗ್ರಾಮದ ಯಾವುದೇ ಮನೆಗೆ ಹೋಗಿ ಕೇಳಿದರೂ, ನಮ್ಮೂರಿನಂತಹ ಒಳ್ಳೆಯ ಊರು ಇನ್ನೊಂದಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಒಂದು ಕಾಲದಲ್ಲಿ ಮದ್ಯದ ಕಾರಣದಿಂದಾಗಿ ಈ ಗ್ರಾಮದ ಅನೇಕ ಕುಟುಂಬಗಳು ಬೀದಿಗೆ ಬಿದ್ದಿದ್ದವಂತೆ. ತಿನ್ನಲು ಆಹಾರವಿಲ್ಲದೆ, ಆಸ್ತಿಪಾಸ್ತಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದವರು ಹಲವರಿದ್ದರು. ವಿಪರೀತ ಕುಡಿದು ಬಂದು ಹೆಂಡತಿ, ಮಕ್ಕಳನ್ನು ಥಳಿಸುವುದು, ಅವರನ್ನು ಕಡೆಗಣಿಸುವುದು ಮಾಡುತ್ತಿದ್ದರಂತೆ. ಇದರಿಂದ ಬೇಸತ್ತ ಗ್ರಾಮಸ್ಥರು ಮದ್ಯಪಾನ ನಿಷೇಧಿಸುವ ನಿರ್ಧಾರ ಕೈಗೊಂಡರು. ಸುಮಾರು 26 ವರ್ಷಗಳಿಂದ ಇದೇ ನಿಯಮವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಈ ಊರಿನವರು ಮದ್ಯದಿಂದ ದೂರವಿರುವುದಲ್ಲದೆ, ಬೇರೆ ಊರಿನವರು ಬಂದು ತಮ್ಮ ಗ್ರಾಮದಲ್ಲಿ ಕುಡಿಯಲು ಬಿಡುವುದಿಲ್ಲ. ಮನೆಗೆ ಯಾರಾದರೂ ಸಂಬಂಧಿಕರು ಬಂದರೆ ತಂಪು ಪಾನೀಯ ಕೊಡುತ್ತಾರೆ ವಿನಃ ಮದ್ಯದ ಮಾತೇ ಎತ್ತುವುದಿಲ್ಲ.

ಯಾರಾದರೂ ಮದ್ಯ ಸೇವಿಸಿದರೆ ಕಠಿಣ ಶಿಕ್ಷೆ

ಈ ಗ್ರಾಮದ ನಿಯಮಗಳ ಪ್ರಕಾರ, ಯಾರಾದರೂ ಮದ್ಯ ಸೇವಿಸಿದ್ದು ತಿಳಿದರೆ, ಅವರಿಗೆ ತಕ್ಷಣವೇ ದಂಡ ವಿಧಿಸಲಾಗುತ್ತದೆ. ಕೆಲವು ಬಾರಿ ಗ್ರಾಮಸಭೆಯ ಮುಂದೆ ಕ್ಷಮೆಯಾಚಿಸಬೇಕಾಗುತ್ತದೆ. ಪದೇ ಪದೇ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಗ್ರಾಮದ ಹಿರಿಯರು ಎಚ್ಚರಿಸುತ್ತಾರೆ. ಆದರೆ, ಈ ನಿಯಮ ಜಾರಿಗೆ ಬಂದ ನಂತರ ಯಾರೂ ಅದನ್ನು ಮುರಿಯದಿರುವುದು ವಿಶೇಷ. ಈ ಗ್ರಾಮವನ್ನು ನೋಡಿ ಅಕ್ಕಪಕ್ಕದ ಹಳ್ಳಿಗಳೂ ಈ ನಿಯಮ ಪಾಲಿಸಲು ಮುಂದಾಗಿವೆಯಂತೆ. ಈ ನಿರ್ಧಾರದಿಂದಾಗಿ ಅಲ್ಲಿನ ಅನೇಕ ಕುಟುಂಬಗಳು ಸುಧಾರಿಸಿವೆ. ಕುಟುಂಬದಲ್ಲಿ ಕಲಹಗಳು ಕಡಿಮೆಯಾಗಿ, ಆದಾಯವೂ ಕ್ರಮೇಣ ಹೆಚ್ಚಾಗಿದೆ. ಮದ್ಯದಿಂದಾಗಿ ಅನೇಕ ಕುಟುಂಬಗಳು ಸಂಕಷ್ಟ ಎದುರಿಸುತ್ತಿರುವ ಈ ಕಾಲದಲ್ಲಿ, ಈ ಗ್ರಾಮವು ಇತರರಿಗೆ ಮಾದರಿಯಾಗಿ ನಿಂತಿದೆ. ಗ್ರಾಮಸ್ಥರ ಒಗ್ಗಟ್ಟು ಮತ್ತು ಸಾಮಾಜಿಕ ಜವಾಬ್ದಾರಿ ಇದ್ದರೆ ಯಾವುದೇ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು ಎಂಬುದನ್ನು ಈ ಗ್ರಾಮ ನಿರೂಪಿಸಿದೆ.