SPG ಭದ್ರತೆ ಹಿಂತೆಗೆತ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ ಮನೆಗೆ 7 ಜನ ಅಪರಿಚಿತರ ಪ್ರವೇಶ!
ಪ್ರಿಯಾಂಕಾ ಗಾಂಧಿ ಮನೆಗೆ 7 ಜನ ಅಪರಿಚಿತರ ಪ್ರವೇಶ!| ಕಾಂಗ್ರೆಸ್ ನಾಯಕಿ ಮನೆಯಲ್ಲಿ ಭದ್ರತಾ ಲೋಪ
ನವದೆಹಲಿ[ಡಿ.03]: ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ) ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂಪಡೆದ ಬೆನ್ನಲ್ಲೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ನಿವಾಸದಲ್ಲಿ ಭಾರಿ ಭದ್ರತಾ ಲೋಪವಾಗಿರುವ ಘಟನೆ ನಡೆದಿದೆ. ಏಳು ಮಂದಿ ಅಪರಿಚಿತರು ಸೀದಾ ಪ್ರಿಯಾಂಕಾ ಮನೆಯವರೆಗೂ ಬಂದು, ಕಾರಿನಿಂದ ಕೆಳಗಿಳಿದು, ಫೋಟೋ ತೆಗೆಸಿಕೊಳ್ಳಲು ಅನುಮತಿ ಕೇಳಿದ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ನ.26ರಂದು ನಡೆದಿರುವ ಈ ಘಟನೆಯನ್ನು ತಮಗೆ ಝಡ್ ಪ್ಲಸ್ ಭದ್ರತೆ ಒದಗಿಸುತ್ತಿರುವ ಸಿಆರ್‌ಪಿಎಫ್ ಗಮನಕ್ಕೆ ಪ್ರಿಯಾಂಕಾ ಅವರ ಕಚೇರಿ ತಂದಿದೆ ಎಂದು ಮೂಲಗಳು ಹೇಳಿವೆ.
ಪ್ರಿಯಾಂಕಾ ಮನೆಯ ವರಾಂಡಾ ಬಳಿ ಗಾರ್ಡನ್ ಇದೆ. ನ.26ರಂದು ಅಲ್ಲಿಗೆ ಮೂವರು ಮಹಿಳೆಯರು, ಒಬ್ಬಳು ಬಾಲಕಿ, ಮೂವರು ಪುರುಷರು ಕಾರಿನಲ್ಲಿ ಬಂದಿಳಿದರು. ನೇರವಾಗಿ ಪ್ರಿಯಾಂಕಾ ಬಳಿಗೇ ಧಾವಿಸಿ, ತಮ್ಮ ಜತೆ ಫೋಟೋ ತೆಗೆಸಿಕೊಳ್ಳಬೇಕು ಎಂದು ಕೋರಿದರು. ಪ್ರಿಯಾಂಕಾ ಅವರು ಕೂಡ ಸ್ಪಂದಿಸಿ ಫೋಟೋ ತೆಗೆಸಿಕೊಂಡರು. ಬಳಿಕ ಬಂದಿದ್ದವರು ಹೊರಟುಹೋದರು ಎಂದು ಮೂಲಗಳು ತಿಳಿಸಿವೆ.
ಸದ್ಯ ಪ್ರಿಯಾಂಕಾ ನಿವಾಸದ ಭದ್ರತೆಯನ್ನು ಸಿಆರ್‌ಪಿಎಫ್ ಹಾಗೂ ದೆಹಲಿ ಪೊಲೀಸರು ನೋಡಿಕೊಳ್ಳುತ್ತಿದ್ದಾರೆ. ಆದರೂ ಇದು ನಡೆದಿದ್ದು ಸಂದೇಹಗಳಿಗೆ ಕಾರಣವಾಗಿದೆ. ರಾಜೀವ್ ಗಾಂಧಿ ಹತ್ಯೆಯಾದ 1991ರಿಂದ ಪ್ರಿಯಾಂಕಾಗೆ ಎಸ್‌ಪಿಜಿ ಭದ್ರತೆ ಇತ್ತು. ಅದನ್ನು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಹಿಂಪಡೆದಿತ್ತು.