ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ, ಗೃಹ ಸಚಿವ ಅಮಿತ್ ಶಾ, ಭಯೋತ್ಪಾದನೆಗೆ ತಕ್ಕ ಪ್ರತ್ಯುತ್ತರ ನೀಡುವ ಭಾರತದ ಸಂಕಲ್ಪವನ್ನು ಪುನರುಚ್ಚರಿಸಿದರು. ಭಯೋತ್ಪಾದನೆ ನಿರ್ಮೂಲನೆಗೆ ದೇಶದ ಬದ್ಧತೆ ಮತ್ತು ಅಂತರಾಷ್ಟ್ರೀಯ ಬೆಂಬಲವನ್ನು ಒತ್ತಿ ಹೇಳಿದರು. ದಾಳಿಕೋರರಿಗೆ ಖಂಡಿತ ಶಿಕ್ಷೆಯಾಗುವುದೆಂದು ಎಚ್ಚರಿಸಿದರು. ಭಾರತ-ಪಾಕಿಸ್ತಾನ ಸಂಬಂಧ ಹದಗೆಟ್ಟಿದ್ದು, ಭಾರತ ಕಠಿಣ ಕ್ರಮ ಕೈಗೊಂಡಿದೆ. ಭಾರತೀಯ ನೌಕಾಪಡೆ ಸನ್ನದ್ಧ ಸ್ಥಿತಿಯಲ್ಲಿದೆ.

ನವದೆಹಲಿ (ಮೇ.1): ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಪ್ರತಿಯೊಂದು ಭಯೋತ್ಪಾದನಾ ಕೃತ್ಯಕ್ಕೂ ಸೂಕ್ತ ಮತ್ತು ನಿಖರವಾದ ಪ್ರತಿಕ್ರಿಯೆಯನ್ನು ನೀಡುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ. ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಕೇಂದ್ರ ಗೃಹ ಸಚಿವರು ಸಾರ್ವಜನಿಕವಾಗಿ ನೀಡಿದ ಮೊದಲ ಹೇಳಿಕೆ ಇದಾಗಿದೆ.

ಭಯೋತ್ಪಾದಕರಿಗೆ ಬಲವಾದ ಎಚ್ಚರಿಕೆಯನ್ನು ನೀಡಿದ ಅಮಿತ್ ಶಾ, "ಹೇಡಿತನದ ದಾಳಿಯನ್ನು ತಮ್ಮ ಗೆಲುವು ಎಂದು ಯಾರಾದರೂ ಭಾವಿಸಿದರೆ, ಇದು ನರೇಂದ್ರ ಮೋದಿಯವರ ಭಾರತ ಎಂಬುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು . ಮತ್ತು ಅವರ ಈ ಕೃತ್ಯಗಳಿಗೆ ಹುಡುಕಿ ಹುಡುಕಿ, ಒಂದೊಂದಾಗಿ ಸೇಡು ತೀರಿಸಿಕೊಳ್ಳಲಾಗುವುದು' ಎಂದು ಶಪಥ ಮಾಡಿದ್ದಾರೆ.

ದೇಶದ ಪ್ರತಿಯೊಂದು ಮೂಲೆಯಿಂದಲೂ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುವ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. "ಈ ದೇಶದ ಪ್ರತಿಯೊಂದು ಇಂಚಿನಿಂದಲೂ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುವುದು ನಮ್ಮ ಸಂಕಲ್ಪವಾಗಿದೆ ಮತ್ತು ಅದು ಸಾಧಿಸಲ್ಪಡುತ್ತದೆ" ಎಂದು ಅವರು ಹೇಳಿದರು.

ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟಕ್ಕೆ ಅಂತರರಾಷ್ಟ್ರೀಯ ಬೆಂಬಲದ ಬಗ್ಗೆಯೂ ಗೃಹ ಸಚಿವರು ಮಾತನಾಡಿದರು. "ಈ ಹೋರಾಟದಲ್ಲಿ 140 ಕೋಟಿ ಭಾರತೀಯರು ಮಾತ್ರವಲ್ಲ, ಇಡೀ ಜಗತ್ತು ಭಾರತದ ಜೊತೆ ನಿಂತಿದೆ. ಭಯೋತ್ಪಾದನೆಯ ವಿರುದ್ಧದ ಈ ಹೋರಾಟದಲ್ಲಿ ವಿಶ್ವದ ಎಲ್ಲಾ ದೇಶಗಳು ಒಗ್ಗೂಡಿ ಭಾರತದ ಜನರೊಂದಿಗೆ ನಿಂತಿವೆ' ಎಂದಿದ್ದಾರೆ.

"ಭಯೋತ್ಪಾದನೆ ನಿರ್ಮೂಲನೆಯಾಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಮತ್ತು ಅದನ್ನು (ಭಯೋತ್ಪಾದಕ ಕೃತ್ಯಗಳನ್ನು) ಮಾಡಿದವರಿಗೆ ಖಂಡಿತವಾಗಿಯೂ ಸೂಕ್ತ ಶಿಕ್ಷೆ ನೀಡಲಾಗುವುದು ಎಂಬ ಸಂಕಲ್ಪವನ್ನು ನಾನು ಪುನರುಚ್ಚರಿಸಲು ಬಯಸುತ್ತೇನೆ" ಎಂದು ಅಮಿತ್ ಶಾ ಹೇಳಿದರು.

25 ಪ್ರವಾಸಿಗರು ಮತ್ತು ಒಬ್ಬ ಸ್ಥಳೀಯನ ​​ಪ್ರಾಣವನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯು ಇತ್ತೀಚಿನ ದಿನಗಳಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಮಾರಕ ದಾಳಿಗಳಲ್ಲಿ ಒಂದಾಗಿದೆ. ಬಂದೂಕುಧಾರಿಗಳು ಬೈಸರಣ್‌ ಪ್ರದೇಶದಲ್ಲಿ ದಾಳಿಯನ್ನು ಯೋಜಿಸಿದ್ದರು, ಸ್ಥಳಕ್ಕೆ ಹೋಗಲು ಪಾದಯಾತ್ರೆ ಅಥವಾ ಕುದುರೆ ಸೇವೆಯನ್ನು ಬಳಸಬೇಕಾಗಿತ್ತು.

ಏಪ್ರಿಲ್ 22 ರಂದು ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲಿನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಕೇಂದ್ರ ಗೃಹ ಸಚಿವರು ತಕ್ಷಣ ಶ್ರೀನಗರಕ್ಕೆ ಧಾವಿಸಿದ್ದರು. ಏಪ್ರಿಲ್ 23 ರಂದು ಅವರು ದುಃಖತಪ್ತ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಅವರು ಬಲಿಯಾದ ವ್ಯಕ್ತಿಗಳ ಮೃತದೇಹಗಳಿಗೆ ಪುಷ್ಪಗುಚ್ಛಗಳನ್ನು ಅರ್ಪಿಸಿದರು ಮತ್ತು "ಈ ಭೀಕರ ಭಯೋತ್ಪಾದಕ ದಾಳಿಯ ಅಪರಾಧಿಗಳನ್ನು ಬಿಡುವುದಿಲ್ಲ" ಎಂದು ಪ್ರತಿಜ್ಞೆ ಮಾಡಿದ್ದರು.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಹದಗೆಟ್ಟಿದ್ದು, ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸುವುದು ಮತ್ತು ಪಾಕಿಸ್ತಾನಿ ಪ್ರಜೆಗಳ ವೀಸಾಗಳನ್ನು ರದ್ದುಗೊಳಿಸುವುದು ಸೇರಿದಂತೆ ಹಲವಾರು ಕ್ರಮಗಳನ್ನು ನವದೆಹಲಿ ಘೋಷಿಸಿದೆ.

ಅಮೆರಿಕದ ರಕ್ಷಣಾ ಸಚಿವರ ಜೊತೆ ಮಾತು: ಪಹಲ್ಗಾಮ್ ದಾಳಿಯ ನಂತರ, ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಮುಂದುವರೆದಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಅಮೆರಿಕದ ರಕ್ಷಣಾ ಸಚಿವ ಪೀಟ್ ಹೆಗ್ಸೇತ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದು ರಕ್ಷಣಾ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಸಂಸ್ಥೆ ತಿಳಿಸಿದೆ. 

ಈ ನಡುವೆ, ನೌಕಾಪಡೆಯ ಯುದ್ಧನೌಕೆ ಐಎನ್ಎಸ್ ಸೂರತ್ ಅನ್ನು ಗುರುವಾರ ಸೂರತ್‌ನ ಹಜಿರಾ ಬಂದರಿನಲ್ಲಿ ಮೊದಲ ಬಾರಿಗೆ ನಿಯೋಜಿಸಲಾಯಿತು. ಇಲ್ಲಿ, ನಾಯಕರು ಮತ್ತು ನೌಕಾಪಡೆಯ ಅಧಿಕಾರಿಗಳು ಇದನ್ನು ಸ್ವಾಗತಿಸಿದರು.ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ಭಾರತೀಯ ನೌಕಾಪಡೆಯು ತನ್ನ ಎಲ್ಲಾ ಯುದ್ಧನೌಕೆಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿದೆ. ಇತ್ತೀಚೆಗೆ, ಅರೇಬಿಯನ್ ಸಮುದ್ರದಲ್ಲಿ ಹಡಗು ವಿರೋಧಿ ಮತ್ತು ವಿಮಾನ ವಿರೋಧಿ ಗುಂಡಿನ ವ್ಯಾಯಾಮಗಳನ್ನು ನಡೆಸಲಾಯಿತು. ಗುಜರಾತ್ ಬಳಿಯ ಕರಾವಳಿ ಕಾವಲು ಪಡೆ ಕೂಡ ಸನ್ನದ್ಧ ಸ್ಥಿತಿಯಲ್ಲಿದೆ.

Scroll to load tweet…