ಪ್ರಸ್ತುತ 1.5 ಬಿಲಿಯನ್‌ ಡಾಲರ್‌ನಷ್ಟಿರುವ ರಕ್ಷಣಾ ಕ್ಷೇತ್ರದ ರಫ್ತು ಪ್ರಮಾಣವನ್ನು 2024-25ರ ವೇಳೆಗೆ 5 ಬಿಲಿಯನ್‌ ಡಾಲರ್‌ಗೆ ಹೆಚ್ಚಿಸಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಘೋಷಿಸಿದ್ದಾರೆ. 

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಕಾಲದಲ್ಲಿರುವ ದೇಶವು ಯುದ್ಧ ವಿಮಾನದ ಪೈಲಟ್‌ನಂತೆ ಹೊಸ ಎತ್ತರಕ್ಕೆ ಮುನ್ನುಗ್ಗುತ್ತಿದೆ. ರಕ್ಷಣಾ ಉತ್ಪನ್ನಗಳ ಅತಿ ದೊಡ್ಡ ಆಮದುದಾರ ದೇಶವಾಗಿದ್ದ ಭಾರತವು ಪ್ರಸ್ತುತ 75 ದೇಶಗಳಿಗೆ ರಕ್ಷಣಾ ಉತ್ಪನ್ನಗಳನ್ನು(defense products) ರಫ್ತು ಮಾಡುತ್ತಿದೆ. ಪ್ರಸ್ತುತ 1.5 ಬಿಲಿಯನ್‌ ಡಾಲರ್‌ನಷ್ಟಿರುವ ರಕ್ಷಣಾ ಕ್ಷೇತ್ರದ ರಫ್ತು ಪ್ರಮಾಣವನ್ನು 2024-25ರ ವೇಳೆಗೆ 5 ಬಿಲಿಯನ್‌ ಡಾಲರ್‌ಗೆ ಹೆಚ್ಚಿಸಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಘೋಷಿಸಿದ್ದಾರೆ. 

ಸೋಮವಾರ ಬೆಳಗ್ಗೆ ಯಲಹಂಕ ವಾಯುನೆಲೆಯಲ್ಲಿ(Yalahanka Air Base) 14ನೇ ಆವೃತ್ತಿಯ ಏರೋ ಇಂಡಿಯಾ-2023ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಒಂದು ಕಾಲದಲ್ಲಿ ಏರೋ ಇಂಡಿಯಾ ಅಂದರೆ ಸೆಲ್‌ ಟು ಇಂಡಿಯಾ ಕಿಟಕಿಯಾಗಿ ಬಳಕೆಯಾಗುತ್ತಿತ್ತು. ರಫ್ತಿನ ಬದಲಿಗೆ ಕೇವಲ ಆಮದಿಗೆ ಮಾತ್ರ ಆದ್ಯತೆಯಿತ್ತು. ಈಗ ಏರೋ ಇಂಡಿಯಾ ಬಗೆಗಿನ ಈ ದೃಷ್ಟಿಕೋನ ಸಂಪೂರ್ಣ ಬದಲಾಗಿದೆ. ಇದು ಭಾರತ ದೇಶದ ಸ್ವಾವಲಂಬನೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಬೆಂಗಳೂರು ಏರ್ ಶೋದ ಹೈಲೈಟ್ಸ್: ಪ್ರೇಮ ಸಂಕೇತ ಬಿಡಿಸಿದ ಸೂರ್ಯ ಕಿರಣ, ಬಾನಲ್ಲಿ ರಂಗೋಲಿ ಬರೆದ ವಿಮಾನ

ಕಳೆದ 8-9 ವರ್ಷಗಳಲ್ಲಿ ದೇಶದ ರಕ್ಷಣಾ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಕಂಡಿದೆ. ತೇಜಸ್‌(Tejas), ಐಎನ್‌ಎಸ್‌ ವಿಕ್ರಾಂತ್‌ (INS Vikrant), ಸೂರತ್‌ನಲ್ಲಿ (Surat) ಸ್ಥಾಪಿಸಿರುವ ರಕ್ಷಣಾ ಉತ್ಪಾದನಾ ಘಟಕ, ತುಮಕೂರಿನಲ್ಲಿ (Tumkur) ಸ್ಥಾಪಿಸಿರುವ ಹೆಲಿಕಾಪ್ಟರ್‌ ಉತ್ಪಾದನೆ ಘಟಕ ಇವೆಲ್ಲವೂ ದೇಶದ ಬಗೆಗಿನ ದೃಷ್ಟಿಕೋನವನ್ನು ಬದಲಿಸಿವೆ ಎಂದು ಹೇಳಿದರು.

5 ಬಿಲಿಯನ್‌ ಡಾಲರ್‌ ರಫ್ತು ಗುರಿ:

ಸ್ವಾತಂತ್ರ್ಯದ ಅಮೃತ ಕಾಲದಲ್ಲಿರುವ ದೇಶವು ಯುದ್ಧವಿಮಾನದ ಪೈಲಟ್‌ನಂತೆ (fighter pilot) ಮುನ್ನುಗ್ಗುತ್ತಿದೆ. ಯಾವುದೇ ಹಿಂಜರಿಕೆಯಿಲ್ಲದೆ ಹೊಸ ಎತ್ತರಕ್ಕೆ ದೇಶ ಹಾರುತ್ತಿದೆ. ಇಂದಿನ ಭಾರತವು ವೇಗ ಮತ್ತು ದೂರದೃಷ್ಟಿಯಿಂದ ಯೋಚಿಸಿ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ದೇಶ ಎಷ್ಟೇ ಬೆಳೆದರೂ ಎಲ್ಲರೊಂದಿಗೂ ಬೆರೆತು ಸಾಗಲಿದೆ. ಈಗಿನ ರಕ್ಷಣಾ ಇಲಾಖೆಯ ಅಭಿವೃದ್ಧಿಯನ್ನು ಕೇವಲ ಪ್ರಾರಂಭ ಎಂದು ಪರಿಗಣಿಸಿದ್ದೇವೆ. ಪ್ರಸ್ತುತ 1.5 ಬಿಲಿಯನ್‌ ಡಾಲರ್‌ನಷ್ಟಿರುವ ರಕ್ಷಣಾ ರಫ್ತನ್ನು 2024- 25ರ ವೇಳೆಗೆ 5 ಬಿಲಿಯನ್‌ ಡಾಲರ್‌ಗೆ ಕೊಂಡೊಯ್ಯುವ ಗುರಿ ಹೊಂದಿದ್ದೇವೆ. ರಕ್ಷಣಾ ಉತ್ಪಾದನೆಯ ದೈತ್ಯ ರಾಷ್ಟ್ರಗಳ ಸಾಲಿಗೆ ಸದ್ಯದಲ್ಲೇ ಭಾರತ ಸೇರಲಿದೆ ಎಂದು ಹೇಳಿದರು.

300 ಕೆ.ಜಿ. ಶಸ್ತ್ರಾಸ್ತ್ರ ಹೊತ್ತೊಯ್ಯಬಲ್ಲ ಮಾನವ ರಹಿತ ಪುಟ್ಟ ವಿಮಾನ: ಜೂನ್‌ನಲ್ಲಿ ಪರೀಕ್ಷಾರ್ಥ ಹಾರಾಟ

ದೇಶದಲ್ಲಿ ಮಾಡಿರುವ ‘ಈಸ್‌ ಆಫ್‌ ಡುಯಿಂಗ್‌ ಬ್ಯುಸಿನೆಸ್‌’ ನೀತಿಗಳು ಬೇರೆ ದೇಶಗಳಿಗೆ ಮಾದರಿಯಾಗಿವೆ. ವಿದೇಶ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಯಶಸ್ವಿಯಾಗಿವೆ. ನಾವು ನೀಡುತ್ತಿರುವ ರಿಯಾಯಿತಿ, ಪ್ರೋತ್ಸಾಹಗಳಿಂದ ಹೆಚ್ಚೆಚ್ಚು ಕಂಪನಿಗಳು ಹೂಡಿಕೆಗೆ ಮುಂದೆ ಬರುತ್ತಿವೆ. ನಮ್ಮ ರಫ್ತು ಗುರಿ ಸಾಧನೆಗೆ ಖಾಸಗಿ ಕಂಪನಿಗಳು, ಹೂಡಿಕೆದಾರರು ಸಾಥ್‌ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕದ ಯುವಕರಿಗೆ ಮೋದಿ ಕರೆ:

ಆತ್ಮನಿರ್ಭರ ಭಾರತ ದಿನವೂ ಬೆಳೆಯುತ್ತಿದೆ. ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದ ಯುವಕರು ತಮ್ಮ ತಂತ್ರಜ್ಞಾನವನ್ನು ರಕ್ಷಣಾ ಕ್ಷೇತ್ರದಲ್ಲಿ ತೊಡಗಿಸಬೇಕು. ತನ್ಮೂಲಕ ದೇಶವನ್ನು ಬಲಪಡಿಸಬೇಕು. ವೈಮಾನಿಕ ಕ್ಷೇತ್ರದಲ್ಲಿ ಕರ್ನಾಟಕದ ಯುವಕರಿಗೆ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.