'ಕೇವಲ ಗುಜರಾತಿಗಳು ದರೋಡೆಕೋರರಾಗಲು ಸಾಧ್ಯ' ಎಂಬ ಹೇಳಿಕೆ: ಲಾಲೂ ಪುತ್ರನ ವಿರುದ್ಧ ಮಾನಹಾನಿ ಕೇಸ್
‘ಸದ್ಯದಲ್ಲಿ ಗುಜರಾತಿಗಳು ಮಾತ್ರ ದರೋಡೆಕೋರರಾಗಬಹುದು. ಅವರು ಎಲ್‌ಐಸಿ ಹಾಗೂ ಬ್ಯಾಂಕ್ ಹಣದೊಂದಿಗೆ ಪರಾರಿಯಾದರೆ ಯಾರು ಹೊಣೆ’ ಎಂದು ತೇಜಸ್ವಿ ಯಾದವ್ ಪ್ರಶ್ನಿಸಿದ್ದರು.
ಅಹಮದಾಬಾದ್ (ಏಪ್ರಿಲ್ 27, 2023): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಳಿಕ ಈಗ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ವಿರುದ್ಧವೂ ಗುಜರಾತ್‌ನಲ್ಲಿ ಮಾನನಷ್ಟ ಕೇಸ್ ದಾಖಲಾಗಿದೆ. ‘ಕೇವಲ ಗುಜರಾತಿಗಳು ದರೋಡೆಕೋರರಾಗಲು ಸಾಧ್ಯ’ ಎಂದು ಹೇಳಿಕೆ ನೀಡಿದ ಬಿಹಾರದ ಉಪಮುಖ್ಯಮಂತ್ರಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮೇಲೆ ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಬುಧವಾರ ಕ್ರಿಮಿನಲ್ ಮಾನಹಾನಿ ಮೊಕದ್ದಮೆ ಹೂಡಲಾಗಿದೆ.
ಮಾರ್ಚ್ 21 ರಂದು ಪಟನಾದಲ್ಲಿ ಮಾತನಾಡಿದ್ದ ತೇಜಸ್ವಿ, ‘ಸದ್ಯದಲ್ಲಿ ಗುಜರಾತಿಗಳು ಮಾತ್ರ ದರೋಡೆಕೋರರಾಗಬಹುದು. ಅವರು ಎಲ್‌ಐಸಿ ಹಾಗೂ ಬ್ಯಾಂಕ್ ಹಣದೊಂದಿಗೆ ಪರಾರಿಯಾದರೆ ಯಾರು ಹೊಣೆ’ ಎಂದು ಪ್ರಶ್ನಿಸಿದ್ದರು. ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಹಾಗೂ ಉದ್ಯಮಿ ಹರೇಶ್ ಮೆಹ್ತಾ ಸೆಕ್ಷನ್ 499, 500ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದರೋಡೆಕೋರರೆಂದು ಕರೆಯುವ ಮೂಲಕ ತೇಜಸ್ವಿ, ಗುಜರಾತಿ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ದೂರಲಾಗಿದೆ.
ಇದನ್ನು ಓದಿ: ಮೋದಿ ಸರ್‌ನೇಮ್ ಕೇಸ್: ಜೈಲು ಶಿಕ್ಷೆಗೆ ತಡೆ ಕೋರಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ ರಾಹುಲ್ ಗಾಂಧಿ
ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದೇನು?
ಮಾರ್ಚ್‌ನಲ್ಲಿ, ತೇಜಸ್ವಿ ಯಾದವ್ ದೇಶದ ಪರಿಸ್ಥಿತಿಯು ಗುಜರಾತಿ ಮಾತ್ರ ವಂಚಕನಾಗಬಹುದು ಮತ್ತು ಅವರ ವಂಚನೆಯನ್ನು ಕ್ಷಮಿಸಲಾಗುವುದು ಎಂದು ಹೇಳಿದ್ದರು. "ದೇಶದ ಪ್ರಸ್ತುತ ಸನ್ನಿವೇಶದಲ್ಲಿ, ಗುಜರಾತಿ ಮಾತ್ರ ವಂಚಕನಾಗಬಹುದು, ಏಕೆಂದರೆ ಅವರ ವಂಚನೆಯನ್ನು ಕ್ಷಮಿಸಲಾಗುವುದು" ಎಂದು ಆರ್‌ಜೆಡಿ ನಾಯಕ ಹೇಳಿದ್ದರು. ಪರಾರಿಯಾದ ಭಾರತೀಯ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ (ಆರ್‌ಸಿಎನ್) ಹಿಂತೆಗೆದುಕೊಂಡ ನಂತರ ಅವರು ಈ ಹೇಳಿಕೆ ನೀಡಿದ್ದರು.
ಈ ಹಿನ್ನೆಲೆ ಹರೇಶ್ ಮೆಹ್ತಾ ಎಂಬ ಉದ್ಯಮಿ ತೇಜಸ್ವಿ ಯಾದವ್ ವಿರುದ್ಧ ಅಹಮದಾಬಾದ್‌ನ ಮೆಟ್ರೋಪಾಲಿಟನ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಈ ಹೇಳಿಕೆಯನ್ನು ತಾನು ಸುದ್ದಿಯಲ್ಲಿ ನೋಡಿದ್ದೇನೆ ಮತ್ತು ಈ ಹೇಳಿಕೆಯು ಗುಜರಾತಿನ ಹೆಮ್ಮೆಯನ್ನು ಘಾಸಿಗೊಳಿಸಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿಗೆ ಬಿಗ್ ರಿಲೀಫ್: ‘ಮೋದಿ’ ಮಾನನಷ್ಟ ಕೇಸಿಗೆ ಹೈಕೋರ್ಟ್ ತಡೆ
ತೇಜಸ್ವಿ ಯಾದವ್ ವಿರುದ್ಧ ಐಪಿಸಿ ಸೆಕ್ಷನ್ 499 ಮತ್ತು 500 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್ 499 ಮಾನನಷ್ಟ ಎಂದರೇನು ಎಂಬುದನ್ನು ವ್ಯಾಖ್ಯಾನಿಸುತ್ತದೆ, ಹಾಗೂ ಸೆಕ್ಷನ್ 500 ಮಾನನಷ್ಟಕ್ಕಾಗಿ ಶಿಕ್ಷೆಯನ್ನು ನೀಡುತ್ತದೆ.
ಪ್ರಕರಣದ ವಿಚಾರಣೆಯನ್ನು ಮೇ 1 ಕ್ಕೆ ನಿಗದಿಪಡಿಸಲಾಗಿದೆ. ನ್ಯಾಯಾಲಯವು ತೇಜಸ್ವಿ ಯಾದವ್‌ಗೆ ಸಮನ್ಸ್ ಜಾರಿಗೊಳಿಸಬಹುದು ಮತ್ತು ನ್ಯಾಯಾಲಯಕ್ಕೆ ಹಾಜರಾಗುವಂತೆ ಕೇಳಬಹುದು.
ಇದನ್ನೂ ಓದಿ: ರಾಹುಲ್ ಗಾಂಧಿಗೆ ತೀವ್ರ ಹಿನ್ನೆಡೆ: 2 ವರ್ಷ ಜೈಲು ಶಿಕ್ಷೆ ಎತ್ತಿ ಹಿಡಿದ ಸೂರತ್ ಕೋರ್ಟ್
ರಾಹುಲ್ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಹೈಕೋರ್ಟ್ ಜಡ್ಜ್
ತಮಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಸೂರತ್ ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆಗೆ ನಿಯೋಜಿಸಲಾಗಿದ್ದ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಗೀತಾ ಗೋಪಿ ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಅಲ್ಲದೇ ಪ್ರಕರಣವನ್ನು ಬೇರೊಂದು ಪೀಠಕ್ಕೆ ವರ್ಗಾಯಿಸಲು ಮುಖ್ಯ ನ್ಯಾಯಮೂರ್ತಿಗೆ ಕೋರಿದ್ದಾರೆ.
‘ಮೋದಿ’ ಉಪನಾಮದ ಕುರಿತ ಹೇಳಿಕೆ ವಿರುದ್ಧ ಮಾನನಷ್ಟ ಪ್ರಕರಣದಡಿ ಸೂರತ್ ಕೋರ್ಟ್ ರಾಹುಲ್‌ಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಹೀಗಾಗಿ ರಾಹುಲ್ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಶಿಕ್ಷೆಗೆ ತಡೆ ನೀಡಿ ಎಂದು ರಾಹುಲ್ ಸಲ್ಲಿಸಿದ್ದ ಅರ್ಜಿಯನ್ನು ಸೂರತ್ ಕೋರ್ಟ್ ತಿರಸ್ಕರಿಸಿತ್ತು. ಹೀಗಾಗಿ ರಾಹುಲ್ ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿಗೆ ಅಗ್ನಿಪರೀಕ್ಷೆ: ಜೈಲು ಶಿಕ್ಷೆ ಬಗ್ಗೆ ಇಂದು ತೀರ್ಮಾನ; ಶಿಕ್ಷೆಗೆ ತಡೆಯಾದ್ರೆ ಅನರ್ಹತೆ ರದ್ದು..!