ಗಾಜಿಯಾಬಾದ್‌ನಿಂದ ಕೋಲ್ಕತಾಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಟೇಕಾಫ್‌ ತಡೆಹಿಡಿಯಲಾಗಿದೆ. ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.

ನವದೆಹಲಿ (ಜೂ.16): ಉತ್ತರ ಪ್ರದೇಶದ ಗಾಜಿಯಾಬಾದ್‌ನ ಹಿಂಡನ್‌ ಏರ್ಪೋರ್ಟ್‌ನಿಂದ ಪಶ್ಚಿಮ ಬಂಗಾಳದ ಕೋಲ್ಕತಾಗೆ ತೆರಳಲಿದ್ದ ಏರ್ ಇಂಡಿಯಾ ವಿಮಾನ ಟೇಕಾಫ್ ಆಗುವ ಕೊನೆಯ ಕ್ಷಣದಲ್ಲಿ ತಾಂತ್ರಿಕ ದೋಷ ಪತ್ತೆಯಾಗಿದೆ. ಹಾಗಾಗಿ ಗುಜರಾತ್‌ ವಿಮಾನ ದುರಂತದ ಬೆನ್ನಲ್ಲೆ ಮತ್ತೊಂದು ಅನಾಹುತ ತಪ್ಪಿದೆ.

ರನ್‌ ವೇಯಲ್ಲಿದ್ದ IX 1511 ಸಂಖ್ಯೆಯ ವಿಮಾನ ಇನ್ನೇನು ಟೇಕಾಫ್ ಆಗಬೇಕಿತ್ತು. ಆದರೆ ಅಂತಿಮ ಕ್ಷಣದಲ್ಲಿ ವಿಮಾನದ ಸಿಬ್ಬಂದಿ ದೋಷ ಪತ್ತೆ ಮಾಡಿದ್ದಾರೆ. ಹಾಗಾಗಿ ಸುಮಾರು 1 ಗಂಟೆ ಕಾಲ ಪ್ರಯಾಣ ವಿಳಂಬವಾಯಿತು. ‘ಹಿಂಡನ್-ಕೋಲ್ಕತಾ ವಿಮಾನದ ದೋಷದಿಂದಾಗಿ ಪ್ರಯಾಣ ವಿಳಂಬವಾಯಿತು.

'ಪ್ರಯಾಣಿಕರಿಗೆ ಬೇರೆ ಸಮಯ ನಿಗದಿ ಅಥವಾ ಟಿಕೆಟ್ ರದ್ದುಪಡಿಸಿದರೆ ಪೂರ್ತಿ ಹಣ ಮರುಪಾವತಿಸುವುದಾಗಿ ತಿಳಿಸಿದೆವು. ಅನನುಕೂಲತೆಗಾಗಿ ವಿಷಾದಿಸುತ್ತೇವೆ’ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ತಿಳಿಸಿದ್ದಾರೆ.

ಈ ಮೊದಲು ಈ ಏರ್‌ಪೋರ್ಟನ್ನು ಸೇನಾ ಕಾರ್ಯಾಚರಣೆಗಳಿಗಾಗಿ ಬಳಸಲಾಗುತ್ತಿತ್ತು. ಇತ್ತೀಚೆಗೆ ನಾಗರಿಕ ಸಂಚಾರ ಆರಂಭಿಸಲಾಗಿತ್ತು.

ಅಹಮದಾಬಾದ್ ವಿಮಾನ ಅಪಘಾತ:

ಗುರುವಾರ, ಏರ್ ಇಂಡಿಯಾ ವಿಮಾನವೊಂದು ಅಹಮದಾಬಾದ್‌ನಲ್ಲಿ ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ವಸತಿ ಪ್ರದೇಶದಲ್ಲಿ ಪತನಗೊಂಡು ಭೀಕರ ಅಪಘಾತಕ್ಕೀಡಾಯಿತು. ಈ ದುರಂತದಲ್ಲಿ 270 ಜನರು ಸಾವನ್ನಪ್ಪಿದ್ದರು. ಅವರಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಸೇರಿದ್ದಾರೆ. ಇದರ ಬೆನ್ನಲ್ಲೇ ಇದೀಗ ಎರಡನೇ ದುರಂತ ಸ್ವಲ್ಪದರಂತೆ ತಪ್ಪಿದಂತಾಗಿದೆ.