ನವದೆಹಲಿ [ನ.28]: ಪಿ.ವಿ.ನರಸಿಂಹರಾವ್‌, ಐ.ಕೆ.ಗುಜ್ರಾಲ್‌ ಸೇರಿದಂತೆ ಅನೇಕ ಮಾಜಿ ಪ್ರಧಾನಿಗಳಿಗೆ ಎಸ್‌ಪಿಜಿ ಭದ್ರತೆ ಹಿಂಪಡೆದಾಗ ಸೊಲ್ಲೆತ್ತದ ಕಾಂಗ್ರೆಸ್‌ ನಾಯಕರು, ಗಾಂಧೀ ಕುಟುಂಬದ ಎಸ್‌ಪಿಜಿ ಭದ್ರತೆ ಹಿಂಪಡೆದ ಕೂಡಲೇ ಇದನ್ನು ದ್ವೇಷದ ರಾಜಕೀಯ ಎಂದು ಆರೋಪ ಮಾಡುತ್ತಿರುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕಿಡಿಕಾರಿದ್ದಾರೆ. ಗಾಂಧೀ ಕುಟುಂಬಕ್ಕೆ ಎಸ್‌ಪಿಜಿ ಭದ್ರತೆ ಹಿಂಪಡೆದಿದ್ದನ್ನು ಟೀಕಿಸಿ ಕಾಂಗ್ರೆಸ್‌ ನಾಯಕರು ಬುಧವಾರ ಲೋಕಸಭೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ವೇಳೆ, ಈ ಹಿಂದಿನ ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ಎಸ್‌ಜಿಪಿ ಕಾಯ್ದೆಯನ್ನು ಹೇಗೆ ತನಗೆ ಬೇಕಾದಂತೆ ತಿದ್ದಿಕೊಂಡಿತ್ತು ಎಂಬುದನ್ನು ಎಳೆಎಳೆಯಾಗಿ ವಿವರಿಸಿ ಅಮಿತ್‌ ಶಾ ತಿರುಗೇಟು ನೀಡಿದ್ದಾರೆ.

ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ)ಯನ್ನು ರಚನೆ ಮಾಡಿದ್ದು ದೇಶದ ಪ್ರಧಾನಿಗೆ ಮಾತ್ರ ಭದ್ರತೆ ನೀಡುವ ಉದ್ದೇಶದಿಂದ. ಆದರೆ ಹಿಂದಿನ ಸರ್ಕಾರಗಳು ಒಂದು ಕುಟುಂಬವನ್ನು ಗಮನದಲ್ಲಿಟ್ಟುಕೊಂಡು ಎಸ್‌ಪಿಜಿ ಕಾಯ್ದೆಗೆ ತಿದ್ದುಪಡಿ ತಂದಿದ್ದವು ಎಂದು ಅಮಿತ್‌ ಶಾ ಕಾಂಗ್ರೆಸ್‌ ನಾಯಕರಿಗೆ ಚಾಟಿ ಬೀಸಿದರು.

ಲೋಕಸಭೆಯಲ್ಲಿ ಎಸ್‌ಪಿಜಿ (ತಿದ್ದುಪಡಿ) ಮಸೂದೆ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಮಕ್ಕಳಿಗೆ ನೀಡಲಾಗಿದ್ದ ಎಸ್‌ಪಿಜಿ ಭದ್ರತೆಯನ್ನು ಹಿಂಪಡೆಯುವ ಮೂಲಕ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡಿಲ್ಲ. ಅಂತಹ ರಾಜಕಾರಣ ಕಾಂಗ್ರೆಸ್ಸಿನ ಸಂಸ್ಕೃತಿಯೇ ಹೊರತು ನಮ್ಮದಲ್ಲ ಎಂದು ವಾಗ್ದಾಳಿ ನಡೆಸಿದರು.

ಈ ಹಿಂದೆ ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್‌, ಚಂದ್ರಶೇಖರ್‌, ಐ.ಕೆ. ಗುಜ್ರಾಲ್‌, ಮನಮೋಹನ್‌ ಸಿಂಗ್‌ ಅವರ ಕುಟುಂಬದವರಿಗೆ ಎಸ್‌ಪಿಜಿ ಭದ್ರತೆಯನ್ನು ಹಿಂಪಡೆದಾಗ ಯಾರೊಬ್ಬರೂ ಗದ್ದಲ, ಪ್ರತಿಭಟನೆ ಮಾಡಿರಲಿಲ್ಲ. ದೇಶದಲ್ಲಿ ಎಸ್‌ಪಿಜಿ ಭದ್ರತೆ ಎಂಬುದು ಸ್ಥಾನಮಾನದ ವಿಷಯವಾಗಿ ಬದಲಾಗಿದೆ. ವಿಐಪಿ ಸಂಸ್ಕೃತಿ ಉತ್ತೇಜಿಸಲು ಎಸ್‌ಪಿಜಿಯನ್ನು ಬಳಸಿಕೊಳ್ಳಲಾಗದು. ಕಾಂಗ್ರೆಸ್ಸಿಗರು ಒಂದು ಕುಟುಂಬದ ಬಗ್ಗೆ ಮಾತ್ರವೇ ಯೋಚನೆ ಮಾಡುತ್ತಾರೆ. ನೆಹರು- ಗಾಂಧಿ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಲಾಗಿದೆ. ಗಾಂಧೀ ಕುಟುಂಬದ ಯಾವುದೇ ಸದಸ್ಯರಿಗೆ ಭದ್ರತೆ ಹಿಂಪಡೆದಿಲ್ಲ, ಎಸ್‌ಪಿಜಿ ಭದ್ರತೆ ಬದಲಾಗಿ ಸಿಆರ್‌ಪಿಎಫ್‌ ಮೂಲಕ ಝಡ್‌ ಪ್ಲಸ್‌ ಭದ್ರತೆ ನೀಡಲಾಗಿದೆ. ಇದರ ಜೊತೆಗೆ ಆ್ಯಂಬುಲೆನ್ಸ್‌ ವಾಹನವನ್ನೂ ಒದಗಿಸಲಾಗಿದೆ. ವಾಸ್ತವವಾಗಿ ಗಾಂಧೀ ಕುಟುಂಬದ ಭದ್ರತೆ ಹೆಚ್ಚಿಸಲಾಗಿದೆ ಎಂದು ಹೇಳಿದರು.

ಅವ್ರೂ ಬರ್ಲಿ: ಪ್ರಮಾಣವಚನಕ್ಕೆ ಮೋದಿ, ಶಾಗೂ ಆಮಂತ್ರಣ ಇರ್ಲಿ!...

2015ರ ಬಳಿಕ ರಾಹುಲ್‌ ಗಾಂಧಿ ಅವರು ಭಾರತದಲ್ಲಿ 1892 ಬಾರಿ ಮತ್ತು ವಿದೇಶದಲ್ಲಿ 247 ಬಾರಿ ಎಸ್‌ಪಿಜಿಗೆ ಮಾಹಿತಿ ನೀಡದೆಯೇ ಸಂಚಾರ ಕೈಗೊಂಡಿದ್ದಾರೆ. ಇದೇ ರೀತಿ ಸೋನಿಯಾ ಮತ್ತು ಪ್ರಿಯಾಂಕಾ ಕೂಡಾ ಎಸ್‌ಪಿಜಿಗೆ ಮಾಹಿತಿ ನೀಡದೆಯೇ ನೂರಾರು ಬಾರಿ ಪ್ರವಾಸ ಕೈಗೊಂಡಿದ್ದಾರೆ. ಈ ವಿಷಯ ಮತ್ತು ಈ ನಾಯಕರಿಗೆ ಇರಬಹುದಾದ ಅಪಾಯದ ಪ್ರಮಾಣವನ್ನು ಪರಿಗಣಿಸಿ ಬದಲಾವಣೆಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಎಸ್‌ಪಿಜಿ ರಕ್ಷಣೆ ಎಂದರೆ ಭೌತಿಕ ಭದ್ರತೆ ಎಂಬ ತಪ್ಪು ಕಲ್ಪನೆ ಇದೆ. ಆದರೆ ಅದು ಹಾಗಲ್ಲ. ಪ್ರಧಾನಿ ಕಚೇರಿ, ಅವರ ಆರೋಗ್ಯ, ಸಂವಹನವೂ ಎಸ್‌ಪಿಜಿ ಭದ್ರತೆ ಬರುತ್ತದೆ ಎಂದು ವಿವರಿಸಿದರು. ಈ ವೇಳೆ ಮಾತನಾಡಿದ ಕಾಂಗ್ರೆಸ್‌ ಸಂಸದ ಮನೀಶ್‌ ತಿವಾರಿ, ಮಾಜಿ ಪ್ರಧಾನಿಗಳು ಬದುಕಿರುವವರೆಗೂ ಅವರಿಗೆ ಹಾಗೂ ಅವರ ಕುಟುಂಬದವರಿಗೆ ಭದ್ರತೆ ನೀಡಬೇಕು ಎಂದು ಮನವಿ ಮಾಡಿದರು.

ಪ್ರಧಾನಿ ಹಾಗೂ ಅವರ ಜತೆಗಿರುವ ಕುಟುಂಬ ಸದಸ್ಯರಿಗೆ ಎಸ್‌ಪಿಜಿ ಭದ್ರತೆ ನೀಡಬೇಕು. ಪ್ರಧಾನಮಂತ್ರಿಗಳು ಅಧಿಕಾರದಿಂದ ಕೆಳಗಿಳಿದ ದಿನದಿಂದ 5 ವರ್ಷಗಳವರೆಗೆ ಅವರಿಗೆ ಮತ್ತು ಅವರ ಜತೆ ವಾಸಿಸುವ ಕುಟುಂಬ ಸದಸ್ಯರಿಗೆ ಎಸ್‌ಪಿಜಿ ಭದ್ರತೆ ಒದಗಿಸಬೇಕು ಎಂಬ ಅಂಶಗಳುಳ್ಳ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದ್ದು, ಬುಧವಾರ ಅದು ಅಂಗೀಕಾರಗೊಂಡಿದೆ.