ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಮಹಿಳಾ ಐಪಿಎಸ್ ಅಧಿಕಾರಿಗೆ ಧಮ್ಕಿ ಹಾಕಿರುವ ಆರೋಪ ಕೇಳಿಬಂದಿದ್ದು, ಈ ಘಟನೆಯ ವೀಡಿಯೋ ವೈರಲ್ ಆಗಿದೆ.

ಸೋಲಾಪುರ: ಇತ್ತೀಚೆಗಷ್ಟೇ ರಾಜ್ಯದಲ್ಲಿ ರಾಜ್ಯಾಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ. ದೇಶಪಾಂಡೆ ಮಹಿಳಾ ಪತ್ರಕರ್ತೆಯ ಜೊತೆ ಕೆಟ್ಟದಾಗಿ ಮಾತನಾಡಿ ವಿವಾದ ಸೃಷ್ಟಿಸಿದರು. ಈ ಘಟನೆ ಮಾಸುವ ಮೊದಲೇ ಈಗ ಮಹಾರಾಷ್ಟ್ರದಲ್ಲಿ ಅಲ್ಲಿನ ಡಿಸಿಎಂ ಅಜಿತ್ ಪವಾರ್‌ ಐಪಿಎಸ್‌ ಅಧಿಕಾರಿಯೊಬ್ಬರಿಗೆ ದೂರವಾಣಿ ಕರೆ ಮಾಡಿ ಧಮ್ಕಿ ಹಾಕಿರುವ ವೀಡಿಯೋವೊಂದು ವೈರಲ್‌ ಆಗಿದೆ.

ಮಹಿಳಾ ಐಎಎಸ್ ಅಧಿಕಾರಿಗೆ ಒತ್ತಡ ಹೇರಿದ ಆರೋಪ ಅಜಿತ್ ಪವಾರ್ ವಿರುದ್ಧ ಕೇಳಿ ಬಂದಿದೆ. ಅಕ್ರಮವಾಗಿ ನಡೆಯುತ್ತಿದ್ದ ಮಣ್ಣು ಉತ್ಖನನ ವಿರುದ್ಧ ಕ್ರಮಕ್ಕೆ ಮುಂದಾಗಿದ್ದ ಮಹಿಳಾ ಐಪಿಎಸ್ ಅಧಿಕಾರಿಗೆ ಈ ವಿಚಾರದಲ್ಲಿ ತಲೆ ಹಾಕದಂತೆ ಧಮ್ಕಿ ಹಾಕಿದ ಆರೋಪ ಅಜಿತ್ ಪವಾರ್ ವಿರುದ್ಧ ಕೇಳಿ ಬಂದಿದೆ. ಮಹಾರಾಷ್ಟ್ರದ ಸೋಲಾಪುರದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವೀಡಿಯೋ ವೈರಲ್ ಆಗಿದೆ. ಸೋಲಾಪುರದ ಕರ್ಮಲಾ ತಾಲೂಕಿನ ಕುರ್ದು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆದರೆ ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪವಾರ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಕುರ್ದು ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಮಣ್ಣು ಉತ್ಖನನದ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ಆ ಸ್ಥಳಕ್ಕೆ ಭೇಟಿ ನೀಡಿದ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಅಂಜನಾ ಕೃಷ್ಣಾ ಅವರು ಅಲ್ಲಿ ಕ್ರಮಕ್ಕೆ ಮುಂದಾಗಿದ್ದರು. ಇಲ್ಲಿ ಮೊರಾಮ್ ಎಂದು ಕರೆಯಲ್ಪಡುವ ರಸ್ತೆ ನಿರ್ಮಾಣದಲ್ಲಿ ಹೆಚ್ಚಾಗಿ ಬಳಸುವ ಮಣ್ಣನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಆದರೆ ಈ ವಿಚಾರದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಮಧ್ಯಪ್ರವೇಶಿಸಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಕೈಬಿಡುವಂತೆ ಆಗ್ರಹಿಸಿದ್ದಾರೆ ಎಂದು ವರದಿಯಾಗಿದೆ.

ಘಟನಾ ಸ್ಥಳದಲ್ಲಿ ಅಧಿಕಾರಿಗಳೊಂದಿಗೆ ಗ್ರಾಮಸ್ಥರು ವಾಗ್ವಾದ ನಡೆಸಿದ್ದಾರೆ. ಈ ವೇಳೆ ಸ್ಥಳೀಯ ಎನ್‌ಸಿಪಿ ನಾಯಕರು ಮಧ್ಯಪ್ರವೇಶಿಸಿದ್ದಾರೆ. ಪಕ್ಷದ ಕಾರ್ಯಕರ್ತ ಬಾಬಾ ಜಗ್ಪತ್ ಅವರು ಅಜಿತ್ ಪವಾರ್ ಅವರಿಗೆ ಣೇರವಾಗಿ ಕರೆ ಮಾಡಿ ಬಳಿಕ ತಮ್ಮ ಫೋನನ್ನು ಅಧಿಕಾರಿ ಅಂಜನಾ ಕೃಷ್ಣಾ ಅವರಿಗೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಹಂಚಿಕೊಂಡಿರುವ ಈ ವೀಡಿಯೊದಲ್ಲಿ, ಅಜಿತ್ ಪವಾರ್ ಜಗ್ಪತ್‌ ಅವರ ಫೋನ್‌ನಿಂದ ಅಧಿಕಾರಿ ಅಂಜನಾ ಕೃಷ್ಣ ಅವರೊಂದಿಗೆ ಮಾತನಾಡುತ್ತಿರುವುದು ಕೇಳಿಸುತ್ತಿದೆ.

ನೀವು ಏನು ಹೇಳುತ್ತಿದ್ದೀರಿ ಎಂದು ನನಗೆ ಅರ್ಥವಾಗುತ್ತಿದೆ. ಆದರೆ ನಾನು ಉಪಮುಖ್ಯಮಂತ್ರಿ ಅವರೊಂದಿಗೆ ಮಾತನಾಡುತ್ತಿದ್ದೇನೆಯೇ ಎಂದು ನನಗೆ ಗೊತ್ತಾಗುತ್ತಿಲ್ಲ. ದಯವಿಟ್ಟು ನನ್ನ ಸಂಖ್ಯೆಗೆ ನೇರವಾಗಿ ಕರೆ ಮಾಡಲು ಸಾಧ್ಯವೇ ಎಂದು ಐಪಿಎಸ್ ಅಧಿಕಾರಿ ಡಿಸಿಎಂ ಬಳಿ ಕೇಳಿದ್ದಾರೆ. ಆದರೆ ಐಪಿಎಸ್ ಅಧಿಕಾರಿಯ ಸ್ಪಂದನೆ ಕೇಳಿ ಅಜಿತ್ ಪವಾರ್ ಅವರು ಸಿಟ್ಟುಗೊಂಡಿದ್ದು, ನಾನು ನಿಮ್ಮ ವಿರುದ್ಧವೇ ಕ್ರಮ ಕೈಗೊಳ್ಳುತ್ತೇನೆ. ನಾನೇ ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ ಮತ್ತು ನೀವು ನೇರವಾಗಿ ನಿಮಗೆ ಕರೆ ಮಾಡಲು ಕೇಳುತ್ತಿದ್ದೀರಿ. ನೀವು ನನ್ನನ್ನು ನೋಡಲು ಬಯಸುತ್ತೀರಾ. ನನ್ನ ಫೋನ್ ನಂಬರ್ ತೆಗೆದುಕೊಂಡು ವಾಟ್ಸಾಪ್ ಕರೆ ಮಾಡಿ. ನಿಮಗೆ ಹೀಗೆ ಮಾತನಾಡಲು ಎಷ್ಟು ಧೈರ್ಯ ಎಂದು ಅಧಿಕಾರಿಗೆ ಸಚಿವರು ಧಮ್ಕಿ ಹಾಕಿದ್ದಾರೆ.

ಅಲ್ಲದೇ ಅಧಿಕಾರಿ ಅಂಜನಾ ಕೃಷ್ಣಾ ಅವರಿಗೆ ಸಚಿವ ಪವಾರ್ ಧ್ವನಿ ಗುರುತಿಸಲು ಸಾಧ್ಯವಾಗದ ಕಾರಣ, ಅಜಿತ್ ಪವಾರ್ ಅವರು ನಂತರ ವೀಡಿಯೊ ಕರೆ ಮಾಡಿ, ತಾವು ಕೈಗೊಳ್ಳುತ್ತಿರುವ ಕ್ರಮವನ್ನು ನಿಲ್ಲಿಸುವಂತೆ ಕಟ್ಟುನಿಟ್ಟಾಗಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕೃಷ್ಣಾ ತನಗೆ ನೀವು ಕರೆ ಮಾಡಿದ್ದು ಎಂದು ಗೊತ್ತಾಗಿಲ್ಲ ಎಂದು ಹೇಳುತ್ತಾರೆ ಅದಕ್ಕೆ ಪವಾರ್ ನನ್ನ ಮುಖ ನೋಡಿ ಆದರೂ ಗುರುತಿಸುತ್ತೀರಾ ಎಂದು ಕೇಳಿದ್ದಾರೆ. ಈ ವೀಡಿಯೋ ಈಗ ಭಾರಿ ವೈರಲ್ ಆಗ್ತಿದೆ. ಅಜಿತ್ ಪವಾರ್ ಅವರ ಎನ್‌ಸಿಪಿ ಕಾರ್ಯಕರ್ತರು ಪವಾರ್ ಅವರನ್ನು ಸಮರ್ಥಿಸಿಕೊಂಡಿದ್ದು, ಅವರ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಅನಿಲ್ ಅಂಬಾನಿಗೆ ಮತ್ತೊಂದು ಸಂಕಷ್ಟ: ಬ್ಯಾಂಕ್ ಆಫ್ ಬರೋಡಾದಿಂದ ರಿಲಯನ್ಸ್‌ ಕಂಪನಿ ವಿರುದ್ಧ ವಂಚನೆ ಆರೋಪ

ಇದನ್ನೂ ಓದಿ: ಮೋದಿ ಜೊತೆಗಿನ ಟ್ರಂಪ್‌ ವೈಯಕ್ತಿಕ ಬಾಂಧವ್ಯಕ್ಕೂ ಕತ್ತರಿ: ಅಮೆರಿಕಾದ ಮಾಜಿ ಅಧಿಕಾರಿ