ರಿಲಯನ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಅವರು ಕೇರಳದ ರಾಜರಾಜೇಶ್ವರಂ ಮತ್ತು ಗುರುವಾಯೂರು ದೇವಾಲಯಗಳಿಗೆ ಭೇಟಿ ನೀಡಿ, 18 ಕೋಟಿ ರೂಪಾಯಿಗೂ ಅಧಿಕ ದೇಣಿಗೆಯನ್ನು ಘೋಷಿಸಿದ್ದಾರೆ.
ಕೇರಳ (ಏ.7): ಕೇರಳದ ಅತ್ಯಂತ ಪುರಾತನ ಮತ್ತು ಪವಿತ್ರ ದೇವಾಲಯಗಳಾದ ರಾಜರಾಜೇಶ್ವರಂ ದೇವಾಲಯ ಮತ್ತು ಗುರುವಾಯೂರು ದೇವಾಲಯಗಳಿಗೆ ರಿಲಯನ್ಸ್ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಭೇಟಿ ನೀಡಿದ್ದಾರೆ. ಈ ವೇಳೆ ಅವರು ದೇವಾಲಯಗಳ ಅಭಿವೃದ್ಧಿ ಹಾಗೂ ಪ್ರಾಣಿಗಳ ರಕ್ಷಣೆಗಾಗಿ ಸುಮಾರು 18 ಕೋಟಿ ರೂಪಾಯಿಗಳಿಗೂ ಅಧಿಕ ನೆರವನ್ನು ಪ್ರಕಟಿಸಿದ್ದಾರೆ. ಏಪ್ರಿಲ್ 2ರಂದು ರಾತ್ರಿ ತಳಿಪರಂಬದ ಐತಿಹಾಸಿಕ ರಾಜರಾಜೇಶ್ವರಂ ದೇವಾಲಯಕ್ಕೆ ಭೇಟಿ ನೀಡಿದ ಅನಂತ್ ಅಂಬಾನಿ, ಪಾರಂಪರಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಅವರು ಪೊನ್ನುಕುಡಂ, ಪಟ್ಟಂ, ತಾಳಿ, ನೆಯ್ಯಮೃತ ಅರ್ಪಿಸಿ, ಅಶ್ವಮೇಧ ನಮಸ್ಕಾರವನ್ನು ನೆರವೇರಿಸಿದರು.
ದೇವಾಲಯದ ಜೀರ್ಣೋದ್ಧಾರ ಕಾರ್ಯಗಳಿಗಾಗಿ ಅವರು 3 ಕೋಟಿ ರೂ.ಗಳ ಚೆಕ್ ಅನ್ನು ದೇವಾಲಯದ ಮಂಡಳಿಗೆ ಹಸ್ತಾಂತರಿಸಿದರು. ಇದಲ್ಲದೆ, ಐತಿಹಾಸಿಕ 'ಪೂರ್ವ ಗೋಪುರ'ದ ಪುನರ್ನಿರ್ಮಾಣಕ್ಕಾಗಿ ಹೆಚ್ಚುವರಿಯಾಗಿ 12 ಕೋಟಿ ರೂ.ಗಳನ್ನು ನೀಡುವುದಾಗಿ ಹೇಳಿದ್ದಾರೆ. ಸುಮಾರು 200 ವರ್ಷಗಳಿಂದ ದುಸ್ಥಿತಿಯಲ್ಲಿದ್ದ ಈ ಗೋಪುರವನ್ನು ಪುನಃಸ್ಥಾಪಿಸುವುದು ಭಕ್ತರಿಗೆ ದೊಡ್ಡ ಮೈಲಿಗಲ್ಲಾಗಲಿದೆ. ಜೊತೆಗೆ ದೇವಾಲಯದ ಆವರಣದಲ್ಲಿ ಪಾರ್ಕಿಂಗ್ ಮತ್ತು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಗುರುವಾಯೂರು ದೇವಾಲಯದಲ್ಲಿ ಪ್ರಾರ್ಥನೆ
ಅದೇ ದಿನ ಸಂಜೆ ಗುರುವಾಯೂರು ದೇವಾಲಯಕ್ಕೆ ಭೇಟಿ ನೀಡಿದ ಅಂಬಾನಿ, ಗುರುವಾಯೂರಪ್ಪನಿಗೆ ಪ್ರಾರ್ಥನೆ ಸಲ್ಲಿಸಿ, ದೇವಾಲಯದ ಟ್ರಸ್ಟ್‌ಗೆ 3 ಕೋಟಿ ರೂ. ದೇಣಿಗೆ ನೀಡಿದರು. ಇಲ್ಲಿ ಅವರನ್ನು ದೇವಾಲಯದ ಅಧ್ಯಕ್ಷ ಎವಿ ಗೋಪಿನಾಥ್ ಮತ್ತು ಅಧಿಕಾರಿಗಳು ಸಾಂಪ್ರದಾಯಿಕ ಗೌರವಗಳೊಂದಿಗೆ ಸ್ವಾಗತಿಸಿದರು.
ಪ್ರಾಣಿ ಕಲ್ಯಾಣಕ್ಕಾಗಿ 'ವಂತರ' ಯೋಜನೆ
ತಮ್ಮ 'ವಂತರ' ಉಪಕ್ರಮದ ಮೂಲಕ ಪ್ರಾಣಿ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಅನಂತ್ ಅಂಬಾನಿ, ಗುರುವಾಯೂರು ದೇವಾಲಯದ ಆನೆಗಳ ಆರೈಕೆಗಾಗಿ ವಿಶೇಷ ಯೋಜನೆಗಳನ್ನು ಘೋಷಿಸಿದ್ದಾರೆ.
ಆನೆಗಳಿಗಾಗಿ ಮೀಸಲಾದ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣ.ಆನೆಗಳನ್ನು ಸರಪಳಿಯಿಂದ ಮುಕ್ತಗೊಳಿಸಿ ಆರಾಮದಾಯಕವಾಗಿ ಇರಿಸಲು ಆಧುನಿಕ ವಸತಿ ವ್ಯವಸ್ಥೆ. ಆನೆಗಳ ಆರೈಕೆಗಾಗಿ ವೈಜ್ಞಾನಿಕ ಮತ್ತು ಕರುಣಾಪೂರ್ಣ ತಾಂತ್ರಿಕ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
"ಭಾರತದ ಆಧ್ಯಾತ್ಮಿಕ ಸಂಪ್ರದಾಯಗಳು ಕೇವಲ ಪ್ರಾರ್ಥನಾ ಸ್ಥಳಗಳಲ್ಲ; ಅವು ನಂಬಿಕೆ, ಸಮುದಾಯ ಮತ್ತು ಪ್ರಕೃತಿಯೊಂದಿಗಿನ ನಮ್ಮ ಆಳವಾದ ಸಂಪರ್ಕವನ್ನು ಪೋಷಿಸುವ ಜೀವಂತ ಸಂಸ್ಥೆಗಳು. ಈ ಪವಿತ್ರ ಪರಂಪರೆಯನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವುದು ಮತ್ತು ಬಲಪಡಿಸುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ," ಎಂದು ಅವರು ತಿಳಿಸಿದರು.ದೇವಾಲಯದ ಆಚರಣೆಗಳಲ್ಲಿ ಆನೆಗಳು ಅವಿಭಾಜ್ಯ ಅಂಗವಾಗಿದ್ದು, ಅವುಗಳನ್ನು ಅತ್ಯಂತ ಗೌರವ, ಕರುಣೆ ಮತ್ತು ವೈಜ್ಞಾನಿಕವಾಗಿ ನೋಡಿಕೊಳ್ಳುವುದು ನಮ್ಮ ಗುರಿಯಾಗಿದೆ ಎಂದು ಅಂಬಾನಿ ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು.


