ರಾಜಸ್ಥಾನದ ಉದಯಪುರದ ಮೋಹನ್‌ಲಾಲ್ ಸುಖಾಡಿಯಾ ಯೂನಿವರ್ಸಿಟಿಯಲ್ಲಿ ಒಂದು ಅಳಿಲು ಕಳೆದ ಆರು ವಾರಗಳಲ್ಲಿ ಡೀನ್ ಸೇರಿದಂತೆ 20 ಜನರಿಗೆ ಕಚ್ಚಿ ಆತಂಕ ಸೃಷ್ಟಿಸಿದೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಭಯಭೀತರಾಗಿದ್ದು, ಅಳಿಲನ್ನು ಹಿಡಿಯಲು ಪಾರುಗಾಣಿಕಾ ತಂಡ ನಡೆಸಿದ ಪ್ರಯತ್ನಗಳು ವಿಫಲವಾಗಿವೆ.

ಸಾಮಾನ್ಯವಾಗಿ ಅಳಿಲು ಎಂದರೆ ನಮಗೆ ನೆನಪಾಗುವುದು ಅದರ ಮುದ್ದಾದ ರೂಪ ಮತ್ತು ಚುರುಕುತನ. ಆದರೆ ರಾಜಸ್ಥಾನದ ಉದಯಪುರದಲ್ಲಿರುವ ಮೋಹನ್‌ಲಾಲ್ ಸುಖಾಡಿಯಾ ಯೂನಿವರ್ಸಿಟಿಯ (MLSU) ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗೆ ಈಗ 'ಅಳಿಲು' ಎಂದರೆ ಸಾಕು ಬೆವರಿಳಿಯುತ್ತಿದೆ. ಕಳೆದ ಆರು ವಾರಗಳಿಂದ ಇಲ್ಲಿನ ಆರ್ಟ್ಸ್ ಕಾಲೇಜು ಕ್ಯಾಂಪಸ್‌ನಲ್ಲಿ ಒಂದು ಪುಟ್ಟ ಅಳಿಲು ದೊಡ್ಡ ಮಟ್ಟದ ಆತಂಕ ಸೃಷ್ಟಿಸಿದೆ.

ಡೀನ್ ಸೇರಿ 20 ಮಂದಿಗೆ ಅಳಿಲು ಕಡಿತ!

ಈ ಅಳಿಲು ಎಷ್ಟು ಆಕ್ರಮಣಕಾರಿಯಾಗಿದೆ ಎಂದರೆ, ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಯೂನಿವರ್ಸಿಟಿಯ ಡೀನ್ ಸೇರಿದಂತೆ ಸುಮಾರು 20 ಜನರನ್ನು ಕಚ್ಚಿ ಗಾಯಗೊಳಿಸಿದೆ. ಕ್ಯಾಂಪಸ್‌ನ ಸೈಕಾಲಜಿ (ಮನಃಶಾಸ್ತ್ರ) ವಿಭಾಗದ ಬಳಿ ಓಡಾಡುವವರೇ ಈ ಅಳಿಲಿನ ಪ್ರಮುಖ ಟಾರ್ಗೆಟ್. ದಾರಿಯಲ್ಲಿ ಸುಮ್ಮನೆ ಹೋಗುವವರ ಮೇಲೆ ಇದ್ದಕ್ಕಿದ್ದಂತೆ ಮರದಿಂದ ಹಾರಿಬರುವ ಈ ಅಳಿಲು, ಕೈ ಅಥವಾ ಕಾಲಿಗೆ ಬಲವಾಗಿ ಕಚ್ಚಿ, ಪರಚಿ ಕ್ಷಣಾರ್ಧದಲ್ಲಿ ಮತ್ತೆ ಮರವೇರಿ ಮಾಯವಾಗುತ್ತಿದೆ.

ವಿದ್ಯಾರ್ಥಿಗಳಲ್ಲಿ ಮನೆಮಾಡಿದ 'ಅಳಿಲು' ಭಯ:

ಈ ವಿಚಿತ್ರ ಘಟನೆಯಿಂದಾಗಿ ಆರ್ಟ್ಸ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಮರಗಳ ಕೆಳಗೆ ನಡೆಯಲು ಹೆದರುತ್ತಿದ್ದಾರೆ. ಯಾವಾಗ ಯಾವ ಮರದಿಂದ ಅಳಿಲು ಮೈಮೇಲೆ ಬೀಳುತ್ತದೋ ಎಂಬ ಆತಂಕ ಎಲ್ಲರನ್ನೂ ಕಾಡುತ್ತಿದೆ. ಸೈಕಾಲಜಿ ವಿಭಾಗಕ್ಕೆ ಹೋಗುವ ದಾರಿಯಲ್ಲಿ ಅಳಿಲಿನ ಕಾಟ ಹೆಚ್ಚಿರುವುದರಿಂದ, ಆ ದಾರಿಯನ್ನೇ ಬಳಸಲು ವಿದ್ಯಾರ್ಥಿಗಳು ಹಿಂಜರಿಯುತ್ತಿದ್ದಾರೆ.

ಹಿಡಿಯಲು ಹೋದ ತಂಡಕ್ಕೇ ಚಳ್ಳೆಹಣ್ಣು ತಿನ್ನಿಸಿದ ಅಳಿಲು!

ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಯೂನಿವರ್ಸಿಟಿ ಆಡಳಿತ ಮಂಡಳಿಯು ಅನಿಮಲ್ ಏಡ್ (Animal Aid) ಪಾರುಗಾಣಿಕಾ ತಂಡಕ್ಕೆ ಮೊರೆ ಹೋಗಿತ್ತು. ಪಾರುಗಾಣಿಕಾ ತಂಡ ಎರಡು ಬಾರಿ ಕ್ಯಾಂಪಸ್‌ಗೆ ಭೇಟಿ ನೀಡಿ ಅಳಿಲನ್ನು ಹಿಡಿಯಲು ಬಲೆ ಬೀಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಚಾಣಾಕ್ಷ ಅಳಿಲು ಎಲ್ಲಾ ಬಲೆಗಳಿಗೂ ತಪ್ಪಿಸಿಕೊಳ್ಳುತ್ತಿದ್ದು, ಸಿಬ್ಬಂದಿಗೆ ಪರೀಕ್ಷೆ ಒಡ್ಡಿದೆ.

ಅಳಿಲು ಇಷ್ಟೊಂದು ಆಕ್ರಮಣಕಾರಿಯಾಗಲು ಕಾರಣವೇನು?

ಸಾಮಾನ್ಯವಾಗಿ ಅಳಿಲುಗಳು ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ. ಆದರೆ ಈ ಅಳಿಲು ಏಕೆ ಹೀಗೆ ವರ್ತಿಸುತ್ತಿದೆ ಎಂಬ ಪ್ರಶ್ನೆಗೆ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಶೈಲೇಂದ್ರ ಕುಮಾರ್ ಶರ್ಮಾ ಕೆಲವು ಕಾರಣಗಳನ್ನು ನೀಡಿದ್ದಾರೆ. 'ಕೆಲವು ಬಣ್ಣಗಳಿಂದ ಉಂಟಾಗುವ ಭಾಗಶಃ ಕುರುಡುತನ ಅಥವಾ ಯಾವುದೋ ಪ್ರಚೋದನೆಯಿಂದ ಅಳಿಲು ಈ ರೀತಿ ವರ್ತಿಸುತ್ತಿರಬಹುದು. ಅಳಿಲು ಕಚ್ಚಿಸಿಕೊಂಡವರು ನಿರ್ಲಕ್ಷ್ಯ ಮಾಡದೆ ಕೂಡಲೇ ಟೆಟನಸ್ (Tetanus) ಇಂಜೆಕ್ಷನ್ ತೆಗೆದುಕೊಳ್ಳುವುದು ಕಡ್ಡಾಯ' ಎಂದು ಅವರು ಸಲಹೆ ನೀಡಿದ್ದಾರೆ.

Scroll to load tweet…

ಸದ್ಯ ಉದಯಪುರದ ಈ ಯೂನಿವರ್ಸಿಟಿಯಲ್ಲಿ ಅಳಿಲನ್ನು ಹಿಡಿಯಲು ಕಾರ್ಯಾಚರಣೆ ಮುಂದುವರಿದಿದೆ. ಅಲ್ಲಿಯವರೆಗೆ ವಿದ್ಯಾರ್ಥಿಗಳು ಕೈಯಲ್ಲಿ ಕೋಲು ಹಿಡಿದು ಅಥವಾ ಮರಗಳಿಂದ ದೂರವೇ ಓಡಾಡುವಂತಾಗಿದೆ.