ನವದೆಹಲಿ(ಜು.27): ಚೀನಾದ ಪ್ರಖ್ಯಾತ ‘ಅಲಿಬಾಬಾ’ ಕಂಪನಿ ಹಾಗೂ ಅದರ ಸಂಸ್ಥಾಪಕ ಜಾಕ್‌ ಮಾ ಆವರಿಗೆ ಭಾರತದ ಗುಡಗಾಂವ್‌ ಜಿಲ್ಲಾ ನ್ಯಾಯಾಲಯ ವಿಚಾರಣೆಗೆ ಸಮನ್ಸ್‌ ಜಾರಿ ಮಾಡಿದೆ.

ತಮ್ಮನ್ನು ಅಲಿಬಾಬಾದ ಅಂಗ ಸಂಸ್ಥೆ ಯುಸಿ ವೆಬ್‌ ಕಂಪನಿಯಿಂದ ಅಕ್ರಮವಾಗಿ ವಜಾ ಮಾಡಲಾಗಿದೆ ಎಂದು ಪದಚ್ಯುತ ಉದ್ಯೋಗಿ ಪುಷ್ಪೇಂದ್ರ ಸಿಂಗ್‌ ಪರ್ಮಾರ್‌ ನೀಡಿದ ದೂರಿನ ಅನ್ವಯ ಜಾಕ್‌ ಮಾ ಅವರಿಗೆ ವಿಚಾರಣೆಗೆ ಬುಲಾವ್‌ ಹೋಗಿದೆ.

ಜುಲೈ 29ರಂದು ವಕೀಲರ ಮೂಲಕ ಅಥವಾ ಖುದ್ದು ಹಾಜರಾಗುವಂತೆ ಸೂಚಿಸಲಾಗಿದೆ. ‘ಕಂಪನಿಯ ಆ್ಯಪ್‌ಗಳಲ್ಲಿ ನಕಲಿ ಸುದ್ದಿಗಳು ಹರಿದಾಡುತ್ತಿದ್ದವು ಹಾಗೂ ಚೀನಾಗೆ ಸಂಬಂಧಿಸಿದ ಸುದ್ದಿಗಳಲ್ಲಿ ಚೀನಾ ವಿರೋಧಿ ಅಂಶಗಳೇನಾದರೂ ಇದ್ದರೆ ಅವುಗಳಿಗೆ ಕತ್ತರಿ ಪ್ರಯೋಗಿಸಿ ಪ್ರಸಾರ ಮಾಡಲಾಗುತ್ತಿತ್ತು. ಇದನ್ನು ಗಮನಿಸಿ ಇದಕ್ಕೆ ನಾನು ಆಕ್ಷೇಪ ವ್ಯಕ್ತಪಡಿಸಿದ್ದೆ. ಇದೇ ಕಾರಣಕ್ಕಾಗಿ ನನ್ನನ್ನು ವಜಾ ಮಾಡಲಾಗಿದೆ’ ಎಂದು ಪರ್ಮಾರ್‌ ದೂರು ಸಲ್ಲಿಸಿದ್ದಾರೆ.

ತಮ್ಮ ವಜಾಗೆ ಪ್ರತಿಯಾಗಿ ಅವರು 2 ಕೋಟಿ ರು. ಪರಿಹಾರವನ್ನೂ ಕೇಳಿದ್ದಾರೆ. ಅಲಿಬಾಬಾ ಕಂಪನಿಯ ಯುಸಿ ಬ್ರೌಸರ್‌, ಯುಸಿ ನ್ಯೂಸ್‌ ಸೇರಿದಂತೆ 59 ಚೀನೀ ಆ್ಯಪ್‌ಗಳನ್ನು ಭಾರತ ಸರ್ಕಾರ ಇತ್ತೀಚೆಗೆ ನಿಷೇಧಿಸಿತ್ತು. ಇದರ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ.