2026ರ ತಮಿಳುನಾಡು ವಿಧಾನಸಭೆ ಚುನಾವಣೆಗೆ AIADMK-BJP ಮೈತ್ರಿಕೂಟ ರಚನೆಯಾಗಿದೆ. ಅಮಿತ್ ಶಾ ಚೆನ್ನೈಗೆ ಭೇಟಿ ನೀಡಿ ಎಡಪ್ಪಾಡಿ ಪಳನಿಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದರು. 2026ರ ಚುನಾವಣೆಯಲ್ಲಿ AIADMK ಮತ್ತು ಬಿಜೆಪಿ ಒಟ್ಟಾಗಿ ಸ್ಪರ್ಧಿಸಲಿವೆ ಎಂದು ಅಮಿತ್ ಶಾ ಘೋಷಿಸಿದರು. ಈ ಮೈತ್ರಿಯು ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದಲ್ಲಿ ಮುಂದುವರೆಯಲಿದ್ದು, ಗೆಲುವಿನ ನಂತರ ಸಚಿವ ಸ್ಥಾನಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಮಿಳುನಾಡಿನಲ್ಲಿ 2026ರ ವಿಧಾನಸಭೆ ಚುನಾವಣೆಗೆ ಇನ್ನೊಂದೇ ವರ್ಷ ಬಾಕಿ ಇರುವಾಗ ಎಐಎಡಿಎಂಕೆ-ಬಿಜೆಪಿ ಮೈತ್ರಿ ಖಚಿತವಾಗಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಮೈತ್ರಿಯನ್ನು ಘೋಷಿಸಿದೆ. ಈ ಸಂಬಂಧ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಕೇಂದ್ರ ಗೃಹ ಸಚಿವ ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಉಳಿದ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಕಾರ್ಯಗಳನ್ನು ತೀವ್ರಗೊಳಿಸಿವೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ದೊಡ್ಡ ಮೈತ್ರಿಕೂಟವನ್ನು ರಚಿಸಿ ಒಗ್ಗಟ್ಟಾಗಿ ಹೋರಾಡಲು ಮೈತ್ರಿ ಮಾಡಿಕೊಂಡಿದೆ. ತಮಿಳುನಾಡಿನ ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡು ಆಡಳಿತಕ್ಕೆ ಬರಲು ಬಿಜೆಪಿ ತೀವ್ರವಾಗಿ ಪ್ರಯತ್ನಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಈ ಮೈತ್ರಿಯು ಪ್ರಮುಖ ಎನಿಸಿಕೊಂಡಿದೆ.
ಅಮಿತ್ ಶಾ - ಎಡಪ್ಪಾಡಿ ಪಳನಿಸ್ವಾಮಿ ಭೇಟಿ
ಏಪ್ರಿಲ್ 10ರಂದು ಚೆನ್ನೈಗೆ ಬಂದ ಅಮಿತ್ ಶಾ ಗಿಂಡಿಯಲ್ಲಿರುವ ಸ್ಟಾರ್ ಹೋಟೆಲ್‌ನಲ್ಲಿ ತಂಗಿದ್ದರು. ಹೀಗಾಗಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಅಮಿತ್ ಶಾರನ್ನು ಭೇಟಿಯಾಗುತ್ತಾರೆಯೇ ಎಂಬ ಪ್ರಶ್ನೆ ಉದ್ಭವಿಸಿತ್ತು. ಇಂದು ಸಂಜೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಚೆನ್ನೈನ ಗಿಂಡಿಯಲ್ಲಿರುವ ಸ್ಟಾರ್ ಹೋಟೆಲ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಹೋಟೆಲ್‌ಗೆ ತೆರಳಿದ ಎಡಪ್ಪಾಡಿ ಪಳನಿಸ್ವಾಮಿಯನ್ನು ಅಮಿತ್ ಶಾ ಹೂಗುಚ್ಛ ನೀಡಿ ಬರಮಾಡಿಕೊಂಡರು. ಇಬ್ಬರೂ 2026ರ ವಿಧಾನಸಭೆ ಚುನಾವಣೆ ಕುರಿತಂತೆ ಮತ್ತು ಈ ಚುನಾವಣೆಯಲ್ಲಿ ಎಐಎಡಿಎಂಕೆ, ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಹೊರತು ಇತರ ಹಲವು ಗೌಪ್ಯ ವಿವಾರಗಳ ಬಗ್ಗೆ ಮಾತನಾಡಿದ್ದಾರೆಂದು ತಿಳಿದುಬಂದಿದೆ.
ಅಣ್ಣಾಮಲೈ ಬದಲಾದ್ರೆ ಯಾರಿಗೆ ಒಲಿಯಲಿದೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ?
ಹೊಟೇಲ್ ನಿಂದ ಜೊತೆಯಾಗಿ ಹೊರಬಂದ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಅಮಿತ್ ಶಾ ಮಾಧ್ಯಮಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅಮಿತ್ ಶಾ, ''2026ರ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ಒಟ್ಟಾಗಿ ಚುನಾವಣೆ ಎದುರಿಸಲಿವೆ. 2026ರ ಚುನಾವಣೆಯಲ್ಲಿ ಮೈತ್ರಿ ಸರ್ಕಾರ ಇರುತ್ತದೆ. ಇಪಿಎಸ್ ನೇತೃತ್ವದಲ್ಲಿ ಈ ಮೈತ್ರಿ ಇರುತ್ತದೆ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಅಮಿತ್ ಶಾ, ಎಐಎಡಿಎಂಕೆ, ಬಿಜೆಪಿ ಮೈತ್ರಿ ಸಹಜವಾಗಿ ಒಂದಾದ ಮೈತ್ರಿ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದಲ್ಲಿ ಈ ಮೈತ್ರಿ ಇರಲಿದೆ. ಈ ಮೈತ್ರಿಯಿಂದ 2026ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಮೈತ್ರಿ ಕೂಟದ್ದೇ ಆಗಿರಲಿದೆ. ಗೆದ್ದ ನಂತರ ಉಳಿದ ವಿಚಾರಗಳ ಬಗ್ಗೆ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ಎಐಎಡಿಎಂಕೆ, ಬಿಜೆಪಿ ಮೈತ್ರಿ ಇಬ್ಬರಿಗೂ ಲಾಭದಾಯಕವಾಗಿದೆ. ಯಾರು, ಯಾರಿಗೆ ಎಷ್ಟು ಸ್ಥಾನಗಳು ಎಂಬುದನ್ನು ನಂತರ ಮಾತನಾಡಿ ನಿರ್ಧರಿಸಲಾಗುವುದು. ಎಐಎಡಿಎಂಕೆಯ ಆಂತರಿಕ ವಿಷಯಗಳಲ್ಲಿ ನಾವು ತಲೆ ಹಾಕುವುದಿಲ್ಲ ಎಂದರು.
ತಮಿಳುನಾಡು ವಿಧಾನಸಭಾ ಚುನಾವಣೆ: ಬಿಜೆಪಿ-ಎಐಎಡಿಎಂಕೆ ಮೈತ್ರಿಗಾಗಿ ಅಣ್ಣಾ ಮಲೈ ರಾಜ್ಯಾಧ್ಯಕ್ಷ ಸ್ಥಾನ ಬಲಿಪಶು?
ಬಿಜೆಪಿ ಅಧ್ಯಕ್ಷರಾಗಿ ನಾಗೇಂದ್ರನ್
ತಮಿಳುನಾಡು ರಾಜಕೀಯದಲ್ಲಿ ವಿವಿಧ ಬೆಳವಣಿಗೆಗಳು ನಡೆಯುತ್ತಿದ್ದು, ಏಪ್ರಿಲ್ 10ರಂದೇ ಚೆನ್ನೈಗೆ ಅಮಿತ್ ಶಾ ಬಂದಿಳಿದಿದ್ದರು. ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಯನ್ನು ಅಂತಿಮಗೊಳಿಸಲು ಮತ್ತು ತಮಿಳುನಾಡಿಗೆ ಹೊಸ ಬಿಜೆಪಿ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಲುವಾಗಿ ನಿನ್ನೆಯಿಂದ ಚೆನ್ನೈನಲ್ಲಿ ಬೀಡುಬಿಟ್ಟಿದ್ದಾರೆ. ಈ ಬೆಳವಣಿಗೆಯ ಮಧ್ಯೆಯೇ ಎಲ್ಲರೂ ನಿರೀಕ್ಷಿಸಿದಂತೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನಯಿನಾರ್ ನಾಗೇಂದ್ರನ್ ನಾಮಪತ್ರ ಸಲ್ಲಿಸಿದ್ದಾರೆ. ಶುಕ್ರವಾರ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಏಕೈಕ ವ್ಯಕ್ತಿ ನಾಗೇಂದ್ರನ್.
ಈ ಹಿನ್ನೆಲೆಯಲ್ಲಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅಣ್ಣಾಮಲೈ ಅವರ ಸ್ಥಾನವನ್ನು ತುಂಬಲಿದ್ದಾರೆ. ಎಐಎಡಿಎಂಕೆಯ ಉನ್ನತ ನಾಯಕ ಇ. ಪಳನಿಸ್ವಾಮಿ ಪಶ್ಚಿಮ ತಮಿಳುನಾಡಿನಲ್ಲಿ ಪ್ರಬಲ ನಾಯಕ.ಅಣ್ಣಾಮಲೈ ಕೂಡ ಇದೇ ಕ್ಷೇತ್ರದಲ್ಲಿ ಪ್ರಬಲ ನಾಯಕ. ಎಐಎಡಿಎಂಕೆ ಪಕ್ಷಕ್ಕೆ ಮತ್ತು ಅಣ್ಣಾಮಲೈಗೆ ಅಷ್ಟಕ್ಕೆ ಅಷ್ಟೇ. 2023 ರಲ್ಲಿ ಜೆ. ಜಯಲಲಿತಾ ಸೇರಿದಂತೆ ಎಐಎಡಿಎಂಕೆಯ ಉನ್ನತ ನಾಯಕರ ವಿರುದ್ಧ ಅಣ್ಣಾಮಲೈ ಅವರು ಆಕ್ರೋಶ ವ್ಯಕ್ತಪಡಿಸಿ ಎಐಎಡಿಎಂಕೆ ಅವರ ವಿರುದ್ಧ ನಿರ್ಣಯ ಮಂಡಿಸಲು ಮುಂದಾಗಿ ಅಂತಿಮವಾಗಿ ಬಿಜೆಪಿಯೊಂದಿಗಿನ ಮೈತ್ರಿಯಿಂದ ಹಿಂದೆ ಸರಿಯಲು ಕಾರಣವಾಯಿತು. ಆದರೆ ಈ ಬಾರಿ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಅಣ್ಣಾಮಲೈ ಅವರನ್ನು ಕೆಳಗಿಳಿಸಿದೆ.
