ಪಹಲ್ಗಾಂ ಉಗ್ರ ದಾಳಿಯ ಬೆನ್ನಲ್ಲೇ ಪಾಕಿಸ್ತಾನಿಯರಿಗೆ ನೀಡಿದ್ದ 14 ರೀತಿಯ ವೀಸಾ ರದ್ದುಪಡಿಸಿದ್ದ ಕೇಂದ್ರ ಸರ್ಕಾರ, ಏ.27ರ ಗಡುವಿನೊಳಗೆ ಪಾಕ್ ಪ್ರಜೆಗಳು ದೇಶಬಿಡುವುದನ್ನು ಖಚಿತಪಡಿಸಿ ಎಂದು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ನವದೆಹಲಿ (ಏ.26): ಪಹಲ್ಗಾಂ ಉಗ್ರ ದಾಳಿಯ ಬೆನ್ನಲ್ಲೇ ಪಾಕಿಸ್ತಾನಿಯರಿಗೆ ನೀಡಿದ್ದ 14 ರೀತಿಯ ವೀಸಾ ರದ್ದುಪಡಿಸಿದ್ದ ಕೇಂದ್ರ ಸರ್ಕಾರ, ಏ.27ರ ಗಡುವಿನೊಳಗೆ ಪಾಕ್ ಪ್ರಜೆಗಳು ದೇಶಬಿಡುವುದನ್ನು ಖಚಿತಪಡಿಸಿ ಎಂದು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಈ ಸಂಬಂಧ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಶುಕ್ರವಾರ ಖುದ್ದಾಗಿ ಕರೆ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಗಡುವು ಮೀರಿ ಯಾವೊಬ್ಬ ಪಾಕಿಯೂ ಭಾರತದಲ್ಲಿ ಇರದಂತೆ ನೋಡಿಕೊಳ್ಳಿ. ಎಲ್ಲರನ್ನೂ ಆದಷ್ಟು ಬೇಗ ಹುಡುಕಿ, ಹೊರಹಾಕಿ’ ಎಂದು ಸೂಚಿಸಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಆದೇಶ ಜಾರಿಯನ್ನು ಖಚಿತಪಡಿಸಲು ಮುಂದಾಗಿದ್ದಾರೆ.
ಪಾಕಿಸ್ತಾನದ ವಿರುದ್ಧದ ರಾಜತಾಂತ್ರಿಕ ಕ್ರಮದ ಭಾಗವಾಗಿ, ದೀರ್ಘಾವಧಿ ವೀಸಾ ಪಡೆದಿರುವ ಪಾಕಿಸ್ತಾನದ ಹಿಂದೂಗಳ ಹೊರತಾಗಿ, ಪಾಕ್ ಪ್ರಜೆಗಳಿಗೆ ನೀಡಲಾಗಿದ್ದ ಸಾರ್ಕ್ ಸೇರಿ ಎಲ್ಲಾ ವೀಸಾಗಳನ್ನು ಏ.27ರಿಂದ ರದ್ದು ಮಾಡಲಾಗಿದೆ. ಜೊತೆಗೆ, ದೇಶ ತೊರೆಯಲು 48 ಗಂಟೆಗಳ ಗಡುವನ್ನೂ ವಿಧಿಸಲಾಗಿದೆ. ಅದರ ಬೆನ್ನಲ್ಲೇ, ತಮ್ಮ ವ್ಯಾಪ್ತಿ ಪ್ರದೇಶದಲ್ಲಿ ಯಾವೊಬ್ಬ ಪಾಕ್ ಪ್ರಜೆಯೂ ಉಳಿಯದಂತೆ ನೋಡಿಕೊಳ್ಳಿ ಎಂದು ಸಿಎಂಗಳಿಗೆ ಅಮಿತ್ ಶಾ ಸೂಚನೆ ನೀಡಿದ್ದಾರೆ.
ಸರ್ವಪಕ್ಷಗಳ ಒತ್ತಾಯ: ಪಹಲ್ಗಾಂ ದಾಳಿ ಸಂಬಂಧ ಸರ್ವಪಕ್ಷ ಸಭೆ ನಡೆದಿದ್ದು, ಈ ವೇಳೆ, ‘ಉಗ್ರರ ಎಲ್ಲಾ ಶಿಬಿರಗಳನ್ನು ನಾಶಪಡಿಸಿ’ ಎಂದು ಎಲ್ಲಾ ಪಕ್ಷದ ನಾಯಕರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ ಹಾಗೂ ‘ಉಗ್ರವಾದದ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಸರ್ಕಾರದೊಂದಿಗೆ ನಿಲ್ಲುತ್ತೇವೆ’ ಎಂಬ ಭರವಸೆಯನ್ನೂ ನೀಡಿದ್ದಾರೆ. ಉಗ್ರದಾಳಿಯಲ್ಲಿ ಅಸುನೀಗಿದವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಈ ಸಭೆ ಆರಂಭವಾಗಿದ್ದು, ಸರ್ಕಾರ ದಾಳಿಯ ಕುರಿತು ಸಂಪೂರ್ಣ ಚಿತ್ರಣವನ್ನು ಸರ್ಕಾರ ನೀಡಿತು.
ಪಹಲ್ಗಾಂ ರಕ್ಕಸರಿಗಾಗಿ ಕಾರ್ಯಾಚರಣೆ: ಉಗ್ರಗಾಮಿಗಳ ಬೇಟೆ ಶುರು
ಇದರ ಆಧಾರದಲ್ಲಿ ಎಲ್ಲಾ ಪಕ್ಷಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ. ಸರ್ಕಾರದ ಪರವಾಗಿ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್. ಜೈಶಂಕರ್, ವಿತ್ತಸಚಿವೆ ನಿರ್ಮಲಾ ಸೀತಾರಾಮನ್, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಉಪಸ್ಥಿತರಿದ್ದರು. ಅಂತೆಯೆ, ಕಾಂಗ್ರೆಸ್, ಎನ್‌ಸಿಪಿ, ಎಂಐಎಂ, ಬಿಜೆಡಿ, ಆಪ್ ಡಿಎಂಕೆ ಸೇರಿದಂತೆ ಪ್ರಮುಖ ಪಕ್ಷಗಳ ನಾಯಕರು ಭಾಗವಹಿಸಿದ್ದರು.
