Asianet Suvarna News Asianet Suvarna News

ಜಯಾ ಉತ್ತರಾಧಿಕಾರಿಗಳ ಜಟಾಪಟಿ, ಬಾಟಲಿ ತೂರಾಟ

* ಇಪಿಎಸ್‌ ನಾಯಕತ್ವಕ್ಕೆ ಅಣ್ಣಾಡಿಎಂಕೆಯ ಬಹುತೇಕರ ಬೆಂಬಲ

* ಅಸಮಾಧಾನಗೊಂಡು ಸಭೆಯಿಂದ ಹೊರನಡೆದ ಪನ್ನೀರ್‌ಸೆಲ್ವಂ

* ಮಾಜಿ ಸಿಎಂರತ್ತ ಬಾಟಲಿಗಳನ್ನು ತೂರಿ ಕಾರ‍್ಯಕರ್ತರ ಆಕ್ರೋಶ

* ಹೈಕೋರ್ಟಲ್ಲಿ ರಾತ್ರಿಯಿಡೀ ಡ್ರಾಮಾ ಬಳಿಕ ಬೆಳಗ್ಗೆಯೂ ಜಗಳ

AIADMK meet begins cadres rent the air with rival slogans pod
Author
Bangalore, First Published Jun 24, 2022, 10:17 AM IST

ಚೆನ್ನೈ(ಜೂ.24): ತಮಿಳುನಾಡು ಮಾಜಿ ಮುಖ್ಯಮಂತ್ರಿಗಳಾದ ಎಡಪ್ಪಾಡಿ ಕೆ.ಪಳನಿಸ್ವಾಮಿ (ಇಪಿಎಸ್‌) ಹಾಗೂ ಒ.ಪನ್ನೀರ್‌ಸೆಲ್ವಂ (ಒಪಿಎಸ್‌) ಅವರ ನಡುವೆ ಅಣ್ಣಾಡಿಎಂಕೆಯಲ್ಲಿ ಸೃಷ್ಟಿಯಾಗಿರುವ ಬಣಜಗಳ ತೀವ್ರವಾಗಿದೆ. ನಾಟಕೀಯ ಬೆಳವಣಿಗೆಗಳ ನಡುವೆ ನಸುಕಿನ ಜಾವ 4ಕ್ಕೆ ಹೈಕೋರ್ಚ್‌ ನೀಡಿದ ಆದೇಶವನ್ನೂ ಉಲ್ಲಂಘಿಸಿ, ಪಕ್ಷದಲ್ಲಿನ ‘ಜಂಟಿ ಸಂಯೋಜಕ’ ಹುದ್ದೆಗಳನ್ನು ತೆಗೆದು ಏಕನಾಯಕತ್ವ ಇರಬೇಕು ಹಾಗೂ ಅದು ಇಪಿಎಸ್‌ ಆಗಿರಬೇಕು ಎಂದು ಗುರುವಾರ ನಡೆದ ಅಣ್ಣಾಡಿಎಂಕೆ ಸಾಮಾನ್ಯ ಮಂಡಳಿ ಸಭೆ ಘಂಟಾಘೋಷವಾಗಿ ಸಾರಿದೆ.

ಈ ನಿರ್ಧಾರದಿಂದ ಅಸಮಾಧಾನಗೊಂಡು ಸಭೆಯಿಂದ ಹೊರನಡೆಯಲು ಮುಂದಾದ ಒಪಿಎಸ್‌ ಮೇಲೆ ಇಪಿಎಸ್‌ ಬೆಂಬಲಿಗರು ಎರಡು ನೀರಿನ ಬಾಟಲಿಗಳನ್ನು ತೂರಿದ್ದಾರೆ. ಆದರೆ ಅವೆರಡೂ ಒಪಿಎಸ್‌ ಮೇಲೆ ಬಿದ್ದಿಲ್ಲ. ಅಣ್ಣಾಡಿಎಂಕೆಯಲ್ಲಿನ ಈ ಜಗಳದ ಬಗ್ಗೆ ಡಿಎಂಕೆ ಮುಖ್ಯಸ್ಥ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಲೇವಡಿ ಮಾಡಿದ್ದಾರೆ. ಡಿಎಂಕೆಯನ್ನು ನಾಮಾವಶೇಷ ಮಾಡಲು ಯಾರು ಬಯಸಿದ್ದರೋ ಅವರೇ ಅಸ್ತಿತ್ವ ಕಳೆದುಕೊಳ್ಳುತ್ತಿದ್ದಾರೆ ಎಂದು ಮೂದಲಿಸಿದ್ದಾರೆ.

ಏನಿದು ಜಗಳ?:

ಜಯಲಲಿತಾ ನಿಧನಾನಂತರ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ಖಾಲಿ ಇದೆ. ಹಾಲಿ ನಾಯಕರಾದ ಪಳನಿಸ್ವಾಮಿ ಹಾಗೂ ಪನ್ನೀರಸೆಲ್ವಂ ‘ಜಂಟಿ ಸಂಯೋಜಕ’ ಎಂಬ ಸಮಾನ ಸ್ಥಾನಮಾನದ ಹುದ್ದೆಯಲ್ಲಿದ್ದರೆ.

ಈ ನಡುವೆ ಗುರುವಾರ ಅಣ್ಣಾಡಿಎಂಕೆಯ ಸಾಮಾನ್ಯ ಮಂಡಳಿ ಹಾಗೂ ಕಾರ್ಯಕಾರಿ ಮಂಡಳಿ ಸಭೆ ನಿಗದಿಯಾಗಿತ್ತು. ಅದರಲ್ಲಿ 23 ನಿರ್ಣಯಗಳನ್ನು ಅಂಗೀಕರಿಸಬೇಕಿತ್ತು. ಆದರೆ ಪಕ್ಷದ ಬಹುತೇಕ ಜಿಲ್ಲಾ ಮುಖ್ಯಸ್ಥರು ಜಂಟಿ ಸಂಯೋಜಕ ಹುದ್ದೆಗ ಬದಲು ‘ಏಕನಾಯಕತ್ವ’ದ ಪರ ದನಿ ಎತ್ತಿದ್ದರು. ಇಪಿಎಸ್‌ ಅವರಿಗೆ ಪಕ್ಷದ ಹೊಣೆ ವಹಿಸಬೇಕು ಎಂದು ಒತ್ತಾಯಿಸಿದ್ದರು. ಈ ವಿಷಯ ಗುರುವಾರದ ಸಭೆಯಲ್ಲಿ ಚರ್ಚೆಗೆ ಬರಬಹುದು ಎಂದು ತಿಳಿದು ಕಾನೂನುಸಮರವೂ ಆರಂಭವಾಯಿತು.

ಬುಧವಾರ ರಾತ್ರಿ 9ರ ವೇಳೆಗೆ ಆದೇಶ ಹೊರಡಿಸಿದ ಹೈಕೋರ್ಚ್‌ ಏಕಸದಸ್ಯ ಪೀಠ, ಈಗಾಗಲೇ ನಿಗದಿಯಾಗಿರುವಂತೆ 23 ನಿರ್ಣಯಗಳನ್ನು ಮಂಡಿಸಲು ಅಡ್ಡಿ ಇಲ್ಲ. ಆದರೆ ಹೊಸ ನಿರ್ಣಯ (ಏಕನಾಯಕತ್ವ) ಮಂಡಿಸುವುದಕ್ಕೆ ನಿರ್ಬಂಧವಿರುತ್ತದೆ ಎಂದು ಆದೇಶಿಸಿತು. ಇದರ ವಿರುದ್ಧ ತಡರಾತ್ರಿ ಮುಖ್ಯನ್ಯಾಯಮೂರ್ತಿಗಳನ್ನು ಭೇಟಿ ಮಾಡಿ ಮೇಲ್ಮನವಿ ಸಲ್ಲಿಸಲು ಮತ್ತೊಂದು ಬಣ ಅವಕಾಶ ಕೇಳಿತು. ವಿಶೇಷ ವಿಭಾಗೀಯ ಪೀಠವನ್ನು ರಚಿಸಿದ ಮುಖ್ಯ ನ್ಯಾಯಮೂರ್ತಿಗಳು ನ್ಯಾಯಾಧೀಶರ ಮನೆಯಲ್ಲೇ ವಿಚಾರಣೆ ನಡೆಸಲು ಸೂಚಿಸಿದರು. ಅದರಂತೆ ತಡರಾತ್ರಿ 1ಕ್ಕೆ ವಿಚಾರಣೆ ಆರಂಭವಾಗಿ ನಸುಕಿನ 4ಕ್ಕೆ ತೀರ್ಪು ಹೊರಬಂತು. ಯಾವುದೇ ಹೊಸ ನಿರ್ಣಯ ಮಂಡಿಸುವಂತಿಲ್ಲ. ಎರಡು ಹುದ್ದೆಗಳನ್ನು ರದ್ದುಗೊಳಿಸಿ ಒಂದೇ ಹುದ್ದೆ ಸೃಷ್ಟಿಸುವ ನಿರ್ಣಯಗಳನ್ನು ಕೈಗೆತ್ತಿಕೊಳ್ಳುವಂತಿಲ್ಲ ಎಂದು ಸೂಚಿಸಿತು. ಇದರಿಂದ ಒಪಿಎಸ್‌ ಬಣದ ಕಾರ್ಯಕರ್ತರು ಸಂಭ್ರಮಿಸಿದರು.

ಆದರೆ ಗುರುವಾರ ಸಭೆ ಆರಂಭವಾದಾಗ ಅಲ್ಲಿ ಒಪಿಎಸ್‌ಗಿಂತ ಇಪಿಎಸ್‌ ಬಣದವರೇ ಅಧಿಕ ಸಂಖ್ಯೆಯಲ್ಲಿದ್ದರು. ಎಲ್ಲ 23 ನಿರ್ಣಯಗಳನ್ನೂ ತಿರಸ್ಕರಿಸಿ, ಒಂದೇ ನಾಯಕತ್ವದ ಪರ ಕೂಗೆದ್ದಿತು. ಹಲವರು ಇಪಿಎಸ್‌ ಅವರಿಗೆ ಸನ್ಮಾನವನ್ನೂ ಆರಂಭಿಸಿದರು. ಇದರಿಂದ ರೋಸಿ ಹೋದ ಒಪಿಎಸ್‌ ಸಭೆಯಿಂದ ಹೊರನಡೆಯಲು ಮುಂದಾದಾಗ ನೀರಿನ ಬಾಟಲಿಗಳನ್ನು ತೂರಲಾಯಿತು.

Follow Us:
Download App:
  • android
  • ios