ಲಾಸ್‌ಏಂಜಲೀಸ್‌[ಡಿ.06]: ಹವಾಯಿ ದ್ವೀಪದಲ್ಲಿರುವ ಅಮೆರಿಕದ ನೌಕಾನೆಲೆ ಪಲ್‌ರ್‍ ಹಾರ್ಬರ್‌ನಲ್ಲಿ ಬುಧವಾರ ಯೋಧನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ. ಬಳಿಕ ಯೋಧ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪಲ್‌ರ್‍ ಹಾರ್ಬರ್‌ ಮೇಲೆ ಜಪಾನ್‌ ಪಡೆಗಳು ನಡೆಸಿದ ದಾಳಿಗೆ ಗುರುವಾರ 78 ವರ್ಷ ತುಂಬಲಿದ್ದು, ಈ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಜೊತೆಗೆ ಏಷ್ಯಾ- ಪೆಸಿಫಿಕ್‌ ವಲಯದಲ್ಲಿ ಎದುರಾಗುತ್ತಿರುವ ಭದ್ರತಾ ಸವಾಲುಗಳ ಕುರಿತು ಚರ್ಚಿಸುವ ನಿಟ್ಟಿನಲ್ಲಿ ಪ್ರಮುಖ ದೇಶಗಳ ವಾಯುಪಡೆಗಳ ಮುಖ್ಯಸ್ಥರ ಸಮ್ಮೇಳವನ್ನೂ ಆಯೋಜಿಸಲಾಗಿತ್ತು. ಈ ಸಮ್ಮೇಳನದಲ್ಲಿ ಭಾಗಿಯಾಗಲು ಭಾರತೀಯ ವಾಯುಪಡೆಯ ಮುಖ್ಯಸ್ಥ ರಾಕೇಶ್‌ ಭದೌರಿಯಾ ಕೂಡಾ ಅಲ್ಲಿಗೆ ತೆರಳಿದ್ದರು. ಅವರೊಂದಿಗೆ ಭಾರತೀಯ ವಾಯು ಸೇನಾ ತಂಡವೇ ಇದ್ದು, ಘಟನೆಯಲ್ಲಿ ಯಾರಿಗೂ ಅಪಯಾ ಆಗಿಲ್ಲ ಎಂದು ಭಾರತೀಯ ವಾಯ ಸೇನಾ ವಕ್ತಾರರು ತಿಳಿಸಿದ್ದಾರೆ.

ಎರಡನೇ ಮಹಾಯುದ್ಧದ ವೇಳೆ ಜಪಾನ್‌ ಪಡೆಗಳು ಪಲ್‌ರ್‍ ಹಾರ್ಬರ್‌ ಬಂದರಿನ ಮೇಲೆ ದಾಳಿ ನಡೆಸಿತ್ತು. ಇದರಿಂದ ಆಕ್ರೋಶಗೊಂಡ ಅಮೆರಿಕ, ತಾನೂ ಕೂಡಾ ಯುದ್ಧ ಭೂಮಿಗೆ ಧುಮುಕಿತ್ತು.