ಸ್ವಾತಂತ್ರ್ಯ ದಿನದಂದು ಅಮೃತ ಕಲಶ ಯಾತ್ರೆ: 7500 ಸ್ಥಳದಿಂದ ಸಸಿ, ಮಣ್ಣು ಸಂಗ್ರಹ, ಹುತಾತ್ಮರ ಸ್ಮರಣೆ
ಈ ಸಲ ಆಗಸ್ಟ್ 15ರಂದು ನಡೆಯಲಿರುವ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಾರೋಪ ಸಮಾರಂಭವನ್ನು ವಿಶಿಷ್ಟವಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಅದಕ್ಕೂ ಮೊದಲು ‘ನನ್ನ ನೆಲ ನನ್ನ ದೇಶ’ ಅಭಿಯಾನ ನಡೆಸುವುದಾಗಿ ಪ್ರಕಟಿಸಿದೆ.
ನವದೆಹಲಿ: ಈ ಸಲ ಆಗಸ್ಟ್ 15ರಂದು ನಡೆಯಲಿರುವ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಾರೋಪ ಸಮಾರಂಭವನ್ನು ವಿಶಿಷ್ಟವಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಅದಕ್ಕೂ ಮೊದಲು ‘ನನ್ನ ನೆಲ ನನ್ನ ದೇಶ’ ಅಭಿಯಾನ ನಡೆಸುವುದಾಗಿ ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ ಮಾಸಿಕ ಮನ್ ಕೀ ಬಾತ್ ರೇಡಿಯೋ ಭಾಷಣದಲ್ಲಿ ಇದನ್ನು ಪ್ರಕಟಿಸಿದ್ದಾರೆ. ‘ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದವರ ಸ್ಮರಣೆಗಾಗಿ ಈ ಅಭಿಯಾನ ನಡೆಯಲಿದೆ. ಇದರ ಅಂಗವಾಗಿ ದೇಶಾದ್ಯಂತ ಪಂಚಾಯ್ತಿಗಳಲ್ಲಿ ಆಯಾ ಭಾಗದ ಹುತಾತ್ಮರ ಹೆಸರುಗಳನ್ನು (martyrs Name) ಅನಾವರಣಗೊಳಿಸಲಾಗುತ್ತದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿಗಾಗಿ ದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ‘ಅಮೃತ ವಾಟಿಕಾ’ (Amrit vatika) ಉದ್ಯಾನ ನಿರ್ಮಿಸಲಾಗುವುದು. ಅದರಲ್ಲಿ ದೇಶದ ಮೂಲೆ ಮೂಲೆಯಿಂದ ತರಿಸಿದ ಮಣ್ಣು ಹಾಗೂ ಗಿಡಗಳನ್ನು ಬೆಳೆಸಲಾಗುವುದು. ಇದಕ್ಕಾಗಿ ‘ಅಮೃತ ಕಲಶ ಯಾತ್ರೆ’ಯ ಹೆಸರಿನಲ್ಲಿ ದೇಶದ 7500 ಕಡೆಗಳಿಂದ 7500 ಕುಂಡಗಳಲ್ಲಿ ಅಲ್ಲಿನ ಮಣ್ಣು ಹಾಗೂ ಸಸಿಯನ್ನು ದೆಹಲಿಗೆ ತರಿಸಲಾಗುವುದು. ಅವುಗಳನ್ನು ‘ಅಮೃತ ವಾಟಿಕಾ’ದಲ್ಲಿ ನೆಡಲಾಗುವುದು. ಈ ಅಮೃತ ವಾಟಿಕಾ ಉದ್ಯಾನವು ‘ಏಕ ಭಾರತ ಶ್ರೇಷ್ಠ ಭಾರತ’ದ ಭವ್ಯ ಸಂಕೇತವಾಗಿ ತಲೆಯೆತ್ತಲಿದೆ’ ಎಂದು ತಿಳಿಸಿದ್ದಾರೆ.
Flower Show 2023: ಆ.4ರಿಂದ 15ರವರೆಗೆ ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ
‘ನನ್ನ ನೆಲ ನನ್ನ ದೇಶ’ (Meri Mati Mera Desh) ಅಭಿಯಾನವು ದೇಶಕ್ಕಾಗಿ ಹುತಾತ್ಮರಾದ ಪುರುಷರು ಹಾಗೂ ಮಹಿಳೆಯರ ಕೊಡುಗೆಯನ್ನು ದೇಶವಾಸಿಗಳು ಕೃತಜ್ಞತೆಯಿಂದ ಸ್ಮರಿಸುವಂತೆ ಮಾಡಲಿದೆ. ಕಳೆದ ವರ್ಷ ಇಡೀ ದೇಶ ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಕೈಜೋಡಿಸಿ ತಮ್ಮ ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು (Tri colour) ಹಾರಿಸಿತ್ತು. ಈ ವರ್ಷವೂ ಅದೇ ಸಂಪ್ರದಾಯವನ್ನು ಮುಂದುವರೆಸುವಂತೆ ಜನರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
‘ಈ ಎಲ್ಲ ಪ್ರಯತ್ನಗಳ ಮೂಲಕ ನಾವು ನಮ್ಮ ಕರ್ತವ್ಯಗಳನ್ನು ಪುನಃ ನೆನೆಯುತ್ತೇವೆ. ದೇಶಕ್ಕಾಗಿ ತ್ಯಾಗ ಮಾಡಿದ ಅಸಂಖ್ಯ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುತ್ತೇವೆ. ತನ್ಮೂಲಕ ಸ್ವಾತಂತ್ರ್ಯದ ಬೆಲೆಯನ್ನು ಅರ್ಥ ಮಾಡಿಕೊಳ್ಳುತ್ತೇವೆ. ಹೀಗಾಗಿ ದೇಶದ ಪ್ರತಿಯೊಬ್ಬರೂ ಇದರಲ್ಲಿ ಕೈಜೋಡಿಸಬೇಕು’ ಎಂದು ಕೋರಿದ್ದಾರೆ.
ಭಾರತದ ಹಿರಿಮೆಯನ್ನು ಯುವಪೀಳಿಗೆಯಲ್ಲಿ ಬಿತ್ತುವ ಅಮೃತ ಮಹೋತ್ಸವ ಯಾತ್ರೆ!