ಅಯೋಧ್ಯೆ(ಡಿ.24): ಬಾಬ್ರಿ ಮಸೀದಿ-ರಾಮಜನ್ಮಭೂಮಿ ವಿವಾದ ಅಂತ್ಯಗೊಳ್ಳುತ್ತಿದ್ದಂತೆಯೇ ಅಯೋಧ್ಯೆಯಲ್ಲಿ ಹೊಸ ವಿವಾದ ಶುರುವಾಗಿದೆ. ಸುಪ್ರೀಂ ಕೋರ್ಟ್‌ ತೀರ್ಪಿನ ಅನುಸಾರ ನಿರ್ಮಾಣವಾಗಲಿರುವ ಮಸೀದಿ ವಕ್ಫ್ ಕಾಯ್ದೆಗೆ ವಿರುದ್ಧವಾದುದು ಹಾಗೂ ಶರಿಯತ್‌ ಕಾನೂನಿನ ಪ್ರಕಾರ ಅಕ್ರಮ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಸದಸ್ಯ ಜಫರ್ಯಾಬ್‌ ಜಿಲಾನಿ ಆರೋಪಿಸಿದ್ದಾರೆ.

ಆದರೆ ಈ ಆರೋಪವನ್ನು ಮಸೀದಿಯ ಟ್ರಸ್ಟ್‌ ಸದಸ್ಯ ಅಥರ್‌ ಹುಸೇನ್‌ ನಿರಾಕರಿಸಿದ್ದಾರೆ. ಶರಿಯತ್‌ ಕಾನೂನನ್ನು ಜನರು ಅವರಿಗೆ ಇಷ್ಟಬಂದ ರೀತಿ ವ್ಯಾಖ್ಯಾನಿಸುತ್ತಾರೆ. ಮಸೀದಿಗೆ ಸುಪ್ರೀಂ ಕೋರ್ಟ್‌ ಜಾಗ ಕೊಟ್ಟಿದೆ. ಹೀಗಿದ್ದಾಗ ಅದು ಅಕ್ರಮ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಸೀದಿಯ ನೀಲನಕ್ಷೆಯನ್ನು ಶನಿವಾರವಷ್ಟೇ ಅನಾವರಣಗೊಳಿಸಲಾಗಿತ್ತು. ಮಸೀದಿ ನಿರ್ಮಾಣಕ್ಕೆ ಸುನ್ನಿ ಮಂಡಳಿ ರಚಿಸಿರುವ ಇಂಡೋ ಇಸ್ಲಾಮಿಕ್‌ ಸಾಂಸ್ಕೃತಿಕ ಪ್ರತಿಷ್ಠಾನ, ಇದನ್ನು ಅನಾವರಣ ಮಾಡಿತ್ತು. ಇದರ ಬೆನ್ನಲ್ಲೇ ಈ ವಿವಾದ ಸೃಷ್ಟಿಆಗಿದೆ.

‘ವಕ್ಪ್‌ ಕಾನೂನಿನ ಪ್ರಕಾರ ಮಸೀದಿಗೆ ಜಮೀನನ್ನು ನಿನಿಮಯ ರೂಪದಲ್ಲಿ ಪಡೆದುಕೊಳ್ಳುವಂತಿಲ್ಲ. ಹಾಗಾಗಿ ಶರಿಯತ್‌ ಕಾನೂನು ಆಧರಿಸಿ ರೂಪಿಸಲಾಗಿರುವ ವಕ್ಪ್‌ ಕಾನೂನಿನ ಪ್ರಕಾರ ಜಮೀನು ಹಂಚಿಕೆ ಅಕ್ರಮ’ ಎಂದು ಜಿಲಾನಿ ಹೇಳಿದ್ದಾರೆ. ಇದಕ್ಕೆ ಎಐಎಂಪಿಎಲ್‌ಬಿ ಕಾರ್ಯಕಾರಿಣಿ ಸದಸ್ಯ ಎಸ್‌ಕ್ಯುಆರ್‌ ಇಲಿಯಾಸ್‌ ದನಿಗೂಡಿಸಿದ್ದು, ‘ನಾವು ಮಸೀದಿಗೆ ನೀಡಲಾದ ಜಮೀನು ತಿರಸ್ಕರಿಸಿದ್ದೇವೆ. ಸುನ್ನಿ ಮಂಡಳಿಯು ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ’ ಎಂದಿದ್ದಾರೆ. ಈ ವಿಷಯವನ್ನು ಅ.13ರಂದು ನಡೆದ ಎಐಎಂಪಿಎಲ್‌ಬಿ ಸಭೆಯಲ್ಲಿ ಸಂಸದ ಅಸಾದುದ್ದೀನ್‌ ಒವೈಸಿ ಪ್ರಸ್ತಾಪಿಸಿದ್ದರು. ಇದಕ್ಕೆ ಮಂಡಳಿಯ ಎಲ್ಲರೂ ಈಗ ಬಹಿರಂಗ ಬೆಂಬಲ ಸೂಚಿಸಿದ್ದಾರೆ.