Asianet Suvarna News Asianet Suvarna News

ತಮಿಳುನಾಡು ಕೋರ್ಟಲ್ಲಿ ಅಂಬೇಡ್ಕರ್‌ ಫೋಟೋಗಿಲ್ಲ ಅವಕಾಶ: ಮದ್ರಾಸ್‌ ಹೈಕೋರ್ಟ್‌

ಎಲ್ಲ ಜಿಲ್ಲಾ ನ್ಯಾಯಾಲಯಗಳಿಗೆ ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಅವರು, ಹೊಸದಾಗಿ ನಿರ್ಮಿಸಲಾದ ಕಾಂಚಿಪುರಂ ಕೋರ್ಟ್‌ ಕಾಂಪ್ಲೆಕ್ಸ್‌ ಪ್ರವೇಶ ದ್ವಾರದಿಂದ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಭಾವಚಿತ್ರಗಳನ್ನು ತೆಗೆದುಹಾಕುವಂತೆ ಆಲಂದೂರಿನ ವಕೀಲರ ಸಂಘಕ್ಕೆ ಮನವೊಲಿಸಬೇಕು ಎಂದು ಕಾಂಚೀಪುರಂ ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ ಸೂಚಿಸಿದೆ.

Ambedkar Photo Not Allowed in Tamil Nadu Court Says Madras High Court grg
Author
First Published Jul 24, 2023, 2:30 AM IST

ಚೆನ್ನೈ(ಜು.24): ಗಾಂಧೀಜಿ ಮತ್ತು ತಮಿಳು ಕವಿ-ಸಂತ ತಿರುವಳ್ಳುವರ್‌ ಅವರ ಭಾವಚಿತ್ರ/ಪ್ರತಿಮೆಗಳನ್ನು ಬಿಟ್ಟು ಮಿಕ್ಕ ಯಾರ ಫೋಟೋ/ಪ್ರತಿಮೆಗಳನ್ನೂ ಕೋರ್ಟ್‌ ಹಾಗೂ ಕೋರ್ಟ್‌ ಆವರಣದಲ್ಲಿ ಹಾಕಕೂಡದು ಎಂದು ತಮಿಳುನಾಡು ಮತ್ತು ಪುದುಚೇರಿಯ ನ್ಯಾಯಾಲಯಗಳಿಗೆ ಮದ್ರಾಸ್‌ ಹೈಕೋರ್ಟ್‌ ಸೂಚಿಸಿದೆ.

ಎಲ್ಲ ಜಿಲ್ಲಾ ನ್ಯಾಯಾಲಯಗಳಿಗೆ ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಅವರು, ಹೊಸದಾಗಿ ನಿರ್ಮಿಸಲಾದ ಕಾಂಚಿಪುರಂ ಕೋರ್ಟ್‌ ಕಾಂಪ್ಲೆಕ್ಸ್‌ ಪ್ರವೇಶ ದ್ವಾರದಿಂದ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಭಾವಚಿತ್ರಗಳನ್ನು ತೆಗೆದುಹಾಕುವಂತೆ ಆಲಂದೂರಿನ ವಕೀಲರ ಸಂಘಕ್ಕೆ ಮನವೊಲಿಸಬೇಕು ಎಂದು ಕಾಂಚೀಪುರಂ ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ ಸೂಚಿಸಿದೆ.

ಪನ್ನೀರಸೆಲ್ವಂ ಪುತ್ರನ ಗೆಲುವು ಅಸಿಂಧು: ಮದ್ರಾಸ್‌ ಹೈಕೋರ್ಟ್‌

ಅಂಬೇಡ್ಕರ್‌ ಮತ್ತು ಸಂಬಂಧಿಸಿದ ಸಂಘದ ಹಿರಿಯ ವಕೀಲರ ಭಾವಚಿತ್ರಗಳನ್ನು ಕೋರ್ಟ್‌ಗಳಲ್ಲಿ ಅನಾವರಣಗೊಳಿಸಲು ಅನುಮತಿ ಕೋರಿ ವಿವಿಧ ವಕೀಲರ ಸಂಘಗಳು ಅರ್ಜಿ ಸಲ್ಲಿಸಿದ್ದವು. ಆದರೆ ಇದನ್ನು ತಿರಸ್ಕರಿಸಿರುವ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌, ‘2008ರ ಅಕ್ಟೋಬರ್‌ನಲ್ಲಿ ಕೋರ್ಟ್‌ಗಳ ಒಳಗೆ ಅಂಬೇಡ್ಕರ್‌ ಅವರ ಭಾವಚಿತ್ರ ಅಳವಡಿಸುವ ಕೋರಿಕೆಯನ್ನು ತಿರಸ್ಕರಿಸಿ ಆದೇಶ ಹೈಕೋರ್ಟ್‌ ಹೊರಡಿಸಿತ್ತು. 2013ರ ಏ.27ರಂದು ಕೂಡ ಇದೇ ನಿರ್ಣಯವನ್ನು ಪುನರುಚ್ಚಾರ ಮಾಡಲಾಗಿತ್ತು. ಈ ವರ್ಷ ಏ.11ರಂದು ಕೂಡ ಮತ್ತೆ ಅಂಬೇಡ್ಕರ್‌ ಅವರ ಚಿತ್ರ ಅಳವಡಿಸುವ ಕೋರಿಕೆಯನ್ನು ಪರಿಶೀಲಿಸಲಾಯಿತು. ಆದರೆ ಈ ಹಿಂದಿನ ನಿರ್ಣಯದಂತೆ ಮಹಾತ್ಮಾ ಗಾಂಧಿ ಹಾಗೂ ತಮಿಳು ಕವಿ ತಿರುವಳ್ಳುವರ್‌ ಅವರ ಪ್ರತಿಮೆಗಳನ್ನು ಹೊರತುಪಡಿಸಿ ಇನ್ನಾವುದೇ ಫೋಟೋಗಳನ್ನು ಅಳವಡಿಸಕೂಡದು ಎಂಬುದನ್ನು ಪುನರುಚ್ಚರಿಸಲಾಯಿತು’ ಎಂದಿದೆ.

ಈ ಆದೇಶ ಪಾಲನೆ ಆಗದಿದ್ದರೆ ತಮಿಳುನಾಡು ಮತ್ತು ಪುದುಚೇರಿಯ ಬಾರ್‌ ಕೌನ್ಸಿಲ್‌ಗೆ ಸೂಕ್ತ ದೂರು ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ರಿಜಿಸ್ಟ್ರಾರ್‌ ಜನರಲ್‌ ಹೇಳಿದ್ದಾರೆ.

Follow Us:
Download App:
  • android
  • ios