Asianet Suvarna News Asianet Suvarna News

ಅಯೋಧ್ಯೆ ರಾಮಮಂದಿರದಲ್ಲಿ ಅಕ್ಷತೆ ಪೂಜೆ: ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ

 2024ರ ಜ.22ರಂದು ಅಯೋಧ್ಯೆಯ ನೂತನ ರಾಮಮಂದಿರಲ್ಲಿ ನಡೆಸಲು ನಿಗದಿಯಾಗಿರುವ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಭಾನುವಾರ ಇಲ್ಲಿ ಅಕ್ಷತೆ ಪೂಜೆಯೊಂದಿಗೆ ಅಧಿಕೃತ ಚಾಲನೆ ನೀಡಲಾಗಿದೆ. 

Akshate Puja at Ayodhya Ram Mandir Officialy launch of Lord Rama's coronation program akb
Author
First Published Nov 6, 2023, 6:21 AM IST | Last Updated Nov 6, 2023, 7:02 AM IST

ಅಯೋಧ್ಯಾ: 2024ರ ಜ.22ರಂದು ಅಯೋಧ್ಯೆಯ ನೂತನ ರಾಮಮಂದಿರಲ್ಲಿ ನಡೆಸಲು ನಿಗದಿಯಾಗಿರುವ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಭಾನುವಾರ ಇಲ್ಲಿ ಅಕ್ಷತೆ ಪೂಜೆಯೊಂದಿಗೆ ಅಧಿಕೃತ ಚಾಲನೆ ನೀಡಲಾಗಿದೆ. ಅಯೋಧ್ಯೆ ರಾಮ ದರ್ಬಾರ್‌ನಲ್ಲಿ 100 ಕ್ವಿಂಟಾಲ್‌ ಅಕ್ಕಿಗೆ ಶುದ್ಧ ಅರಶಿಣ ಮತ್ತು ತುಪ್ಪವನ್ನು ಬೆರೆಸಿ ಮಿಶ್ರಣ ಮಾಡಿ ಅಕ್ಷತೆ ಪೂಜೆ ನಡೆಸಲಾಗಿದೆ.

ಈ ಅಕ್ಷತೆಯನ್ನು ವಿಶ್ವ ಹಿಂದೂ ಪರಿಷತ್‌ನ 90 ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಮತ್ತು ಸದ್ಯ ಅಕ್ಷತೆ ಪೂಜೆಯಲ್ಲಿ ಭಾಗವಹಿಸಿದ ಪದಾಧಿಕಾರಿಗಳಿಗೆ ನೀಡಲಾಗುತ್ತದೆ. ಅದನ್ನು ಅವರು 2024ರ ಜ.22ರಕ್ಕೂ ಮುನ್ನ ದೇಶದ ಪ್ರತಿ ರಾಮಭಕ್ತರ ಮನೆಗೂ ತಲುಪಿಸುವ ಕೆಲಸ ಮಾಡಲಿದ್ದಾರೆ ಎಂದು ರಾಮಜನ್ಮಭೂಮಿ ಟ್ರಸ್ಟ್‌ ಹೇಳಿದೆ. ಈ ನಡುವೆ, ಜ.22ರಂದು ನಡೆಯುವ ಪ್ರಾಣ ಪ್ರತಿಷ್ಠಾಪನೆಯ ಮರುದಿನವಾದ ಜ.23ರಿಂದ ಭಕ್ತರಿಗೆ ನೂತನ ದೇಗುಲದಲ್ಲಿ ರಾಮನ ದರ್ಶನಕ್ಕೆ ಅವಕಾಶ ಲಭಿಸಲಿದೆ ಎಂದು ಕೆಲವು ಮಾಧ್ಯಮ ವರದಿಗಳು ಹೇಳಿವೆ.

ಆಯೋಧ್ಯೆ ಭವ್ಯ ರಾಮ ಮಂದಿರದೊಳಗೆ ಏನೇನಿದೆ? ಫೋಟೋ ಹಂಚಿಕೊಂಡ ಜನ್ಮಭೂಮಿ ಟ್ರಸ್ಟ್!

ರಾಜಸ್ಥಾನ ಕುಶಲಕರ್ಮಿಗಳಿಂದ ಅಮೃತಶಿಲೆ ಸಿಂಹಾಸನ ನಿರ್ಮಾಣ

ಮತ್ತೊಂದೆಡೆ  ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯೊಳಗೆ 8 ಅಡಿ ಎತ್ತರದ ಚಿನ್ನ ಲೇಪಿತ ಅಮೃತಶಿಲೆಯ ಸಿಂಹಾಸನದ ಮೇಲೆ ರಾಮಲಲ್ಲಾನ ವಿಗ್ರಹವನ್ನು ಇರಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರು ತಿಳಿಸಿದ್ದಾರೆ. ರಾಜಸ್ಥಾನದ ಕುಶಲಕರ್ಮಿಗಳು ಸಿಂಹಾಸನವನ್ನು ತಯಾರಿಸಲಾಗುತ್ತಿದ್ದು, ಡಿ.15ರೊಳಗೆ ಅದು ಅಯೋಧ್ಯೆಗೆ ತಲುಪಲಿದೆ. ರಾಮಮಂದಿರದ ಗರ್ಭಗುಡಿಯಲ್ಲಿ ಸಿಂಹಾಸನವನ್ನು ಇರಿಸಲಾಗುವುದು. ಇದು 8 ಅಡಿ ಎತ್ತರ, 3 ಅಡಿ ಉದ್ದ ಮತ್ತು 4 ಅಡಿ ಅಗಲ ಇರಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ (Anil Mishra) ತಿಳಿಸಿದ್ದಾರೆ.

ಮಗಳನ್ನು ಬಿಡಲು ಬಂದ ಅಪ್ಪ ಚಲಿಸುವ ರೈಲಿನಿಂದ ಇಳಿಯುವಾಗ ಕೆಳಗೆ ಬಿದ್ದು ಸಾವು: ದೃಶ್ಯ ಸಿಸಿಯಲ್ಲಿ ಸೆರೆ

ಇದೇ ವೇಳೆ ಗರ್ಭಗುಡಿಯ (sanctorum) ನಿರ್ಮಾಣ ಪೂರ್ಣಗೊಂಡಿದೆ ಎಂದ ಮಿಶ್ರಾ, ಡಿ.15 ರೊಳಗೆ ರಾಮ ಮಂದಿರದ ನೆಲ ಅಂತಸ್ತು ಸಿದ್ಧವಾಗಬೇಕಿದೆ. ಮೊದಲ ಅಂತಸ್ತಿನ ಶೇ.80 ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದಿದ್ದಾರೆ. ಭಕ್ತರು ಹೆಚ್ಚಿನ ಪ್ರಮಾಣದ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ದಾನ ಮಾಡಿದ್ದಾರೆ. ಆದರೆ ಅವುಗಳ ಸಂಗ್ರಹ ಕಷ್ಟ. ಹೀಗಾಗಿ ಪ್ರತಿಷ್ಠಿತ ಸಂಸ್ಥೆಯ ಮಾರ್ಗದರ್ಶನದಲ್ಲಿ ಅವುಗಳನ್ನುಕರಗಿಸಿ ಸಂಗ್ರಹಿಸಿಡುವ ಕೆಲಸ ನಡೆದಿದೆ ಎಂದರು.

ಜ.22ಕ್ಕೆ ರಾಮನ ವಿಗ್ರಹ ಹೊತ್ತು ಮೋದಿ 500 ಮೀಟರ್‌ ನಡಿಗೆ?

ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಭವ್ಯ ದೇಗುಲ ಜ.22ರಂದು ಲೋಕಾರ್ಪಣೆಯಾಗಲಿದ್ದು, ಅಂದು ಪ್ರಧಾನಿ ನರೇಂದ್ರ ಮೋದಿ ಅವರು ತಾತ್ಕಾಲಿಕ ದೇಗುಲದಲ್ಲಿರುವ ಬಾಲರಾಮನ (ರಾಮಲಲ್ಲಾ) ವಿಗ್ರಹವನ್ನು ಹೊಸ ಮಂದಿರಕ್ಕೆ ಒಯ್ಯುವ ಸಾಧ್ಯತೆ ಇದೆ. ಶಿಷ್ಟಾಚಾರವನ್ನು ಬದಿಗೊತ್ತಿ 500 ಮೀಟರ್‌ ಬರಿಗಾಲಲ್ಲಿ ಕ್ರಮಿಸಿ, ಇಷ್ಟು ವರ್ಷ ಜನರು ಆರಾಧಿಸಿರುವ ರಾಮಲಲ್ಲಾ ವಿಗ್ರಹವನ್ನು ಹೊಸ ಮಂದಿರದ ಗರ್ಭಗುಡಿಗೆ ಮೋದಿ ಅವರು ತೆಗೆದುಕೊಂಡು ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇಸ್ರೇಲಿ ರಾಯಭಾರಿಯನ್ನು ಭೇಟಿಯಾದ ಕಂಗನಾ ರಣಾವತ್​: ಅಯೋಧ್ಯೆಯಲ್ಲಿ ರಾಮ್​ಲಲ್ಲಾ ದರ್ಶನ

ತಾತ್ಕಾಲಿಕ ಮಂದಿರದಲ್ಲಿ ಶ್ರೀರಾಮಚಂದ್ರನ ‘ಚಲ ಮೂರ್ತಿ’ ಮೂರ್ತಿ ಇದೆ. ಅದನ್ನು ಹೊಸ ಮಂದಿರದ ಗರ್ಭಗುಡಿಗೆ ತೆಗೆದುಕೊಂಡು ಹೋಗುವಂತೆ ಮೋದಿ ಅವರನ್ನು ದೇಗುಲ ಸಮಿತಿ ಸಮಾರಂಭದ ವೇಳೆ ಕೋರಿಕೊಳ್ಳುವ ಸಾಧ್ಯತೆ ಇದೆ. ಮೋದಿ ಅವರು ಆ ಜವಾಬ್ದಾರಿ ನಿರ್ವಹಿಸುವ ವೇಳೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಮತ್ತಿತರ ಗಣ್ಯರು ಉಪಸ್ಥಿತರಿರುವ ನಿರೀಕ್ಷೆ ಇದೆ ಎಂದು ವರದಿಗಳು ತಿಳಿಸಿವೆ.

ಸಹಸ್ರಾರು ಸ್ವಾಮೀಜಿಗಳಿಗೆ ಆಹ್ವಾನ:

ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಸಮಾರಂಭಕ್ಕೆ ದೇಶದ ಪ್ರಮುಖ ಅರ್ಚಕರು, ವಿವಿಧ ಮಠ, ದೇಗುಲ, ಧಾರ್ಮಿಕ ಸಂಸ್ಥೆಗಳ 3500 ಸಾಧು- ಸಂತರನ್ನು ಆಹ್ವಾನಿಸಲಾಗುತ್ತದೆ. ಇದಲ್ಲದೆ ಪ್ರಸಿದ್ಧ ಉದ್ಯಮಿಗಳು, ವೃತ್ತಿಪರರು (ವೈದ್ಯರು, ವಕೀಲರು, ಎಂಜಿನಿಯರ್‌ಗಳು, ಚಿತ್ರನಟರು ಸೇರಿದಂತೆ), ಪದ್ಮಪ್ರಶಸ್ತಿ ಪುರಸ್ಕೃತರು ಸೇರಿದಂತೆ 4500 ಮಂದಿಗೆ ಆಹ್ವಾನ ನೀಡಲು ಉದ್ದೇಶಿಸಲಾಗಿದೆ. ಕೆಲವೊಂದು ರಾಜ್ಯ ಹಾಗೂ ದೇಶಗಳ ಮುಖ್ಯಸ್ಥರನ್ನೂ ಆಹ್ವಾನಿಸಲಾಗುತ್ತದೆ. ಅಯೋಧ್ಯೆ ಕರಸೇವೆಯ ವೇಳೆ ಪೊಲೀಸರ ಗುಂಡೇಟಿಗೆ ಬಲಿಯಾದ ಕರಸೇವಕರ ಕುಟುಂಬ ಸದಸ್ಯರನ್ನೂ ಸಮಾರಂಭಕ್ಕೆ ಕರೆಸಲಾಗುತ್ತದೆ.

ಅಯೋಧ್ಯೆ ಮಸೀದಿ ನಿರ್ಮಾಣ ವಿನ್ಯಾಸ ಮಧ್ಯಪ್ರಾಚ್ಯ ದೇಶಗಳ ಶೈಲಿಗೆ ಬದಲಾಯಿಸಿದ ಮುಸ್ಲಿಂ ಟ್ರಸ್ಟ್

ಈಗ ಇರುವ ಬಾಲರಾಮನ ವಿಗ್ರಹ ಏನಾಗುತ್ತೆ?

ತಾತ್ಕಾಲಿಕ ಮಂದಿರದಲ್ಲಿ ಬಾಲರಾಮನ (Balram Idol) ವಿಗ್ರಹವಿದೆ. ಅದು ಚಲ ವಿಗ್ರಹವಾಗಿದೆ. ಅಂದರೆ ಬೇರೆ ಕಡೆ ಒಯ್ಯಬಹುದು. ಆ ಚಲ ವಿಗ್ರಹವನ್ನು ನೂತನ ದೇಗುಲದ ಒಂದು ಪವಿತ್ರ ಸ್ಥಳದಲ್ಲಿ ಇಡಲಾಗುತ್ತದೆ. ಈ ನಡುವೆ, ಬಾಲರಾಮನ 5 ಅಡಿ ಎತ್ತರದ ಮೂರು ವಿಗ್ರಹಗಳ ಕೆತ್ತನೆ ಕಾರ್ಯ ನಡೆಯುತ್ತಿದೆ. ಆ ಪೈಕಿ ಒಂದನ್ನು ಅಚಲ ಮೂರ್ತಿಯಾಗಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಶುಭ ಸಂದರ್ಭಗಳಲ್ಲಿ ಅಚಲ ಮೂರ್ತಿಯ ಪಕ್ಕದಲ್ಲಿ ಚಲ ಮೂರ್ತಿಯನ್ನು ಇಟ್ಟು ಪೂಜಿಸಲು ಉದ್ದೇಶಿಸಲಾಗಿದೆ.

ಸದ್ಯ ನಿರ್ಮಾಣ ಹಂತದಲ್ಲಿರುವ ಮೂರು ರಾಮಲಲ್ಲಾ ವಿಗ್ರಹಗಳ (Ramlalla Idol) ಪೈಕಿ ಗರ್ಭಗುಡಿಯಲ್ಲಿ ಯಾವುದನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಈವರೆಗೂ ತೀರ್ಮಾನವಾಗಿಲ್ಲ. ಅಯೋಧ್ಯೆ ಮಂದಿರದಲ್ಲಿ ಮೂರು ಮಹಡಿಗಳು ಇರಲಿವೆ. ಕೆಳಭಾಗದಲ್ಲಿರುವ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗುವ ವಿಗ್ರಹವೇ ಮುಖ್ಯ ಮೂರ್ತಿಯಾಗಿರುತ್ತದೆ. ಮೂರರ ಪೈಕಿ ಒಂದನ್ನು ಅಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಉಳಿದ ಎರಡನ್ನು 2 ಹಾಗೂ 3ನೇ ಮಹಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

 

Latest Videos
Follow Us:
Download App:
  • android
  • ios