ಮಾರಕ ಕೊರೋನಾ ವೈರಸ್‌ ಕಾರಣ ಹಲವು ರಾಷ್ಟ್ರಗಳು ಲಾಕ್‌ಡೌನ್‌ ಘೋಷಣೆ ಮಾಡಿರುವುದರಿಂದ ವಿಶ್ವದ ಅರ್ಧದಷ್ಟುಜನಸಂಖ್ಯೆ ಮನೆಯಲ್ಲಿದೆ. ವಿಮಾನ ಸಂಚಾರವನ್ನು ಬಹುತೇಕ ದೇಶಗಳು ರದ್ದುಗೊಳಿಸಿವೆ.

ಹೀಗಾಗಿ ಆಗಸದಲ್ಲಿ ವಿಮಾನಗಳ ಸಂಚಾರ ಸಂಪೂರ್ಣ ಬಂದ್‌ ಆಗಿರಬೇಕು, ಗಂಗಾ- ಯಮುನಾ ನದಿ ಶುದ್ಧವಾದಂತೆ ಜಾಗತಿಕವಾಗಿ ಆಗಸ ಕೂಡ ವಿಮಾನಗಳು ಉಗುಳುವ ಹೊಗೆಯಿಂದ ಮುಕ್ತವಾಗಿರಬೇಕು ಎಂದೇನಾದರೂ ಭಾವಿಸಿದರೆ ತಪ್ಪಾದೀತು. ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ಶೇ.90ರಷ್ಟುರದ್ದಾಗಿದೆ. ಹಾಗಂತ ದೇಶದೊಳಗಣ ವಿಮಾನ ಹಾರಾಟವೂ ಬಹುತೇಕ ನಿಂತಿದೆ ಎಂದರ್ಥವಲ್ಲ. ಕೊರೋನಾಪೂರ್ವದಲ್ಲಿ ಎಷ್ಟುವಿಮಾನಗಳು ಓಡಾಡುತ್ತಿದ್ದವೋ ಅದರ ಮೂರನೇ ಒಂದರಷ್ಟುವಿಮಾನಗಳು ಇವತ್ತಿಗೂ ಹಾರಾಟ ನಡೆಸುತ್ತಿವೆ. ಏಕೆ ಗೊತ್ತಾ? ಮುಂದೆ ಓದಿ.

ವಿಶ್ವದ ನಂ.1 ಕೊರೋನಾ ದೇಶ ಅಮೆರಿಕದಲ್ಲಿ ವಿಮಾನ ನಿಂತಿಲ್ಲ

ಕೊರೋನಾದಿಂದಾಗಿ 10 ಜನ ಸಾವಿಗೀಡಾಗುತ್ತಿದ್ದಂತೆ ಭಾರತ ತನ್ನ ಎಲ್ಲ ವಿಮಾನಗಳ ಸಂಚಾರವನ್ನು ಮಾ.23ರಿಂದ ರದ್ದುಗೊಳಿಸಿತು. ಅಮೆರಿಕದಲ್ಲಿ ಈಗಾಗಲೇ 35 ಸಾವಿರ ಮಂದಿ ಬಲಿಯಾಗಿದ್ದಾರೆ. ಆದರೆ ಅಲ್ಲಿ ಪೂರ್ಣ ಪ್ರಮಾಣದಲ್ಲಿ ವಿಮಾನಗಳ ಸಂಚಾರ ನಿಂತಿಲ್ಲ. ಇವತ್ತಿಗೂ ಅಮೆರಿಕದೊಳಗೆ ಸಹಸ್ರಾರು ವಿಮಾನಗಳು ಓಡಾಡುತ್ತಲೇ ಇವೆ. ವಿಮಾನ ನಿಲ್ದಾಣಗಳಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮೊದಲಿನಷ್ಟುಪ್ರಯಾಣಿಕರು ಬರುತ್ತಿಲ್ಲ. ಆದರೂ ಸಂಚಾರ ನಿಂತಿಲ್ಲ. ಲಾಕ್‌ಡೌನ್‌ ಘೋಷಿಸಿದ್ದರೂ ಸರ್ಕಾರ ದೇಶದೊಳಗಿನ ವಿಮಾನಗಳನ್ನು ನಿಲ್ಲಿಸುತ್ತಿಲ್ಲ.

ಲಾಕ್‌ಡೌನ್‌ ಬಳಿಕ ವೈರಸ್‌ ದ್ವಿಗುಣ ಪ್ರಮಾಣ ಇಳಿಕೆ: ಕೇಂದ್ರ ಸರ್ಕಾರ!

ಅಮೆರಿಕಲ್ಲೇಕೆ ಖಾಲಿ ಓಡುತ್ತಿವೆ ವಿಮಾನ?

ವಿಶ್ವಾದ್ಯಂತ ವಿಮಾನೋದ್ಯಮ ಈಗ ಕೊರೋನಾದಿಂದಾಗಿ ನೆಲಕಚ್ಚಿದೆ. ಈ ಕಾರಣಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು 25 ಬಿಲಿಯನ್‌ ಡಾಲರ್‌ (2 ಲಕ್ಷ ಕೋಟಿ ರು.) ಪ್ಯಾಕೇಜ್‌ ಆಶ್ವಾಸನೆ ಇತ್ತಿದ್ದಾರೆ. ಆದರೆ 2020ರ ಮಾ.1ಕ್ಕೆ ಮುನ್ನ ಎಷ್ಟುವಿಮಾನಗಳು ಸಂಚರಿಸುತ್ತಿದ್ದವೋ ಅಷ್ಟೇ ವಿಮಾನಗಳನ್ನು ಕಂಪನಿಗಳು ಓಡಿಸುತ್ತಿರಬೇಕು ಎಂಬ ಷರತ್ತಿದ್ದಾರೆ. ಹೀಗಾಗಿ ಒಬ್ಬ ಪ್ರಯಾಣಿಕ ಇರಲಿ, ಇಬ್ಬರು ಇರಲಿ ವಿಮಾನಗಳು ಓಡುತ್ತಲೇ ಇವೆ.

ವಿವಿಧ ಸರಕು, ವೈದ್ಯಕೀಯ ಸಾಮಗ್ರಿ, ಸರ್ಕಾರಿ ನೌಕರರು, ಕ್ಷಿಪ್ರ ಸಾರಿಗೆಗೆ ಅನುಕೂಲವಾಗಲಿ ಎಂದು ಟ್ರಂಪ್‌ ಇವತ್ತಿಗೂ ದೇಶೀಯ ವಿಮಾನ ಪ್ರಯಾಣ ನಿರ್ಬಂಧಿಸುವ ಗೋಜಿಗೆ ಹೋಗಿಲ್ಲ. ಆದರೆ ಸೋಂಕು ಹೆಚ್ಚಾಗುತ್ತೆ ಎಂಬ ಕಾರಣಕ್ಕೆ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ಬ್ರೇಕ್‌ ಒತ್ತಿದ್ದಾರೆ. ಟ್ರಂಪ್‌ ಈಗಿನ ಮನಸ್ಥಿತಿ ಗಮನಿಸಿದರೆ, ಇನ್ನು ಮುಂದೆಯೂ ವಿಮಾನ ಸಂಚಾರ ನಿಷೇಧಿಸುವ ಉದ್ದೇಶ ಅವರಿಗೆ ಇದ್ದಂತಿಲ್ಲ.

ಬೆಚ್ಚಿಬಿದ್ದ ಭಾರತ; 3000ಕ್ಕೂ ಅಧಿಕ NRIಗಳಿಗೆ ಕೊರೋನಾ ಸೋಂಕು

ಎಮರ್ಜೆನ್ಸಿ ನಡುವೆಯೂ ಜಪಾನ್‌ನಲ್ಲಿ ಖಾಲಿ ವಿಮಾನ

190 ಮಂದಿ ಕೊರೋನಾಕ್ಕೆ ಬಲಿಯಾಗಿರುವ ಹಿನ್ನೆಲೆಯಲ್ಲಿ ಜಪಾನ್‌ ತನ್ನ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದೆ. ಜನರು ಮನೆಯಿಂದ ಹೊರಬಾರದು ಎಂದು ಸೂಚಿಸಿದೆ. ವೈರುಧ್ಯವೆಂದರೆ, ದೇಶದೊಳಗಿನ ವಿಮಾನ ಸಂಚಾರಕ್ಕೆ ಅವಕಾಶ ಕೊಟ್ಟಿದೆ. ಇಂದಿಗೂ 800 ವಿಮಾನಗಳು ಆ ದೇಶದೊಳಗೆ ಓಡಾಡುತ್ತಿವೆ. ಪ್ರಯಾಣಿಕರು ಬರುತ್ತಿಲ್ಲ. ಬಂದಷ್ಟುಮಂದಿಯನ್ನು ಹತ್ತಿಸಿಕೊಂಡು ಓಡಾಡುತ್ತಿವೆ.

ಪ್ರಯಾಣಿಕರೇ ಇಲ್ಲದಿದ್ದ ಮೇಲೆ ವಿಮಾನ ಕಂಪನಿಗಳಾದರೂ ಸಂಚಾರ ನಿಲ್ಲಿಸಬಹುದಿತ್ತು. ಆದರೆ ಜಪಾನ್‌ ಪ್ರಧಾನಿ ಶಿಂಜೋ ಅಬೆ ಕೂಡ ವಿಮಾನೋದ್ಯಮಕ್ಕೆ ಪ್ಯಾಕೇಜ್‌ ಘೋಷಿಸಬಹುದು ಎಂಬ ವರದಿಗಳು, ನಷ್ಟದ ನಡುವೆಯೂ ವಿಮಾನಗಳನ್ನು ಓಡುವಂತೆ ಕಂಪನಿಗಳನ್ನು ಪ್ರೇರೇಪಿಸಿದೆ. ಮತ್ತೊಂದೆಡೆ, ನ್ಯೂಜಿಲೆಂಡ್‌ನಲ್ಲಿ ಅಲ್ಪಪ್ರಮಾಣದಲ್ಲಿ ವಿಮಾನಗಳ ಸಂಚಾರ ನಡೆಯುತ್ತಿದೆ.

ಚೀನಾದಲ್ಲಿ ನಿತ್ಯ 6000 ವಿಮಾನ ಸಂಚಾರ

ಕೊರೋನಾ ತವರೂರಾಗಿರುವ ಚೀನಾದಲ್ಲಿ ಜನವರಿಯಿಂದ ದೇಶೀಯ ಪ್ರಯಾಣ ಸ್ತಬ್ಧವಾಗಿಬಿಟ್ಟಿತ್ತು. ಆದರೆ ಮಾಚ್‌ರ್‍ನಲ್ಲಿ ಕೊರೋನಾ ಸಂಖ್ಯೆ ಇಳಿಕೆಯಾಗುತ್ತಿದ್ದಂತೆ ಶೇ.20ರಷ್ಟುಹೆಚ್ಚಳ ಕಂಡುಬಂದಿದೆ. 6000 ದೇಶೀಯ ವಿಮಾನಗಳು ಆ ದೇಶದಲ್ಲಿ ಹಾರಾಡುತ್ತಿವೆ.

ಭಾರತದಲ್ಲೂ ವಿಮಾನ ಓಡುತ್ತಿವೆ

ದೇಶೀಯ- ವಿದೇಶಿ ವಿಮಾನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಿದ್ದರೂ ಭಾರತದಲ್ಲೂ ವಿಮಾನಗಳ ಸಂಚಾರ ನಡೆಯುತ್ತಿದೆ. ಆದರೆ ಇದು ಬೆರಳೆಣಿಕೆಯಷ್ಟಿದೆ. ವೈದ್ಯಕೀಯ ಸಾಮಗ್ರಿಗಳನ್ನು ತಲುಪಿಸಲು, ಸರಕು ಸಾಗಣೆ ಉದ್ದೇಶದಿಂದ ಈ ವಿಮಾನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮಿಕ್ಕಂತೆ ಏರ್‌ ಇಂಡಿಯಾ ಸಂಸ್ಥೆ ವಿದೇಶಿ ನಾಗರಿಕರನ್ನು ಹೊತ್ತೊಯ್ಯುವ ಕೆಲಸ ಮಾಡುತ್ತಿದೆ.

ಸರಕು ಸಾಗಣೆ, ನಾಗರಿಕರ ರಕ್ಷಣೆಗೆ ವಿಮಾನಗಳ ಸಂಚಾರ

ಅಮೆರಿಕ, ಫ್ರಾನ್ಸ್‌, ಬ್ರಿಟನ್‌ ಮೊದಲಾದ ದೇಶಗಳು ವಿಶ್ವದ ವಿವಿಧೆಡೆ ಸಿಲುಕಿಕೊಂಡಿರುವ ತಮ್ಮ ನಾಗರಿಕರ ರಕ್ಷಣೆಗಾಗಿ ವಿಮಾನಗಳನ್ನು ಕಳುಹಿಸುತ್ತಿವೆ. ಇದಲ್ಲದೆ ಚೀನಾದಿಂದ ವೈದ್ಯಕೀಯ ಸಾಮಗ್ರಿಗಳನ್ನು ಹೊತ್ತು ತರಲು, ಅಗತ್ಯ ಉಪಕರಣ, ವಸ್ತುಗಳನ್ನು ವಿವಿಧ ದೇಶಗಳಿಂದ ಆಮದು ಮಾಡಿಕೊಳ್ಳಲು ವಿಮಾನಗಳ ಮೊರೆ ಹೋಗಿವೆ.

ವಿಮಾನ ಸಂಚಾರ ಎಲ್ಲೆಲ್ಲಿ ಕಡಿಮೆ ಇದೆ?

ರಷ್ಯಾ, ಆಫ್ರಿಕಾ, ದಕ್ಷಿಣ ಅಮೆರಿಕ ಖಂಡದಲ್ಲಿ ಕಡಿಮೆ ಇದೆ. ಭಾರತದಲ್ಲಿ ಬೆರಳೆಣಿಕೆಯಷ್ಟಿದೆ. ಆದರೆ ಅಮೆರಿಕ, ಜಪಾನ್‌, ಚೀನಾದಲ್ಲಿ ಸಾಕಷ್ಟುಸಂಖ್ಯೆಯ ವಿಮಾನಗಳು ಹಗಲು- ರಾತ್ರಿ ಎನ್ನದೇ ಅಡ್ಡಾಡುತ್ತಿವೆ.

ವಿಮಾನಗಳಿಂದಾಗಿ ಆತಂಕ

ವಿಶ್ವದ ಹಲವು ದೇಶಗಳಲ್ಲಿ ಸಾವಿನ ಸಂಖ್ಯೆ ದಿನೇ ದಿನೇ ಏರುತ್ತಿದ್ದರೂ, ವಿಮಾನ ಸಂಚಾರಕ್ಕೆ ನಿಷೇಧ ಹೇರದಿರುವುದು, ಸೋಂಕು ಇನ್ನಷ್ಟುಹೆಚ್ಚುವ ಆತಂಕವನ್ನು ಹುಟ್ಟುಹಾಕಿದೆ. ವಿಮಾನ ಸಂಚಾರ ಇದ್ದಾಗ ಸಹಜವಾಗಿಯೇ ಜನ ಒಂದೆಡೆಯಿಂದ ಇನ್ನೊಂದೆಡೆಗೆ ಸಂಚಾರ ಮಾಡೇ ಮಾಡುತ್ತಾರೆ. ಆಗ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸೋಂಕು ತಗುಲುವ ಸಾಧ್ಯತೆ ದಟ್ಟವಾಗಿರುತ್ತದೆ.

27000 ವಿಮಾನಗಳು: ಜಗತ್ತಿನಲ್ಲಿ ಇರುವ ವಿಮಾನಗಳ ಅಂದಾಜು ಸಂಖ್ಯೆ

16000 ವಿಮಾನಗಳು: ಸದ್ಯ ಓಡಾಟವಿಲ್ಲದೆ ನಿಂತಿರುವ ಲೋಹದ ಹಕ್ಕಿಗಳು

20 ಲಕ್ಷ ಕೋಟಿ ರು: ಕೊರೋನಾದಿಂದಾಗಿ ಜಾಗತಿಕ ವಿಮಾನ ಕ್ಷೇತ್ರಕ್ಕೆ ಆಗುವ ಅಂದಾಜು ನಷ್ಟ

800 ವಿಮಾನ: ಜಪಾನ್‌ನಲ್ಲಿ ನಿತ್ಯ ಸಂಚರಿಸುತ್ತಿರುವ ವಿಮಾನಗಳು