ನವದೆಹಲಿ(ಡಿ.03): ಗಾಂಧಿ ಪರಿವಾರವೂ ಸೇರಿದಂತೆ ದೇಶದ ಎಲ್ಲ ನಾಗರಿಕರ ರಕ್ಷಣೆ ಸರ್ಕಾರದ ಜವಾಬ್ದಾರಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಗಾಂಧಿ ಕುಟುಂಬಕ್ಕೆ ನೀಡಲಾಗಿದ್ದ ಎಸ್’ಪಿಜಿ ಭದ್ರತೆ ವಾಪಸ್ ಪಡೆದ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ಭದ್ರತೆ ವಾಪಸ್ ಪಡೆದಿದ್ದಕ್ಕೆ ಯಾರೂ ಹೆದರಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

ನವದೆಹಲಿಯ ಪ್ರಿಯಾಂಕಾ ಗಾಂಧಿ ವಾದ್ರಾ ಮನೆ ಒಳಗೆ ಕಾರಿನಲ್ಲಿ ಆಗುಂತಕರು ಬಂದ ಕುರಿತು ಸ್ಪಷ್ಟನೆ ನೀಡಿದ ಅಮಿತ್ ಶಾ, ಅದೇ ಸಮಯದಲ್ಲಿ ರಾಹುಲ್ ಗಾಂಧಿ ಕೂಡ ಪ್ರಿಯಾಂಕಾ ಮನೆಗೆ ಬರುವವರಿದ್ದರು ಎಂದು ಹೇಳಿದರು.

SPG ಭದ್ರತೆ ಹಿಂತೆಗೆತ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ ಮನೆಗೆ 7 ಜನ ಅಪರಿಚಿತರ ಪ್ರವೇಶ!

ಘಟನೆಗೆ ಸಂಬಂಧಿಸಿದಂತೆ ಭದ್ರತಾ ಲೋಪದ ಆರೋಪದ ಮೇಲೆ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದು, ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗಿದೆ ಎಂದು ಅಮಿತ್ ಶಾ ಸ್ಪಷ್ಟಪಡಿಸಿದರು.

ಗಾಂಧಿ ಪರಿವಾರಕ್ಕೆ ಎಸ್’ಪಿಜಿ ಭಧ್ರತೆ ವಾಪಸ್ ಪಡೆದ ಸರ್ಕಾರದ ಕ್ರಮ ಖಂಡಿಸಿ ಸದನದಲ್ಲಿ ಕಾಂಗ್ರೆಸ್ ತೀವ್ರ ಪ್ರತಿಭಟನೆ ನಡೆಸುತ್ತಿದೆ.

ಈ ಹಿನ್ನೆಲೆಯಲ್ಲಿ ಸದನಕ್ಕೆ ಉತ್ತರ ನೀಡಿದ ಅಮಿತ್ ಶಾ, ಗಾಂಧಿ ಪರಿವಾರವೂ ಸೇರಿದಂತೆ ದೇಶದ ಎಲ್ಲ ನಾಗರಿಕರ ರಕ್ಷಣೆ ನಮ್ಮ ಹೊಣೆ ಎಂದು ಮಾರ್ಮಿಕವಾಗಿ ಹೇಳಿದರು.

ಇನ್ನು ರಾಜ್ಯಸಭೆಯಲ್ಲಿ ಎಸ್‌ಪಿಜಿ ಭದ್ರತೆ ತಿದ್ದುಪಡಿ ಮಸೂದೆ ಪಾಸಾಗಿದ್ದು, ಗಾಂಧಿ ಪರಿವಾರವನ್ನು ಗುರಿಯಾಗಿಸಿಕೊಂಡು ಮಸೂದೆಗೆ ತಿದ್ದುಪಡಿ ತಂದಿಲ್ಲ ಎಂದು ಅಮಿತ್ ಶಾ ಸ್ಪಷ್ಟಪಡಿಸಿದರು.