Asianet Suvarna News Asianet Suvarna News

Uttar Pradesh Election: ಯೋಗಿಯ ಧರ್ಮಕ್ಕೆ ಅಖಿಲೇಶ್‌ ಜಾತಿ ಅಸ್ತ್ರ!

ಚುನಾವಣೆಗೆ ಕೇವಲ 60 ದಿನಗಳು ಉಳಿದಿದ್ದರೂ ಯುಪಿಯಲ್ಲಿ ಮಾಯಾವತಿ ಬಗ್ಗೆ ಚರ್ಚೆಯೇ ಇಲ್ಲ. ಆದರೆ ಮಾಯಾವತಿ ಬಳಿ ದಲಿತ, ಜಾಟವ ಮತಗಳು ಗಟ್ಟಿಯಾಗಿಯೇ ಇವೆ. 

All You Need To Know Uttar Pradesh assembly Elections 2022 hls
Author
Bengaluru, First Published Dec 24, 2021, 3:03 PM IST
  • Facebook
  • Twitter
  • Whatsapp

ಇನ್ನೇನು ಬಹುತೇಕ ಜನವರಿ ಎರಡನೇ ವಾರದಲ್ಲಿ ಉತ್ತರ ಪ್ರದೇಶದ ಚುನಾವಣೆ ಘೋಷಣೆ ಆಗಲಿದೆ. ಮಾಚ್‌ರ್‍ ಮೂರನೇ ವಾರ ಯುಪಿಯಲ್ಲಿ ಹೊಸ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಬೇಕು. ಇವತ್ತಿನ ಸ್ಥಿತಿಗತಿ ನೋಡಿದರೆ ಯುಪಿ ಯುದ್ಧ ನೇರವಾಗಿ ಯೋಗಿ ಮತ್ತು ಅಖಿಲೇಶ್‌ ಯಾದವ್‌ ನಡುವೆ ನಡೆಯಲಿದ್ದು, ತಳಮಟ್ಟದಿಂದ ಬರುತ್ತಿರುವ ಸುದ್ದಿ ಗಮನಿಸಿದರೆ ಮಾಯಾವತಿ ಮತ್ತು ಕಾಂಗ್ರೆಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ.

2014, 2017 ಮತ್ತು 2019ರ ಮೂರು ಚುನಾವಣೆಗಳಲ್ಲಿ ಬಿಜೆಪಿ ಯುಪಿಯಲ್ಲಿ ಶೇ.40ರಿಂದ ಶೇ.50 ರವರೆಗೆ ಮತ ಗಳಿಸಿದೆ. ಕಳೆದ 7 ವರ್ಷಗಳಲ್ಲಿ ಬಿಜೆಪಿ ವೋಟ್‌ ಪ್ರಮಾಣ ಹೆಚ್ಚಾಗಿದೆಯೇ ಹೊರತು ಕಡಿಮೆ ಆಗಿಲ್ಲ. ಹೀಗಾಗಿ ಒಂದು ವೇಳೆ ಯುಪಿಯಲ್ಲಿ ಬಿಜೆಪಿಯನ್ನು ಸೋಲಿಸಬೇಕಾದರೆ ಯಾವುದೇ ಪಕ್ಷ ಕನಿಷ್ಠ ಶೇ.35 ಮತ ಪಡೆಯಬೇಕು. ಇವತ್ತಿನ ಸ್ಥಿತಿಯಲ್ಲಿ ಕಾಂಗ್ರೆಸ್‌ಗೆ ಯುಪಿಯಲ್ಲಿ ತನ್ನದೇ ನಿರ್ದಿಷ್ಟವೋಟ್‌ ಬ್ಯಾಂಕ್‌ ಉಳಿದಿಲ್ಲ.

Uttar Pradesh Elections: ಅಖಿಲೇಶ್ ರ್ಯಾಲಿಗೆ ಭರ್ಜರಿ ಯುವಕರ ದಂಡು, ಯೋಗಿಗೆ ಚಿಂತೆ ಶುರು

ಮಾಯಾವತಿ ಬಳಿ 18 ಪ್ರತಿಶತ ಕಟ್ಟಾಮತದಾರರು ಇದ್ದಾರಾದರೂ ಹೊಸ ಮತದಾರ ಹತ್ತಿರ ಕೂಡ ಸುಳಿಯುತ್ತಿಲ್ಲ. ಹೀಗಾಗಿ ಬಿಜೆಪಿಗೆ ಟಕ್ಕರ್‌ ಕೊಡುವ ಸಾಮರ್ಥ್ಯ ಇದೆ ಎಂದು ಅನ್ನಿಸುತ್ತಿರುವುದು ಯಾದವ ಮತ್ತು ಮುಸ್ಲಿಮರ ಪಕ್ಕಾ ಬೆಂಬಲ ಇರುವ ಅಖಿಲೇಶ್‌ ಯಾದವ್‌ಗೆ ಮಾತ್ರ. 5 ವರ್ಷಗಳ ಬಳಿಕ ಅಖಿಲೇಶ್‌ ಯಾದವ್‌ ಸಭೆಗಳಿಗೆ ಜನ ಬರುತ್ತಿದ್ದಾರೆ ಎನ್ನುವುದು ಹೌದಾದರೂ 2017 ಮತ್ತು 2019ರಲ್ಲಿ ಸೋತಿರುವ ಎಷ್ಟುಜಾಗ ಮತ್ತು ಜಾತಿಗಳನ್ನು ಸಮಾಜವಾದಿಗಳು ಪುನಃ ಗೆಲ್ಲಬಹುದು ಎಂದು ಈಗಲೇ ಹೇಳುವುದು ಕಷ್ಟ.

ಅಖಿಲೇಶ್‌ ಸಾಮರ್ಥ್ಯ, ದೌರ್ಬಲ್ಯ

ಯಾದವ ಮತ್ತು ಮುಸ್ಲಿಮರು ಬಿಹಾರದಲ್ಲಿ ಹೇಗೆ ಲಾಲು ಕುಟುಂಬಕ್ಕೆ ನಿಷ್ಠರೋ ಹಾಗೆಯೇ ಉತ್ತರ ಪ್ರದೇಶದಲ್ಲಿ ಮೊದಲು ಮುಲಾಯಂಗೆ, ಈಗ ಪುತ್ರ ಅಖಿಲೇಶ್‌ ಯಾದವ್‌ಗೆ ನಿಷ್ಠರು. ಹೀಗಾಗಿ 26ರಿಂದ 28 ಪ್ರತಿಶತ ಮತ ಪಡೆಯುವುದು ಅಖಿಲೇಶ್‌ಗೆ ಕಷ್ಟಆಗಲಿಕ್ಕಿಲ್ಲ. ಆದರೆ ಸವಾಲು ಇರುವುದು ಅಲ್ಲಿಂದ ಮುಂದೆ ಹೋಗುವುದು. ಮಂಡಲ ಹೆಸರು ಹೇಳಿಕೊಂಡು ಬಂದ ಲಾಲು ಮತ್ತು ಮುಲಾಯಂ ಪಕ್ಷಗಳ ಸಮಸ್ಯೆ ಎಂದರೆ ಅಧಿಕಾರ ಬಂದ ಮೇಲೆ ಸಣ್ಣ ಸಣ್ಣ ಹಿಂದುಳಿದ ಜಾತಿಗಳನ್ನು ನಿರ್ಲಕ್ಷಿಸಿ ಮೂಲೆ ಗುಂಪು ಮಾಡುವುದು.

ಇವತ್ತು ಮೋದಿ ಉಚ್ಛ್ರಾಯಕ್ಕೆ ಕಾರಣ ಇದೇ ಯಾದವರಿಂದ ಉಪೇಕ್ಷಿತ ಸಣ್ಣ ಸಣ್ಣ ಜಾತಿಗಳು. ಹೀಗಾಗಿ ಅಖಿಲೇಶ್‌ ಯಾದವ್‌ ನದಿ ಮತ್ತು ಕೆರೆಗಳಲ್ಲಿ ದೋಣಿ ಚಲಾಯಿಸುವ, ಮೀನು ಮಾರುವ ನಿಷಾದರು ಮತ್ತು ಮಲ್ಹಾಗಳು, ಪಟೇಲರಾದ ಕುರ್ಮಿಗಳು, ತರಕಾರಿ ಮಾರಾಟ ಮಾಡುವ ಚೌಹಾನರು ಮತ್ತು ಕೃಷಿ ಕೂಲಿ ಮಾಡುವ ರಾಜಭರ್‌ಗಳನ್ನು ಮರಳಿ ಸಮಾಜವಾದಿ ತೆಕ್ಕೆಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಒಂದು ವೇಳೆ ಸರ್ಕಾರ ಬಂದರೆ ಅದು ಕೇವಲ ಯಾದವ ಮತ್ತು ಮುಸ್ಲಿಮರ ಸರ್ಕಾರ ಆಗಿರದೇ ಸಣ್ಣ ಸಣ್ಣ ಜಾತಿಗಳಿಗೆ ಪ್ರಾತಿನಿಧ್ಯ ಮತ್ತು ಮರ್ಯಾದೆ ಇರುತ್ತದೆ ಎಂದು ಹೇಳುವ ಪ್ರಯತ್ನ ಅಖಿಲೇಶ್‌ ಮಾಡುತ್ತಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲಿಯೂ ಅಖಿಲೇಶ್‌ ಬಿಜೆಪಿ ಹತ್ತಿರ ಬರಬೇಕಾದರೆ ಯಾದವ, ಮುಸ್ಲಿಮರ ಗಟ್ಟಿವೋಟು ಬೇಕು. ಜೊತೆಗೆ ಹೊಸ ಜಾತಿಗಳು ಹತ್ತಿರ ಬರಬೇಕು. ಅದಕ್ಕಾಗಿಯೇ ಅಖಿಲೇಶ್‌ ಸಣ್ಣ ಜಾತಿಗಳ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಹೆಣಗಾಡುತ್ತಿದ್ದಾರೆ.

India Gate: ಸಿದ್ದರಾಮಯ್ಯರನ್ನು ಕಟ್ಟಿ ಹಾಕಲು ಮೋದಿ, ಶಾ ಜೊತೆ ಸೇರಿ ರಣತಂತ್ರ ರೂಪಿಸಿದ್ರಾ ದೇವೇಗೌಡ?

ಸಣ್ಣ ಜಾತಿಗಳೇ ನಿರ್ಣಾಯಕ

ಮಂಡಲದ ಫಲಾನುಭವಿಗಳಾದ ಲಾಲು ಮತ್ತು ಮುಲಾಯಂ ಅಧಿಕಾರಕ್ಕೆ ಬಂದ ಹೊಸತರಲ್ಲಿ ಯಾದವರಿಂದ ಹಿಡಿದು ಸಣ್ಣ ಸಣ್ಣ ಜಾತಿಗಳು ಈ ನಾಯಕರತ್ತ ಆಸೆಗಣ್ಣಿನಿಂದ ನೋಡುತ್ತಿದ್ದವು. ಹೀಗಾಗಿಯೇ ಚಂಬಲ್‌ನ ಮಲ್ಹಾ ಜಾತಿಯ ಡಕಾಯಿತೆ ಫäಲನ್‌ ದೇವಿ ಮಿರ್ಜಾಪುರಕ್ಕೆ ಹೋಗಿ ಸಮಾಜವಾದಿ ಸಂಸದೆ ಆಗಿದ್ದಳು. ಆದರೆ ಮುಲಾಯಂ ಮತ್ತು ಲಾಲು ಅಧಿಕಾರಕ್ಕೆ ಬಂದಾಗ ಸರ್ಕಾರಿ ಟೆಂಡರ್‌ನಿಂದ ಹಿಡಿದು ವರ್ಗಾವಣೆವರೆಗೆ ಯಾದವರ ಏಕ ಚಕ್ರಾಧಿಪತ್ಯ ಮತ್ತು ದಾದಾಗಿರಿ ನಡೆಯುತ್ತಿತ್ತು. ಹೀಗಾಗಿ ಹಿಂದಿ ಪ್ರದೇಶಗಳಲ್ಲಿ ಮೋದಿ ಉಚ್ಛ್ರಾಯವನ್ನು ಮೇಲ್ಜಾತಿಗಳ ಮತ್ತು ಸಣ್ಣ ಹಿಂದುಳಿದ ಜಾತಿಗಳ ಯಾದವ, ಮುಸ್ಲಿಂ ಪ್ರಾಬಲ್ಯದ ವಿರುದ್ಧದ ಕ್ರೋಢೀಕರಣ ಎನ್ನುವ ರೀತಿಯಲ್ಲಿ ನೋಡಲಾಗುತ್ತದೆ. ಇದಕ್ಕೆ ಮೋದಿಗೆ ಇರುವ ಹಿಂದುಳಿದ ಜಾತಿಯ ಹಿಂದುತ್ವವಾದಿ ಎನ್ನುವ ಹಣೆಪಟ್ಟಿಕೂಡ ಮುಖ್ಯ ಕಾರಣ.

2012 ರಲ್ಲಿ ಅಖಿಲೇಶ್‌ ಮುಖ್ಯಮಂತ್ರಿ ಆಗಿದ್ದು ತಂದೆ ತಂದುಕೊಟ್ಟಅಧಿಕಾರದ ಕಾರಣದಿಂದ. ಆದರೆ ನಂತರದ ಮೂರು ಚುನಾವಣೆಗಳಲ್ಲಿ ಒಮ್ಮೆ ಏಕಾಂಗಿಯಾಗಿ, ಇನ್ನೊಮ್ಮೆ ಕಾಂಗ್ರೆಸ್‌ ಜೊತೆ ಸೇರಿ, ಮಗದೊಮ್ಮೆ ಮಾಯಾವತಿ ಜೊತೆ ಸೇರಿ ಯುದ್ಧ ಮಾಡಿದರೂ ಮೋದಿ ಎದುರು ಏನೂ ಉಪಯೋಗ ಆಗಿಲ್ಲ. ಈಗ ದೊಡ್ಡ ಪಕ್ಷಗಳ ಸಹವಾಸ ಬಿಟ್ಟಿರುವ ಅಖಿಲೇಶ್‌ ಜಿಲ್ಲಾ ಮಟ್ಟದಲ್ಲಿ ಸಕ್ರಿಯರಾಗಿರುವ ಸಣ್ಣ ಸಣ್ಣ ಜಾತಿಗಳ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಈ ಸಣ್ಣ ಹಿಂದುಳಿದ ಜಾತಿಗಳು ಒಂದು ಕಾಲದಲ್ಲಿ ಮೊದಲು ಮುಲಾಯಂ, ಆನಂತರ ಮಾಯಾವತಿ ಜೊತೆಗಿದ್ದವು. 2014ರಲ್ಲಿ ಮೋದಿ ಬಂದ ಮೇಲೆ ಬಿಜೆಪಿ ಜೊತೆಗಿದ್ದವು.

ಅಖಿಲೇಶ್‌ ಜಾತಿ ಗಣತಿಯ ಅಸ್ತ್ರ

ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಖಿಲೇಶ್‌ ಯಾದವ್‌ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ಮಾಡಿಸುವುದಾಗಿ ಹೇಳುತ್ತಿದ್ದಾರೆ. ಹಿಂದುಳಿದ ಜಾತಿಗಳ ಸರಿಯಾದ ಅಂಕಿ ಅಂಶ ಇಲ್ಲದೇ ಸರ್ಕಾರಗಳು ನ್ಯಾಯಾಲಯದ ಎದುರು ಹಿಂದುಳಿದವರ ಮೀಸಲಾತಿ ಹೆಚ್ಚಿಸುವ ಬಗ್ಗೆ ಅಡ್ಡ ಗೋಡೆ ಮೇಲೆ ದೀಪ ಇಡುತ್ತಿವೆ. ಹೀಗಾಗಿ ಜಾತಿ ಗಣತಿ ನಡೆಯಬೇಕು ಎಂದು ಹೇಳುತ್ತಿದ್ದಾರೆ. ಪರಿಶಿಷ್ಟಜಾತಿ ಮತ್ತು ಪಂಗಡಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಇದೆ. ಬ್ರಾಹ್ಮಣ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರ ಮೀಸಲಾತಿಯ ಶೇ.50 ಮಿತಿ ತೆಗೆದು ಅವರ ಜನಸಂಖ್ಯೆ ಇರುವ ಶೇ.10 ಕೊಟ್ಟಿದೆ. ಆ

ದರೆ ಹಿಂದುಳಿದವರು 54 ಪ್ರತಿಶತ ಇದ್ದಾರೆ. ಮೀಸಲಾತಿ 27 ಪ್ರತಿಶತ ಅಷ್ಟೇ ಏಕೆ ಎಂದು ಅಖಿಲೇಶ್‌ ಪರೋಕ್ಷವಾಗಿ ಹೇಳುತ್ತಾ ಅತ್ಯಂತ ಸಣ್ಣ ಹಿಂದುಳಿದ ಜಾತಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಹಿಂದುಳಿದ ಜಾತಿಗಳ ಸಮಸ್ಯೆ ಇರುವುದು ಕೇವಲ ಮೀಸಲಾತಿಯದ್ದಲ್ಲ. ಯಾದವ ಪಕ್ಷಗಳ ರಾಜಕೀಯ ನಡುವಳಿಕೆಯದ್ದು ಮತ್ತು ಪಕ್ಷ ಹಾಗೂ ಅಧಿಕಾರದಲ್ಲಿ ಪಾಲಿನದ್ದು. ಆ ವಿಶ್ವಾಸವನ್ನು ತುಂಬುವಲ್ಲಿ ಸಫಲತೆ ಸಿಕ್ಕರೆ ಸಮಾಜವಾದಿ ಪಕ್ಷದ ವೋಟು ಮತ್ತು ಸೀಟು ಜಾಸ್ತಿ ಆಗಬಹುದು. ಇಲ್ಲವಾದರೆ ವೋಟು 30 ಪ್ರತಿಶತ ಸಿಕ್ಕರೂ ಸೀಟು 100ರ ಗಡಿಗೆ ನಿಲ್ಲಬಹುದು.

ಸೋಲು- ಗೆಲುವು ಚಲ್ತಾ ಹೈ, ನೀವು ಇನ್ನಷ್ಟು ಫಾಸ್ಟ್ ಆಗ್ಬೇಕು: ಬೊಮ್ಮಾಯಿಗೆ ಶಾ ಸಲಹೆ

ಅಭಿವೃದ್ಧಿ ವೋಟು ತಂದೀತೇ?

2012ರಲ್ಲಿ ಮಾಯಾವತಿ ದಿಲ್ಲಿ-ಆಗ್ರಾ ಎP್ಸ…ಪ್ರೆಸ್‌ ಹೆದ್ದಾರಿ ನಿರ್ಮಿಸಿ ವೋಟು ಕೇಳಿದ್ದರು. ಆದರೆ ಜನ ವೋಟು ಕೊಡಲಿಲ್ಲ. 2017ರಲ್ಲಿ ಅಖಿಲೇಶ್‌ ಯಾದವ್‌ ಆಗ್ರಾ-ಲಕ್ನೌ ಎಕ್ಸ್‌ಪ್ರೆಸ್‌ ಹೆದ್ದಾರಿ ನಿರ್ಮಿಸಿ ವೋಟು ಕೇಳಿದ್ದರು. ಜನ ಕೊಡಲಿಲ್ಲ. ಈಗ ಯೋಗಿ ಆದಿತ್ಯನಾಥ ಲಕ್ನೌದಿಂದ ಗಾಜಿಪುರ ನಡುವೆ ಪೂರ್ವಾಂಚಲದಲ್ಲಿ 8 ಪಥದ ಹೆದ್ದಾರಿ ನಿರ್ಮಿಸಿ ಅದರ ಮೇಲೆ ಯುದ್ಧ ವಿಮಾನ ಇಳಿಸಿ ವೋಟು ಕೇಳುತ್ತಿದ್ದಾರೆ. ಬಿಹಾರದಲ್ಲಿ ಅಭಿವೃದ್ಧಿ ಹೆಸರಿನ ಮೇಲೆಯೇ ಜನ ನಿತೀಶ್‌ ಕುಮಾರ್‌ಗೆ ವೋಟು ನೀಡಿದ್ದಾರೆ. ಆದರೆ ಯುಪಿಯಲ್ಲಿ ಅಭಿವೃದ್ಧಿಗಿಂತ ಹಿಂದುತ್ವ ಮತ್ತು ಜಾತಿಗಳ ಮರು ಕ್ರೋಢೀಕರಣದ ಮೇಲೆ ವೋಟು ಬೀಳುವುದು ಜಾಸ್ತಿ.

2014 ರಿಂದ 19ರ ವರೆಗಿನ ಮಾದರಿಯಲ್ಲೇ ಜಾತಿಗಳು ವೋಟು ಮಾಡಿದರೆ ಬಿಜೆಪಿಗೆ ಮರಳಿ ಲಾಭ ಆಗಬಹುದು. ಸ್ವಲ್ಪ ಕ್ರೋಢೀಕರಣಗೊಂಡರೆ ಬಿಜೆಪಿ ವೋಟು ಪ್ರತಿಶತ ಕಡಿಮೆ ಆಗಿ ಸೀಟುಗಳ ಸಂಖ್ಯೆ ತಗ್ಗಬಹುದು. ಆದರೆ ಭಾರೀ ಪ್ರಮಾಣದಲ್ಲಿ ವಿರುದ್ಧವಾಗಿ ಕ್ರೋಢೀಕರಣಗೊಂಡರೆ ಮಾತ್ರ ಬಿಜೆಪಿಗೆ ಕಷ್ಟಆಗಬಹುದು. ಮೋದಿ ಮತ್ತು ಯೋಗಿಗೂ ಬರೀ ಮಾಡಿದ ಕೆಲಸಕ್ಕೆ ವೋಟು ಬೀಳುತ್ತವೆ ಎಂಬ ನಂಬಿಕೆ ಇಲ್ಲ. ಹೀಗಾಗಿ ಆಗಾಗ ಔರಂಗಜೇಬ್‌ ಮೊಘಲರಾದಿಯಾಗಿ ಮುಸ್ಲಿಂ ದಾಳಿಕೋರರು, ದೇಶ ವಿಭಜಕ ಜಿನ್ನಾ ನೆನಪಾಗುತ್ತಾರೆ. ಅರ್ಥ ಸ್ಪಷ್ಟ- ಬಿಜೆಪಿಗೆ ಧರ್ಮ ಅಸ್ತ್ರ ಆದರೆ ಅಖಿಲೇಶ್‌ಗೆ ಜಾತಿಯೇ ಅಸ್ತ್ರ.

ಮಾಯಾವತಿ ಮತ್ತು ಕಾಂಗ್ರೆಸ್‌

ಚುನಾವಣೆಗೆ 60 ದಿನಗಳು ಉಳಿದಿದ್ದರೂ ಯುಪಿಯಲ್ಲಿ ಮಾಯಾವತಿ ಬಗ್ಗೆ ಚರ್ಚೆಯೇ ಇಲ್ಲ. ಆದರೆ ಮಾಯಾವತಿ ಬಳಿ ದಲಿತ, ಜಾಟವ ಮತಗಳು ಗಟ್ಟಿಯಾಗಿಯೇ ಇವೆ. ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ಸದ್ದೇನೋ ಮಾಡುತ್ತಿದ್ದಾರೆ. ಆದರೆ ಯೋಗಿ ಮತ್ತು ಅಖಿಲೇಶ್‌ ಹಗ್ಗ ಜಗ್ಗಾಟದಲ್ಲಿ ಕಾಂಗ್ರೆಸ್‌ ಬಳಿ ಕಟ್ಟಾವೋಟ್‌ ಬ್ಯಾಂಕ್‌ ಉಳಿದಿಲ್ಲ. ಸ್ವಲ್ಪ ಮಟ್ಟಿಗೆ ಕಾಂಗ್ರೆಸ್‌ ಜೊತೆಗಿದ್ದ ಮುಸ್ಲಿಮರು ಬಿಜೆಪಿಯನ್ನು ಸೋಲಿಸಬೇಕು ಅನ್ನುವ ಭರದಲ್ಲಿ ಅಖಿಲೇಶ್‌ ಕಡೆ ವಾಲುತ್ತಿದ್ದಾರೆ. ಹೇಗೇ ಆದರೂ ಯಾದವ ಮತ್ತು ಮುಸ್ಲಿಮರು ಅಧಿಕಾರಕ್ಕೆ ಬರೋದನ್ನು ತಡೆಯಲು ಬ್ರಾಹ್ಮಣರು-ಬನಿಯಾಗಳು ಬಿಜೆಪಿಯತ್ತ ಅನಿವಾರ್ಯವಾಗಿ ವಾಲುತ್ತಿದ್ದಾರೆ.

ಕೆಲವರು ಹೇಳುವ ಪ್ರಕಾರ ಕೊನೆ ಗಳಿಗೆಯಲ್ಲಿ ಪಂಜಾಬ್‌ನ ಜೊತೆಗೆ ಯುಪಿಯಲ್ಲಿ ಕೂಡ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಬಹುದು. ಹಾಗೇನಾದರೂ ಆದರೆ ಅದು ಬಿಜೆಪಿಗಿಂತ ಅಖಿಲೇಶ್‌ ಯಾದವ್‌ಗೆ ಹೆಚ್ಚು ನಷ್ಟತರಬಹುದು. ಆದರೆ ಪಶ್ಚಿಮ ಬಂಗಾಳದಲ್ಲಿ ಮಮತಾ ವರ್ಸಸ್‌ ಮೋದಿ ಮಾತ್ರ ಆದಾಗ ಬಿಜೆಪಿ ವಿರೋಧಿ ಮತಗಳು ಎಡ ಪಕ್ಷಗಳು ಮತ್ತು ಕಾಂಗ್ರೆಸ್‌ನಿಂದ ಮಮತಾಗೆ ವರ್ಗಾವಣೆ ಆದಂತೆ ಯುಪಿಯಲ್ಲೂ ಆಗಬಹುದು. ಬಹುತೇಕ ಅದಕ್ಕಾಗಿಯೇ ಅಖಿಲೇಶ್‌ ಬಿಜೆಪಿ ವಿರುದ್ಧ ಇಲ್ಲಿ ಇರುವುದು ನಾನೊಬ್ಬನೇ ಎಂಬಂತೆ ಪ್ರಚಾರ ನಡೆಸುತ್ತಿದ್ದಾರೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

Follow Us:
Download App:
  • android
  • ios