ಅಮೆರಿಕಾ ಹೇರಿದ ತೆರಿಗೆ ಯುದ್ಧದಿಂದ ಭಾರತ-ಅಮೆರಿಕ ರಾಜತಾಂತ್ರಿಕ ಸಂಬಂಧ ಹಾಗೂ ಮೋದಿ-ಟ್ರಂಪ್ ವೈಯಕ್ತಿಕ ಬಾಂಧವ್ಯಕ್ಕೆ ಹಾನಿಯಾಗಿದೆ ಎಂದು ಅಮೆರಿಕದ ಮಾಜಿ ಅಧಿಕಾರಿ ಜಾನ್ ಬೋಲ್ಟನ್ ಅಭಿಪ್ರಾಯಪಟ್ಟಿದ್ದಾರೆ. 

ಭಾರತದ ಮೇಲೆ ಅಮೆರಿಕಾ ಹೇರಿದ ತೆರಿಗೆ ಯುದ್ಧದಿಂದ ಕೇವಲ ಭಾರತದ ಜೊತೆಗಿನ ರಾಜತಾಂತ್ರಿಕ ಸಂಬಂಧ ಮಾತ್ರವಲ್ಲದೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಹೊಂದಿದ್ದ ವೈಯಕ್ತಿಕ ಬಾಂಧವ್ಯಕ್ಕೂ ಹಾನಿಯಾಗಿದೆ ಎಂದು ಅಮೆರಿಕಾದ ಮಾಜಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉತ್ತಮ ವೈಯಕ್ತಿಕ ಸಂಬಂಧ ಹೊಂದಿದ್ದರು, ಆದರೆ ಈಗ ಅದು ಇಲ್ಲವಾಗಿದೆ. ಅಮೆರಿಕದ ನಾಯಕನೊಂದಿಗಿನ ನಿಕಟ ಸಂಬಂಧಗಳು ವಿಶ್ವ ನಾಯಕರನ್ನು ಕೆಟ್ಟ ಸ್ಥಿತಿಯಿಂದ ರಕ್ಷಿಸಲು ಸಾಧ್ಯವಿಲ್ಲ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಹೇಳಿದ್ದಾರೆ.

ಟ್ರಂಪ್ ಅಂತಾರಾಷ್ಟ್ರೀಯ ಸಂಬಂಧವನ್ನು ವೈಯಕ್ತಿಕವಾಗಿ ನೋಡುತ್ತಾರೆ:

ಎರಡು ದಶಕಗಳಲ್ಲಿ ಭಾರತ ಅಮೆರಿಕ ನಡುವಿನ ಸಂಬಂಧ ಬಹುಶಃ ಅತ್ಯಂತ ಕೆಟ್ಟ ಹಂತ ತಲುಪಿದ ಹಿನ್ನೆಲೆಯಲ್ಲಿ ಬೋಲ್ಟನ್ ಅವರ ಈ ಹೇಳಿಕೆಗಳು ಮುನ್ನೆಲೆಗೆ ಬಂದಿವೆ. ಟ್ರಂಪ್ ಅವರ ಸುಂಕ ನೀತಿ ವಿರುದ್ಧ ಟ್ರಂಪ್ ಆಡಳಿತದ ಅಧಿಕಾರಿಗಳು ನಿರಂತರ ಟೀಕಿಸುತ್ತಿದ್ದಾರೆ. ಟ್ರಂಪ್ ಅಂತರರಾಷ್ಟ್ರೀಯ ಸಂಬಂಧಗಳನ್ನು ನಾಯಕರೊಂದಿಗಿನ ತಮ್ಮ ವೈಯಕ್ತಿಕ ಸಂಬಂಧಗಳ ನೋಟದಿಂದ ನೋಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಅವರು ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರೆ, ಅಮೆರಿಕವು ರಷ್ಯಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತದೆ ಎಂದು ಅವರು ಇತ್ತೀಚೆಗೆ ಬ್ರಿಟಿಷ್ ಮಾಧ್ಯಮ ಪೋರ್ಟಲ್ ಎಲ್‌ಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮೋದಿ ಜೊತೆ ಹೊಂದಿದ್ದ ವೈಯಕ್ತಿಕ ಸಂಬಂಧಕ್ಕೆ ಕೋಕ್:

ಟ್ರಂಪ್ ಆಡಳಿತದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದ ಬೋಲ್ಟನ್, ತಮ್ಮ ಮಾಜಿ ಬಾಸ್ ವಿರುದ್ಧ ಬಹಳ ಟೀಕೆ ವ್ಯಕ್ತಪಡಿಸಿದ್ದಾರೆ. ಟ್ರಂಪ್ ಅವರು ಮೋದಿ ಅವರೊಂದಿಗೆ ವೈಯಕ್ತಿಕವಾಗಿ ಉತ್ತಮ ಸಂಬಂಧ ಹೊಂದಿದ್ದರು. ಅದು ಈಗ ಹೋಗಿದೆ ಎಂದು ನಾನು ಭಾವಿಸುತ್ತೇನೆ, ಮತ್ತು ಇದು ಎಲ್ಲರಿಗೂ ಒಂದು ಪಾಠವಾಗಿದೆ, ಉದಾಹರಣೆಗೆ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್, ಒಳ್ಳೆಯ ವೈಯಕ್ತಿಕ ಸಂಬಂಧವು ಕೆಲವೊಮ್ಮೆ ಸಹಾಯ ಮಾಡಬಹುದು, ಆದರೆ ಅದು ನಿಮ್ಮನ್ನು ಕೆಟ್ಟದ್ದರಿಂದ ರಕ್ಷಿಸುವುದಿಲ್ಲ ಎಂದು ಅವರು ಹೇಳಿದರು. ಟ್ರಂಪ್ ಸೆಪ್ಟೆಂಬರ್ 17 ರಿಂದ 19 ರವರೆಗೆ ಯುಕೆಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೋಲ್ಟನ್ ಈ ಹೇಳಿಕೆ ನೀಡಿದ್ದಾರೆ.

ಎಲ್‌ಬಿಸಿ ಜೊತೆಗಿನ ಸಂದರ್ಶನದ ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಬೋಲ್ಟನ್, ಶ್ವೇತಭವನವು ಅಮೆರಿಕ-ಭಾರತ ನಡುವಿನ ಸಂಬಂಧಗಳನ್ನು ದಶಕಗಳಷ್ಟು ಹಿಂದಕ್ಕೆ ತಳ್ಳಿದೆ ಮೋದಿಯನ್ನು ರಷ್ಯಾ ಮತ್ತು ಚೀನಾಕ್ಕೆ ಹತ್ತಿರವಾಗಿಸಿದೆ. ಬೀಜಿಂಗ್ ಅಮೆರಿಕ ಮತ್ತು ಡೊನಾಲ್ಡ್ ಟ್ರಂಪ್‌ಗೆ ಪರ್ಯಾಯವಾಗಿ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿದೆ ಎಂದು ಬೋಲ್ಟನ್ ಹೇಳಿದ್ದಾರೆ.

ಟ್ರಂಪ್ ವರ್ತನೆಯಿಂದ ಚೀನಾದತ್ತ ಮುಖ ಮಾಡಿದ ಭಾರತ:

ಕಳೆದ ಹಲವು ತಿಂಗಳುಗಳಿಂದ ಟ್ರಂಪ್ ಭಾರತವನ್ನು ನಡೆಸಿಕೊಂಡ ರೀತಿಯಿಂದಾಗಿ ಅಮೆರಿಕ ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಪ್ರಯತ್ನಗಳನ್ನು ದುರ್ಬಲಗೊಳಿಸಿದೆ ಎಂದು ಮಾಜಿ ಎನ್‌ಎಸ್‌ಎ ಹೇಳಿದರು. ರಷ್ಯಾದೊಂದಿಗಿನ ಮೈತ್ರಿಯಿಂದ ಭಾರತವನ್ನು ದೂರವಿಡುವುದಕ್ಕಾಗಿ ಟ್ರಂಪ್ ನಡೆದುಕೊಂಡ ರೀತಿಯಿಂದಾಗಿ ಭಾರತೀಯ ನೀತಿ ನಿರೂಪಕರು ತಮ್ಮ ದೇಶದ ಪ್ರಮುಖ ಭದ್ರತಾ ಸವಾಲು ಎನಿಸಿರುವ ಚೀನಾ ದೇಶದತ್ತ ಮುಖ ಮಾಡುವಂತೆ ಮಾಡಿದೆ ಎಂದು ಬೋಲ್ಡನ್ ಹೇಳಿದ್ದಾರೆ.

ಅಮೆರಿಕಾದ ಜೊತೆಗೆ ಭಾರತ ತನ್ನ ಸಂಬಂಧದಿಂದ ಹಿಮ್ಮುಖವಾಗಿದೆ. ಹಾಗೂ ಅದು ಮತ್ತಷ್ಟು ಹಿಮ್ಮುಖವಾಗಬಹುದು ಎಂದು ನಾನು ಭಾವಿಸುತ್ತೇನೆ, ಆದರೆ ಇದು ತುಂಬಾ ಕೆಟ್ಟ ಕ್ಷಣ ಎಂದು ಅವರು ಹೇಳಿದರು. ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿರುವ ಬಗ್ಗೆ ಅಸಮಾಧಾನಗೊಂಡಿರುವ ಟ್ರಂಪ್ ಭಾರತದ ಮೇಲೆ ಸುಂಕದ ಮೇಲೆ ಸುಂಕ ವಿಧಿಸಿದೆ ಇದು ನವದೆಹಲಿಯನ್ನು ಬೀಜಿಂಗ್-ಮಾಸ್ಕೋ ಸಮೀಪಕ್ಕೆ ತಳ್ಳಿರಬಹುದು ಎಂದು ಬೋಲ್ಟನ್ ಈ ಹಿಂದೆಯೂ ಹೇಳಿದ್ದರು.

ವರ್ಗೀಕೃತ ಸಾಮಗ್ರಿಗಳ ದುರುಪಯೋಗದ ಆರೋಪದ ಮೇಲೆ ಕ್ರಿಮಿನಲ್ ತನಿಖೆಯ ಭಾಗವಾಗಿ ಬೋಲ್ಟನ್ ಅವರ ಮೇರಿಲ್ಯಾಂಡ್ ಮನೆ ಮತ್ತು ವಾಷಿಂಗ್ಟನ್ ಕಚೇರಿಯನ್ನು ಇತ್ತೀಚೆಗೆ ಅಮೆರಿಕಾದ ಎಫ್‌ಬಿಐ ಶೋಧಿಸಿತ್ತು.

ಇದನ್ನೂ ಓದಿ:

ಇದನ್ನೂ ಓದಿ: