ಎಐಸಿಸಿ ಅಧಿವೇಶನದಲ್ಲಿ ಒಂದು ದೇಶ ಒಂದು ಚುನಾವಣೆ ವಿರುದ್ಧ ನಿರ್ಣಯ ಕೈಗೊಳ್ಳಲಾಗಿದೆ. ಗುಜರಾತ್‌ನಲ್ಲಿ ಅಧಿಕಾರಕ್ಕೇರಲು ಕಾಂಗ್ರೆಸ್‌ ನಿರ್ಣಯ ಅಂಗೀಕರಿಸಿದೆ ಮತ್ತು ಮೇ 9ರ ವಿಜಯ ದಿನದ ಪರೇಡ್‌ಗೆ ಮೋದಿಗೆ ರಷ್ಯಾ ಆಹ್ವಾನ ನೀಡಿದೆ.

ನವದೆಹಲಿ: ತನ್ನ ರಾಷ್ಟ್ರೀಯವಾದ ಜನರನ್ನು ಒಗ್ಗೂಡಿಸಿದರೆ, ಬಿಜೆಪಿ-ಆರೆಸ್ಸೆಸ್‌ನ ಹುಸಿ ರಾಷ್ಟ್ರೀಯವಾದ ಜನರನ್ನು ವಿಭಜಿಸುತ್ತದೆ ಎಂದು ಕಾಂಗ್ರೆಸ್‌ ಆರೋಪಿಸಿ, ‘ನಯಾಪಥ್‌’ ಎಂಬ ನಿರ್ಣಯ ಕೈಗೊಂಡಿದೆ.

ಎಐಸಿಸಿ ಅಧಿವೇಶನದ ಮುಕ್ತಾಯದ ವೇಳೆ ನಿರ್ಣಯ ಅಂಗೀಕರಿಸಿರುವ ಅದು, ‘ಯಾವುದೇ ಸಂವಿಧಾನ ವಿರೋಧಿ ಶಕ್ತಿಗಳ ವಿನಾಶಕಾರಿ ಕೆಲಸಗಳು ಯಶಸ್ವಿಯಾಗದಂತೆ ನೋಡಿಕೊಳ್ಳಲು ಕಾಂಗ್ರೆಸ್‌ ಬದ್ಧ. ಒಂದು ದೇಶ ಒಂದು ಚುನಾವಣೆಯಂಥ ಒಕ್ಕೂಟ ವ್ಯವಸ್ಥೆಗೆ ಹಾನಿ ಮಾಡುವ ಕ್ರಮಗಳ ವಿರುದ್ಧ ಹೋರಾಡುತ್ತೇವೆ’ ಎಂದು ಘೋಷಿಸಿದೆ.
ಜತೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಪೂರ್ಣ ರಾಜ್ಯದ ಸ್ಥಾನಮಾನ ನೀಡುವುದು, ಶಿಕ್ಷಣ ವ್ಯವಸ್ಥೆಯಲ್ಲಿ ಸ್ವತಂತ್ರ ಮತ್ತು ಮುಕ್ತ ಯೋಚನಾ ಪ್ರಕ್ರಿಯೆ ಹಾಗೂ ಲೋಕಸಭಾ ಕ್ಷೇತ್ರದ ಮರುವಿಂಗಡಣೆ ವೇಳೆ ಸಮಾನತೆ ಮತ್ತು ನ್ಯಾಯ ಕಾಪಾಡುವುದು ಪಕ್ಷದ ಗುರಿ ಎಂದು ತಿಳಿಸಿದೆ.

ಗುಜರಾತ್‌ನಲ್ಲಿ ಅಧಿಕಾರಕ್ಕೇರಲು ಕಾಂಗ್ರೆಸ್‌ ನಿರ್ಣಯ ಅಂಗೀಕಾರ
ಗುಜತಾರ್‌ನಲ್ಲಿ ಸತತ 30 ವರ್ಷಗಳಿಂದ(1995) ವಿಪಕ್ಷ ಸ್ಥಾನದಲ್ಲಿಯೇ ಇರುವ ಕಾಂಗ್ರೆಸ್‌, ಇದೀಗ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿರ್ಣಯವನ್ನು ಎಐಸಿಸಿ ಅಧಿವೇಶನದಲ್ಲಿ ಬುಧವಾರ ಅಂಗೀಕರಿಸಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಪತ್ರಕಾಗೋಷ್ಠಿಯಲ್ಲಿ ಮಾತನಾಡಿ, ‘ಕಾಂಗ್ರೆಸ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿ ಒಂದು ರಾಜ್ಯಕ್ಕೆ ಸಂಬಂಧಿಸಿ ನಿರ್ಣಯವನ್ನು ಎಐಸಿಸಿ ಅಧಿವೇಶನದಲ್ಲಿ ತೆಗೆದುಕೊಳ್ಳಲಾಗಿದೆ ಎಂದರು.

1960-70ರ ಸಮಯದಲ್ಲಿ ಗುಜರಾತ್‌ನ ಅಭಿವೃದ್ಧಿಗೆ ಕಾಂಗ್ರೆಸ್‌ ಅಡಿಪಾಯ ಹಾಕಿತ್ತು. ಆದರೆ ಬಿಜೆಪಿ ಅಧಿಕಾರದಲ್ಲಿ ಅದು ಕುಂಠಿತವಾಯಿತು. ಆದ್ದರಿಂದ, ‘ಗುಜರಾತ್‌ನಲ್ಲಿ ಕಾಂಗ್ರೆಸ್‌ ಏಕೆ ಅಗತ್ಯ?’ ಎಂಬ ಶೀರ್ಷಿಕೆ ಹಾಗೂ ‘ನೂತನ ಗುಜರಾತ್‌, ನೂತನ ಕಾಂಗ್ರೆಸ್‌’ ಎಂಬ ಧ್ಯೇಯವಾಕ್ಯದಡಿಯಲ್ಲಿ ಅಧಿಕಾರಕ್ಕೆ ಮರಳುವ ತಂತ್ರಗಳನ್ನು ರೂಪಿಸಲಾಗಿದೆ’ ಎಂದರು.

ಇದನ್ನೂ ಓದಿ: ಕೆಲಸ ಮಾಡಲಾಗದವರು ಹುದ್ದೆ ಬಿಡಿ: ಮಲ್ಲಿಕಾರ್ಜುನ ಖರ್ಗೆ ತಾಕೀತು

ಮೇ 9ರ ವಿಜಯ ದಿನದ ಪರೇಡ್‌ಗೆ ಮೋದಿಗೆ ರಷ್ಯಾ ಆಹ್ವಾನ
ಮಾಸ್ಕೋ: 2ನೇ ಮಹಾಯುದ್ಧದಲ್ಲಿ ಜರ್ಮನಿ ವಿರುದ್ಧ ಗೆಲುವು ಸಾಧಿಸಿದ ನೆನಪಿಗಾಗಿ ಪ್ರತಿವರ್ಷ ಮೇ 9 ರಂದು ಆಚರಿಸುವ ವಿಜಯ ದಿನದ ಪರೇಡ್‌ನಲ್ಲಿ ಪಾಲ್ಗೊಳ್ಳುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ರಷ್ಯಾ ಆಹ್ವಾನ ನೀಡಿದೆ. ಈ ವರ್ಷ ವಿಜಯ ದಿನಕ್ಕೆ 80 ವರ್ಷ ಹಿನ್ನೆಲೆಯಲ್ಲಿ ಮೋದಿಗೆ ಆಹ್ವಾನ ನೀಡಲಾಗಿದೆ. 

ಈ ಬಗ್ಗೆ ರಷ್ಯಾದ ಉಪ ವಿದೇಶಾಂಗ ಸಚಿವ ಆಂಡ್ರೆ ರುಡೆಂಕೊ ಖಚಿತಪಡಿಸಿದ್ದರು. ಮೋದಿಗೆ ಆಹ್ವಾನ ಬಂದಿರುವ ಬಗ್ಗೆ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್‌ ಜೈಸ್ವಾಲ್ ತಿಳಿಸಿದ್ದಾರೆ. ಭಾರತ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವಿಕೆ ಬಗ್ಗೆ ಖಚಿತಪಡಿಸಿಲ್ಲ. ಆದರೆ ಮೋದಿ ರಷ್ಯಾಗೆ ತೆರಳುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದ್ದು, ಒಂದು ವೇಳೆ ಮೋದಿ ಹೋಗದಿದ್ದರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತವನ್ನು ಪ್ರತಿನಿಧಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: