ಭೋಪಾಲ್‌/ಝಾನ್ಸಿ(ಮೇ.25): ಕೊರೋನಾ ವೈರಸ್‌ ವಿರುದ್ಧ ದೇಶ ಸಮರ ಸಾರಿರುವಾಗಲೇ ಉತ್ತರ ಭಾರತದ ರಾಜ್ಯಗಳು ಮಿಡತೆ ಹಿಂಡಿನ ದಾಳಿಯಿಂದ ತತ್ತರಿಸಿವೆ. 3 ಕಿ.ಮೀ. ವಿಶಾಲವಾದ ಮಿಡತೆ ಹಿಂಡು ರಾಜಸ್ಥಾನ ಬಳಿಕ ಈಗ ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶಕ್ಕೆ ಲಗ್ಗೆ ಇಟ್ಟಿದೆ. ಪಂಜಾಬ್‌ ಹಾಗೂ ಗುಜರಾತ್‌ನತ್ತಲೂ ಧಾವಿಸುತ್ತಿದೆ. ಮಧ್ಯಪ್ರದೇಶ ಈ ಪರಿಯ ಮಿಡತೆ ದಾಳಿಯನ್ನು 27 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಾಣುವ ಮೂಲಕ ಹೈರಾಣಾಗಿದೆ. ಸಹಸ್ರಾರು ಕೋಟಿ ರು. ಮೌಲ್ಯದ ಬೆಳೆ ನಾಶವಾಗುವ ಭೀತಿ ಎದುರಾಗಿದ್ದು, ದೇಶದ ಆಹಾರ ಭದ್ರತೆಗೇ ಸವಾಲಾಗಿ ಪರಿಣಮಿಸಿದೆ.

ಮಿಡತೆಗಳ ದಾಳಿಗೆ ಹೈರಾಣ: ನ್ಯಾಶನಲ್ ಎಮರ್ಜೆನ್ಸಿ ಘೋಷಿಸಿದ ಪಾಕಿಸ್ತಾನ!

ಮಿಡತೆ ಹಿಂಡೆ ಬೆಳೆದು ನಿಂತಿರುವ ಬೆಳೆಗಳನ್ನು ತಿಂದು ನಾಶಪಡಿಸುತ್ತಿದೆ. ಹೀಗಾಗಿ ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶದಲ್ಲಿ ಅಗ್ನಿಶಾಮಕ ವಾಹನಗಳನ್ನು ಬಳಸಿ ಕೀಟನಾಶಕ ಸಿಂಪಡಿಸುವ ಮೂಲಕ ಮಿಡತೆ ಕೊಲ್ಲುವ ಕಾರ್ಯಾಚರಣೆ ನಡೆಯುತ್ತಿದೆ.

ರಾಜಸ್ಥಾನ ಮೂಲಕ ಪ್ರವೇಶಿಸಿರುವ ಈ ಮಿಡತೆ ಹಿಂಡು, ಬೆಳೆದು ನಿಂತಿರುವ ಬೆಳೆ ಹಾಗೂ ಮರಗಳನ್ನು ತಿಂದು ತೇಗುತ್ತಿದೆ. ರಾತ್ರಿ 7ರಿಂದ 9ರವರೆಗೆ ವಿಶ್ರಾಂತಿ ಪಡೆಯುತ್ತದೆ. ಅಂತಹ ಸಂದರ್ಭ ನೋಡಿಕೊಂಡು ಸಂಹಾರ ಮಾಡುವ ಸಿದ್ಧತೆ ನಡೆಯುತ್ತಿದೆ.

ಶೀಘ್ರದಲ್ಲೇ ಈ ಮಿಡತೆ ಸೇನೆಯನ್ನು ಸಂಹಾರ ಮಾಡದಿದ್ದರೆ ಬೆಳೆದು ನಿಂತಿರುವ 8000 ಕೋಟಿ ರು. ಮೌಲ್ಯದ ಹೆಸರು ಕಾಳಿನ ಬೆಳೆ ನಾಶವಾಗಲಿದೆ. ಬಹುದೂರ ಕ್ರಮಿಸುವ ಈ ಮಿಡತೆಗಳು ಹತ್ತಿ ಹಾಗೂ ಮೆಣಸಿನಕಾಯಿ ಬೆಳೆಯನ್ನೂ ನಾಶಗೊಳಿಸಿ ಇನ್ನಷ್ಟುಸಹಸ್ರ ಕೋಟಿ ನಷ್ಟಉಂಟು ಮಾಡಲಿವೆ ಎಂದು ತಜ್ಞರು ತಿಳಿಸಿದ್ದಾರೆ.

ಬೆಳೆ ಹಾನಿಗೆ ಪರಿಹಾರ ಕೇಳಲು ವಿಧಾನಸಭೆಗೆ ಮಿಡತೆ ತಂದ ಶಾಸಕ!

ದೇಶದಲ್ಲಿ ಮಿಡತೆ ಹಾವಳಿ ಸಾಮಾನ್ಯ. ಆದರೆ ನವೆಂಬರ್‌ ವೇಳೆಗೆ ಅದು ಮುಕ್ತಾಯಗೊಳ್ಳುತ್ತದೆ. ಆದರೆ ಹವಾಮಾನ ವೈಪರೀತ್ಯದಿಂದಾಗಿ ಡಿಸೆಂಬರ್‌ನಿಂದ ಫೆಬ್ರವರಿವರೆಗೂ ಮಿಡತೆಗಳು ರೈತರ ನಿದ್ರೆಗೆಡಿಸಿದ್ದವು. ಈಗ ಎರಡನೇ ಸುತ್ತಿನಲ್ಲಿ ಮತ್ತೊಮ್ಮೆ ದಾಳಿ ನಡೆಸಿವೆ. ಮುಂಗಾರು ಮಾರುತಗಳ ಆಗಮನದವರೆಗೂ ಈ ಸಮಸ್ಯೆ ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.