ಬೆಂಗಳೂರಿಂದ ಹೊರಟ ಏರ್ ಇಂಡಿಯಾದಲ್ಲಿ ಪ್ರಯಾಣಕನಿಗೆ ಶಾಕ್, ಆಹಾರದಲ್ಲಿ ಸಿಕ್ತು ಕಬ್ಬಿಣದ ತುಂಡು!
ಬೆಂಗಳೂರಿನಿಂದ ಟೇಕ್ ಆಫ್ ಆದ ಏರ್ ಇಂಡಿಯಾದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ಸಿಬ್ಬಂದಿಗಳು ಆಹಾರ ನೀಡಿದ್ದಾರೆ. ಆದರೆ ಇನ್ನೇನು ಆಹಾರ ಜಗಿದು ನುಂಗಬೇಕು ಅನ್ನುಷ್ಟರಲ್ಲೇ ನೀಡಿದ ಆಹಾರದಲ್ಲಿ ಕಬ್ಬಿಣ ತುಂಡೊಂದು ಸಿಕ್ಕಿದ ಘಟನೆ ನಡೆದಿದೆ.
ಬೆಂಗಳೂರು(ಜೂ.17) ಏರ್ ಇಂಡಿಯಾ ವಿಮಾನ ಸಂಸ್ಥೆಯನ್ನು ಟಾಟಾ ಮರಳಿ ಪಡೆದ ಬಳಿಕ ಸೇವೆಯಲ್ಲಿ ಸುಧಾರಣೆ ಕಂಡರೂ ಪ್ರತಿ ಬಾರಿ ಒಂದಲ್ಲ ಒಂದು ಸಮಸ್ಯೆಗೆ ಸುಲಿಕಿಕೊಳ್ಳುತ್ತಿದೆ. ಇದೀಗ ವಿಮಾನ ಪ್ರಯಾಣದಲ್ಲಿ ಪ್ರಯಾಣಿಕನಿಗೆ ನೀಡಿದ ಆಹಾರದಲ್ಲಿ ಕಬ್ಬಿಣದ ತುಂಡು ಪತ್ತೆಯಾಗಿ ಭಾರಿ ಹಿನ್ನಡೆ ಅನುಭವಿಸಿದೆ. ಬೆಂಗಳೂರಿನಿಂದ ಸ್ಯಾನ್‌ಫ್ರಾನ್ಸಿಸ್ಕೋ ಹೊರಟ AI 175 ವಿಮಾನದಲ್ಲಿ ಈ ಘಟನೆ ನಡೆದಿದೆ. ಘಟನೆಗೆ ವಿಷಾಧ ವ್ಯಕ್ತಪಡಿಸಿರುವ ಏರ್ ಇಂಡಿಯಾ ತಕ್ಷಣವೇ ಕ್ರಮದ ಭರವಸೆ ನೀಡಿದೆ.
ಮಥುರೇಶ್ ಪೌಲ್ ಬೆಂಗಳೂರಿನಿಂದ ಏರ್ ಇಂಡಿಯಾ ವಿಮಾನ ಮೂಲಕ ಸ್ಯಾನ್‌ಫ್ಯಾನ್ಸಿಸ್ಕೋಗೆ ಪ್ರಯಾಣ ಬೆಳೆಸಿದ್ದಾರೆ. ಜೂನ್ 9 ರಂದು ಪ್ರಯಾಣದ ವೇಳೆ ವಿಮಾನ ಸಿಬ್ಬಂದಿಗಳು ಆಹಾರ ನೀಡಿದ್ದಾರೆ. ಈ ಕಹಿ ಘಟನೆ ಕುರಿತು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಲುಗಡ್ಡೆ ರೋಸ್ಟ್ ಸವಿಯುತ್ತಿರುವ ವೇಳೆ ಗಟ್ಟಿಯಾದ ಏನೋ ಹಲ್ಲಿಗೆ ಸಿಕ್ಕಿದಂತಾಯಿತು. ತೆಗೆದು ನೋಡಿದಾಗ ಕಬ್ಬಿಣ ಬ್ಲೇಡ್‌ನಂತಿರುವ ತುಂಡು. ಅದೃಷ್ಠವಶಾತ್ ಯಾವುದೇ ಅಪಾಯಕ್ಕೀಡು ಮಾಡಲಿಲ್ಲ. ಅದಕ್ಕಿಂತ ಮುಂಚೆ ಬಾಯಿಂದ ಹೊರತೆಗೆದೆ. ಏರ್ ಇಂಡಿಯಾ ಸಂಸ್ಥೆಯ ಸೇವೆ ಉತ್ತಮಗೊಂಡಿದೆ ಅನ್ನೋ ಭಾವನೆ ಇಂತಹ ಘಟನೆಗಳಿಂದ ನಶಿಸುತ್ತಿದೆ ಎಂದು ಪೌಲ್ ಹೇಳಿದ್ದಾರೆ.
ಐಸ್ ಕ್ರೀಮ್ ಆರ್ಡರ್ ಮಾಡಿದ ಮಹಿಳೆಗ ಶಾಕ್, ಪ್ಯಾಕ್ ತೆರೆದಾಗ ಪತ್ತೆಯಾಯ್ತು ಸತ್ತ ಚೇಳು!
ಇದೇ ಪೌಲ್, ಕೆಲ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಇದೇ ಆಹಾರ ವಿಮಾನದಲ್ಲಿ ಓರ್ವ ಮಗು ತಿಂದಿದ್ದರೆ. ಕಬ್ಬಿಣದ ತುಂಡನ್ನು ನುಂಗಿದ್ದರೆ ಪರಿಸ್ಥಿತಿ ಊಹಿಸಿಕೊಳ್ಳಿ. ನಾನು ನುಂಗುವ ಭರದಲ್ಲಿ ಆಹಾರ ಕಚ್ಚಿದ ಕಾರಣ ಈ ಕಬ್ಬಿಣ ತುಂಡು ಸಿಕ್ಕಿತ್ತು. ಹಾಗೆ ನುಂಗಿದ್ದರೆ ಗತಿಏನು ಎಂದು ಪ್ರಶ್ನಿಸಿದ್ದಾರೆ.
ಈ ಮಾಹಿತಿ ತಿಳಿಯುತ್ತಿದ್ದಂತೆ ಏರ್ ಇಂಡಿಯಾ ಸಿಬ್ಬಂದಿಗಳು ಪ್ರಯಾಣಿಕ ಪೌಲ್ ಸಂಪರ್ಕಿಸಿದೆ. ಘಟನೆಗೆ ವಿಷಾಧ ವ್ಯಕ್ತಪಡಿಸಿದೆ. ಇದೇ ವೇಳೆ ಪ್ರಯಾಣಿಕನಿಗೆ ಒಂದು ಬ್ಯೂಸಿನೆಸ್ ಕ್ಲಾಸ್ ಟಿಕೆಟ್ ಆಫರ್ ಮಾಡಿದೆ. ಒಂದು ವರ್ಷ ಅವಧಿಯಲ್ಲಿ ಏರ್ ಇಂಡಿಯಾ ಮೂಲಕ ಯಾವುದೇ ಸ್ಥಳಕ್ಕೆ ಪ್ರಯಾಣಿಸಲು ಅವಕಾಶ ಕಲ್ಪಿಸಿಕೊಟ್ಟಿದೆ. ಆದರೆ ಈ ಆಫರ್‌ನ್ನು ಪೌಲ್ ನಿರಾಕರಿಸಿದ್ದಾರೆ.
ಕಬ್ಬಿಣದ ಬ್ಲೇಡ್ ತರಕಾರಿ ಕತ್ತರಿಸುವ ಮಶಿನ್ ತುಣುಕು ಎಂದು ಏರ್ ಇಂಡಿಯಾ ಸಂಸ್ಥೆ ಸ್ಪಷ್ಟಪಡಿಸಿದೆ. ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ನೀಡಲು ಏರ್ ಇಂಡಿಯಾ ಪ್ರಯತ್ನಿಸುತ್ತಿದೆ. ಈ ರೀತಿಯ ಘಟನೆಗಳಿಗೆ ವಿಷಾದ ವ್ಯಕ್ತಪಡಿಸುತ್ತಿದೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಏರ್ ಇಂಡಿಯಾ ಹೇಳಿದೆ.
ಬೆರಳು, ಚೇಳಿನ ಬಳಿಕ ಇದೀಗ ಆಹಾರದಲ್ಲಿ ಸತ್ತ ಹಾವು, 11 ಕಾಲೇಜು ವಿದ್ಯಾರ್ಥಿಗಳು ಅಸ್ವಸ್ಥ!