ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮೊದಲ ಅವಧಿಯಲ್ಲಿ ಎಂಟು ಕಂಪೆನಿಗಳ ಗಣಿ ಗುತ್ತಿಗೆ ನವೀಕರಣಕ್ಕೆ ಅನುಮೋದನೆ ನೀಡಿ 500 ಕೋಟಿ ರು. ಕಿಕ್ ಬ್ಯಾಕ್ ಪಡೆದಿದ್ದು, ರಾಜ್ಯದ ಬೊಕ್ಕಸಕ್ಕೆ 6,000 ಕೋಟಿ ರು. ನಷ್ಟ ಉಂಟು ಮಾಡಿದ್ದಾರೆ.
ಬೆಂಗಳೂರು (ಏ.10): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮೊದಲ ಅವಧಿಯಲ್ಲಿ ಎಂಟು ಕಂಪೆನಿಗಳ ಗಣಿ ಗುತ್ತಿಗೆ ನವೀಕರಣಕ್ಕೆ ಅನುಮೋದನೆ ನೀಡಿ 500 ಕೋಟಿ ರು. ಕಿಕ್ ಬ್ಯಾಕ್ ಪಡೆದಿದ್ದು, ರಾಜ್ಯದ ಬೊಕ್ಕಸಕ್ಕೆ 6,000 ಕೋಟಿ ರು. ನಷ್ಟ ಉಂಟು ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ದೂರು ಸಲ್ಲಿಕೆಯಾಗಿದೆ. ಎಚ್.ರಾಮಮೂರ್ತಿ ಎಂಬ ವ್ಯಕ್ತಿ ಖುದ್ದು ಭೇಟಿ ನೀಡಿ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದು, ಎಂಟು ಕಂಪೆನಿಗಳ ಗಣಿ ಗುತ್ತಿಗೆಯನ್ನು ಹರಾಜು ಮೂಲಕ ನೀಡದೆ ಅಕ್ರಮವಾಗಿ ನವೀಕರಣ ಮಾಡಿದ್ದರು. ಇದರಿಂದ ರಾಜ್ಯದ ಬೊಕ್ಕಸಕ್ಕೆ ಬರಬೇಕಾಗಿದ್ದ ಆದಾಯ ಖೋತಾ ಆಗಿದೆ.
ಹೀಗಾಗಿ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಅಡಿ ಸೆಕ್ಷನ್ 7, 9,11,12 ಮತ್ತು 15, ಭಾರತೀಯ ನ್ಯಾಯಸಂಹಿತೆ ಅಡಿಯ ಸೆಕ್ಷನ್‌ಗಳಾದ 59, 61,42, 201, 227,228, 229, 239, 314, 316 ಸೇರಿ ವಿವಿಧ ನಿಯಮಗಳಡಿ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕು ಎಂದು ದೂರುದಾರರು ಕೋರಿದ್ದಾರೆ. ಈ ಹಿಂದೆ ಇದೇ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿತ್ತು. ಆದರೆ ಆರೋಪಗಳಲ್ಲಿ ಹುರುಳಿಲ್ಲ ಎಂಬ ಕಾರಣ ನೀಡಿ ಲೋಕಾಯುಕ್ತ ಸಂಸ್ಥೆ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು. ಇದೀಗ ಇದೇ ಪ್ರಕರಣದ ಬಗ್ಗೆ ದೂರು ನೀಡಿರುವುದು ಚರ್ಚೆಗೆ ಕಾರಣವಾಗಿದೆ.
ಗಣಿ ನವೀಕರಣ ಕುರಿತು ದೂರು ಏನು?: ಗಣಿ ಗುತ್ತಿಗೆಗಳ ನವೀಕರಣ ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆ ಆಗಿದೆ ಎಂದು ಆರೋಪಿಸಿರುವ ದೂರುದಾರ, ಎಂಎಂಡಿಆರ್ ಕಾಯ್ದೆಯ ಸೆಕ್ಷನ್ 10ಎ, 10ಎ (2) ಬಿ ಉಲ್ಲಂಘನೆಯಾಗಿದೆ. ತುಮಕೂರು ಮಿನರಲ್ಸ್, ವೆಸ್ಕೋ, ರಾಮಗಡ್, ಕೆಎಂಎಂಎಐ, ಎಂಇಎಲ್, ಎಂ. ಉಪೇಂದ್ರನ್ ಮೈನ್ಸ್, ಜಯರಾಮ್ ಮಿನರಲ್ಸ್ ಸೇರಿ ಎಂಟು ಗುತ್ತಿಗೆಗಳಲ್ಲಿ ಐದು ಗುತ್ತಿಗೆಗಳು ಎಂಎಂಡಿಆರ್ ತಿದ್ದುಪಡಿ ಮಾಡುವ ಸುಗ್ರೀವಾಜ್ಞೆ ಬರುವ ದಿನದಂದೇ (2015ರ ಜ.12) ನವೀಕರಣ ಮಾಡಲಾಗಿತ್ತು ಎಂದೆಲ್ಲ ಆರೋಪಿಸಲಾಗಿದೆ. ಈ ಹಿಂದೆ ಮುಡಾ ಪ್ರಕರಣದಲ್ಲೂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಕೆಯಾಗಿತ್ತು.
ಚಲುವರಾಯಸ್ವಾಮಿಯನ್ನು ಮಂತ್ರಿ ಮಾಡಲು ಶ್ರಮ ಹಾಕಿದ್ದೇನೆ, ಆಣೆಗೆ ಸಿದ್ಧ: ಎಚ್.ಡಿ.ಕುಮಾರಸ್ವಾಮಿ
ಹುರುಳಿಲ್ಲದ ವಿಷಯಕ್ಕೆ ವಿಷ ತುಂಬುವ ಪ್ರಯತ್ನ: ಗಣಿ ಗುತ್ತಿಗೆ ನವೀಕರಣ ವಿಚಾರದಲ್ಲಿ ಗೊಂದಲ ಸೃಷ್ಟಿಸಿ ಹುರುಳಿಲ್ಲದ ವಿಷಯಕ್ಕೆ ವಿಷ ತುಂಬುವ ಪ್ರಯತ್ನ ನಡೆಸಲಾಗಿದೆ. ಇಂಥ ಅಪಪ್ರಚಾರ ನಾನು ಅಧಿಕಾರಕ್ಕೆ ಬಂದಾಗಿನಿಂದಲೂ ನಡೆದುಕೊಂಡು ಬರುತ್ತಿದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
