* ಕ್ಯಾ.ಅಮರೀಂದರ್‌ರಿಂದ ಪಂಜಾಬ್‌ ವಿಕಾಸ್‌ ಪಕ್ಷ* ಸಿಧುಗೆ ಸೋಲಿನ ರುಚಿ ತೋರಿಸಲು ಕ್ಯಾ. ಸಿಂಗ್‌ ಕಾರ‍್ಯತಂತ್ರ 

ನವದೆಹಲಿ(ಅ.02): ಕಾಂಗ್ರೆಸ್‌ಗೆ ವಿದಾಯ ಹೇಳುವುದಾಗಿ ಈಗಾಗಲೇ ಘೋಷಿಸಿರುವ ಪಂಜಾಬ್‌ನ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಕ್ಯಾ.ಅಮರೀಂದರ್‌ಸಿಂಗ್‌(Amarinder Singh), ಶೀಘ್ರವೇ ಹೊಸ ಪಕ್ಷವೊಂದನ್ನು ರಚಿಸಲಿದ್ದರೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಪಕ್ಷದ ಹೆಸರು ಪಂಜಾಬ್‌ ವಿಕಾಸ್‌ ಪಕ್ಷ(Punjab Vikas Party) ಎಂದಾಗಿರಲಿದೆ ಎನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಮರೀಂದರ್‌ ಸಿಂಗ್‌, ಬಿಜೆಪಿ(BJP) ಸೇರುವ ವದಂತಿ ಇತ್ತಾದರೂ ಅದನ್ನು ಅವರೇ ಸ್ಪಷ್ಟವಾಗಿ ತಳ್ಳಿಹಾಕಿದ್ದರು. ತಕ್ಷಣಕ್ಕೆ ಬಿಜೆಪಿ ಸೇರುವುದು ತಮ್ಮ ಮೂಲ ಉದ್ದೇಶವನ್ನಾ ಹಾಳು ಮಾಡುವ ಸಾಧ್ಯತೆ ಇರುವ ಕಾರಣ ಹೊಸ ಪಕ್ಷ ಸ್ಥಾಪನೆಯೇ ಸೂಕ್ತ ಎಂಬ ನಿರ್ಧಾರಕ್ಕೆ ಸಿಂಗ್‌ ಬಂದಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ, ಹಾಲಿ ಕಾಂಗ್ರೆಸ್‌ ಘಟಕದ ಅಧ್ಯಕ್ಷ ನವಜೋತ್‌ಸಿಂಗ್‌ ಸಿಧು(Navjot Singh Sidhu) ಸೇರಿದಂತೆ ಹಲವು ನಾಯಕರ ಮೇಲೆ ಅಮರೀಂದರ್‌ ಹಲ್ಲು ಮಸೆಯುತ್ತಿದ್ದಾರೆ. ಅವರನ್ನೆಲ್ಲಾ, 2022ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸುವುದು ಅವರ ಪ್ರಮುಖ ಗುರಿ. ಈ ಗುರಿ ಈಡೇರಿಸಲು ಬಿಜೆಪಿ ಸೇರ್ಪಡೆಗಿಂತ ಹೊಸ ಪಕ್ಷವೇ ಮುಖ್ಯ ಎಂಬುದು ಸಿಂಗ್‌ರ ಸದ್ಯದ ಲೆಕ್ಕಾಚಾರ.

ಈಗಾಗಲೇ ಹೊಸ ಪಕ್ಷ ಸ್ಥಾಪನೆ ಕುರಿತು ಅಂತಿಮ ನಿರ್ಧಾರಕ್ಕೆ ಬರಲಾಗಿದೆ. ಈ ಕುರಿತು ಇನ್ನೊಂದು ಸುತ್ತಿನಲ್ಲಿ ತಮ್ಮ ಆಪ್ತರ ಜೊತೆ ಸಮಾಲೋಚನೆ ಬಳಿಕ ಸಿಂಗ್‌ ಅವರು ಅಧಿಕೃತವಾಗಿ ಪಕ್ಷ ರಚನೆಯ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

ಅಲ್ಲದೆ ರಾಜ್ಯದಲ್ಲಿರುವ ಎಲ್ಲಾ ರೈತ ಮುಖಂಡರ ಜತೆಗೂ ಸಿಂಗ್‌ ಅವರು ಸಂಪರ್ಕ ಸಾಧಿಸಲಿದ್ದು, ಸಣ್ಣ ಪಕ್ಷಗಳ ಜತೆಗೂ ಮೈತ್ರಿ ಮಾಡಿಕೊಳ್ಳುವ ಇರಾದೆ ಕ್ಯಾ. ಸಿಂಗ್‌ ಅವರಿಗೆ ಇದೆ ಎನ್ನಲಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮುಖಾಂತರ ಸಿಧು ಅವರನ್ನು ಸೋಲಿಸುತ್ತೇನೆ ಎಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಸಿಂಗ್‌ ಗುಡುಗಿದ್ದರು.