ಗಡಿಯಲ್ಲಿ ಚೀನಾ ಯುದ್ಧ ಟ್ಯಾಂಕರ್ ನಿಯೋಜನೆ!
ಗಡಿಯಲ್ಲಿ ಚೀನಾ ಯುದ್ಧ ಟ್ಯಾಂಕರ್ ನಿಯೋಜನೆ| ಭಾರತದ ಸೇನಾ ನೆಲೆಗಳ ಮುಂದೆಯೇ 35 ಟ್ಯಾಂಕರ್ ಠಿಕಾಣಿ| ಶಾಂತಿಪಾಲನೆಗೆ ತಯಾರಿಲ್ಲ ಎಂಬ ಸಂದೇಶ| ಇದಕ್ಕೆ ಭಾರತದ ಸಡ್ಡು| ಗುಡ್ಡಗಳ ಮೇಲೆ ಟ್ಯಾಂಕರ್ ನಿಯೋಜಿಸಿ ಚೀನಾ ಮೇಲೆ ಕಣ್ಣು
ನವದೆಹಲಿ(ಜ.05): ಗಡಿಯಲ್ಲಿ ಕಳೆದ ಬೇಸಿಗೆಯಿಂದ ನಿರಂತರ ಕಿರಿಕಿರಿ ಮಾಡುತ್ತಿರುವ ಚೀನಾ ಈಗ ಪೂರ್ವ ಲಡಾಖ್ ಗಡಿ ವಾಸ್ತವ ರೇಖೆಯಲ್ಲಿ ಯುದ್ಧ ಟ್ಯಾಂಕರ್‌ಗಳನ್ನು ನಿಯೋಜಿಸಿದೆ ಎಂದು ತಿಳಿದುಬಂದಿದೆ. ಭಾರತದ ಗಡಿ ಪೋಸ್ಟ್‌ಗಳ ಎದುರೇ ಟ್ಯಾಂಕರ್‌ಗಳನ್ನು ನಿಯೋಜಿಸಿದ್ದು, ಶಾಂತಿಪಾಲನೆಗೆ ತಾನು ಸಿದ್ಧನಿಲ್ಲ ಎಂಬ ಪರೋಕ್ಷ ಸಂದೇಶವನ್ನು ರವಾನಿಸಿದೆ.
ಪೂರ್ವ ಲಡಾಖ್‌ನ ರೆಝಾಂನ್ ಲಾ, ರೆಚಿನ್ ಲಾ ಹಾಗೂ ಮುಕ್ಷೋರಿಗಳಲ್ಲಿ ಚೀನಾ ಸುಮಾರು 30-35 ಟ್ಯಾಂಕ್‌ಗಳನ್ನು ನಿಯೋಜಿಸಿರುವ ವಿಡಿಯೋ ತುಣುಕುಗಳು ಮಾಧ್ಯಮಗಳಿಗೆ ಲಭಿಸಿವೆ. ಈ ವಿಡಿಯೋಗಳನ್ನು ಭಾರತೀಯ ಸೇನೆಯು ಆಗಸ್ಟ್ ಅಂತ್ಯಕ್ಕೇ ಚಿತ್ರಿಸಿದೆ. ಆಧುನಿಕ ತಂತ್ರಜ್ಞಾನ ಬಳಸಿ ಸಿದ್ಧಪಡಿಸಲಾದ ಲಘು ತೂಕದ ಟ್ಯಾಂಕ್‌ಗಳು ಇವಾಗಿವೆ.
ಚೀನಾ ದುಸ್ಸಾಹಸ ಯತ್ನಕ್ಕೆ ತಿರುಗೇಟು ನೀಡಲು ಭಾರತ ಕೂಡ ಸಜ್ಜಾಗಿದೆ. ರೆಝಾಂನ್ ಲಾ, ರೆಚಿನ್ ಲಾ ಹಾಗೂ ಮುಕ್ಷೋರಿ ಗುಡ್ಡಗಳ 17 ಸಾವಿರ ಅಡಿ ಎತ್ತರದ ಮೇಲೆ ಇದೇ ಮೊದಲ ಬಾರಿ ಟ್ಯಾಂಕ್‌ಗಳನ್ನು ನಿಯೋಜಿಸಿದ್ದು, ಚೀನಾದ ಅತಿಕ್ರಮಣ ಯತ್ನದ ಮೇಲೆ ಹದ್ದಿನ ಕಣ್ಣು ಇರಿಸಿವೆ.