Asianet Suvarna News Asianet Suvarna News

ತ್ರಿವಳಿ ತಲಾಖ್, ಆರ್ಟಿಕಲ್ 370, ಪೌರತ್ವ ಮಸೂದೆ: ಮುಂದಿನ ಹೆಜ್ಜೆಗೆ ಕೇಂದ್ರದ ಭರದ ಸಿದ್ಧತೆ!

ತ್ರಿವಳಿ ತಲಾಖ್, ಆರ್ಟಿಕಲ್ 370, ಪೌರತ್ವ ಮಸೂದೆ ಬೆನ್ನಲ್ಲೇ ಮತ್ತೊಂದು ಹೆಜ್ಜೆ ಇಡಲು ಕೇಂದ್ರದ ಸಿದ್ಧತೆ| ಬಿಜೆಪಿ ಸರ್ಕಾರದ ಮುಂದಿನ ನಡೆ ಏನು? ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೇರಿಸುತ್ತಾ ಕಮಲ ಪಾಳಯ?

After Citizenship Amendment Bill Central Govt May Think About Uniform Civil Code
Author
Bangalore, First Published Dec 12, 2019, 4:17 PM IST

ನವದೆಹಲಿ[ಡಿ.12]: ಪೌರತ್ವ ತಿದ್ದುಪಡಿ ಕಾಯ್ದೆ ಲೋಕಸಭೆ ಹಾಗೂ ರಾಜ್ಯಸಭೆ ಎರಡೂ ಕಡೆ ಅಂಗೀಕಾರ ಪಡೆದ ಬೆನ್ನಲ್ಲೇ ಕೇಂದ್ರ ಸರ್ಕಾರ ತನ್ನ ಮುಂದಿನ ಹೆಜ್ಜೆ ಇರಿಸುವ ಸಿದ್ಧತೆ ನಡೆಸುತ್ತಿದೆ. ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸಂವಿಧಾನದ 370ನೇ ವಿಧಿ ರದ್ದುಗೊಳಿಸುವ, ತ್ರಿವಳಿ ತಲಾಖ್‌ ತೆಗೆದು ಹಾಕುವ ಹಾಗೂ ಪೌರತ್ವ ತಿದ್ದುಪಡಿ ಮಸೂದೆ ಜಾರಿಗೊಳಿಸುವ ಭರವಸೆ ನೀಡಿತ್ತು. ಲೋಕಸಭಾ ಚುನಾವಣೆಯಲ್ಲಿ ಎರಡನೇ ಬಾರಿ ಗೆಲುವು ಸಾಧಿಸಿದ 7 ತಿಂಗಳೋಳಗೇ ಬಿಜೆಪಿ ತಾನು ಕೊಟ್ಟ ಈ ಮೂರೂ ಭರವಸೆಗಳನ್ನು ಈಡೇರಿಸಿದೆ. ಹೀಗಿರುವಾಗ ಈಗ ಇದು ತನ್ನ ಮುಂದಿನ ಹೆಜ್ಜೆ ಇಡಲು ಎಲ್ಲಾ ತಯಾರಿ ನಡೆಸುತ್ತಿದೆ. ಅಷ್ಟಕ್ಕೂ ಕೇಂದ್ರದ ಮುಂದಿನ ನಡೆ?

ರಾಜ್ಯಸಭೆಯಲ್ಲೂ ಪೌರತ್ವ ಮಸೂದೆ ಪಾಸ್, ಯಾವ ಬದಲಾವಣೆ ಆಗಲಿದೆ?

ಈ ಮಹತ್ವದ ಕಾನೂನು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿರುವ ಮೋದಿ ಸರ್ಕಾರ ಮುಂದೆ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು 'ಈಗಾಗಲೇ ಜಾರಿಗೆ ಬಂದಿರುವ ತ್ರಿವಳಿ ತಲಾಖ್, ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ನಿಟ್ಟಿನಲ್ಲಿ ಬಹುದೊಡ್ಡ ಹೆಜ್ಜೆ. ಭವಿಷ್ಯದಲ್ಲಿ ಇದನ್ನೂ ಜಾರಿಗೊಳಿಸಲಾಗುತ್ತದೆ. ಸದ್ಯ ದೇಶದೆಲ್ಲೆಡೆ NRC ಜಾರಿಗೊಳಿಸಲು ಪಕ್ಷ ಹೆಚ್ಚು ಒತ್ತು ಕೊಡಲಿದೆ. ಈಗಾಗಲೇ ಗೃಹ ಸಚಿವರು ಈ ಕುರಿತು ಘೋಷಣೆ ಮಾಡಿದ್ದಾರೆ. NRC ದೇಶದಾದ್ಯಂತ ಜಾರಿಗೊಳಿಸಲು ಕಾನೂನು ಬೇಕಿಲ್ಲ, ಸುಗ್ರೀವಾಜ್ಞೆ ಮೂಲಕವೂ ಜಾರಿಗೊಳಿಸಬಹುದು' ಎಂದಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿವಾದ ಸೃಷ್ಟಿಸಿರುವುದು ಏಕೆ?

ಪಶ್ಚಿಮ ಬಂಗಾಳ ಚುನಾವಣೆ ಹಿನ್ನೆಲೆಯಲ್ಲಿ NRC ದೇಶದಾದ್ಯಂತ ಜಾರಿಗೊಳಿಸುವುದು ಬಿಜೆಪಿಗೆ ಅತಿ ಅಗತ್ಯ ಎನ್ನಲಾಗಿದೆ. ಮತ್ತೊಂದೆಡೆ ಏಕರೂಪ ನಾಗರಿಕ ಸಂಹಿತೆ ಎಂಬುವುದು ಬಿಜೆಪಿಯ ಮೂಲ ಸಿದ್ಧಾಂತಕ್ಕೆ ಬಹಳ ಹತ್ತಿರ ಹಾಗೂ ಯಾವತ್ತೂ ಕಮಲ ಪಾಳಯದ ಪ್ರಣಾಳಿಕೆಯಲ್ಲಿರುವ ವಿಚಾರವಾಗಿದೆ. ಸುಪ್ರೀಂ ಕೋರ್ಟ್ ಕೂಡಾ ಈಗಾಗಲೇ ಏಕರೂಪ ನಾಗರಿಕ ಸಂಹಿತೆ ಕುರಿತು ಪ್ರಸ್ತಾಪಿಸಿದೆ. ಆದರೆ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಇಂತಹ ಯಾವುದೇ ಯೋಜನೆ ಇಲ್ಲ ಎಂದು ಹೇಳಲಾಗಿತ್ತು. 

ಐತಿಹಾಸಿಕ ದಿನ: ತ್ರಿವಳಿ ತಲಾಖ್ ಮಸೂದೆ ಅಂಗೀಕರಿಸಿದ ಅವಳಿ ಸದನ!

ಇನ್ನು ಈಗಾಗಲೇ ಸಂಸತ್ತಿನ ಮೇಲ್ಮನೆ ಹಾಗೂ ಕೆಳಮನೆಯಲ್ಲಿ ಅಂಗೀಕಾರ ಪಡೆದಿರುವ ಪೌರತ್ವ ತಿದ್ದುಪಡಿ ಮಸೂದೆಗೆ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಬೀದಿಗಿಳಿದಿರುವ ಜನ ಸಾಮಾನ್ಯರು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಮನೆ ಮೇಲೆ ಕಲ್ಲು ತೂರಾಟ, ರೈಲು ನಿಲ್ದಾಣಕ್ಕೆ ಬೆಂಕಿ ಹಚ್ಚುವ ಮೂಲಕ ಕೇಂದ್ರದ ನಡೆಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಮುಂದೆ ಈ ಹೋರಾಟ ಯಾವ ರೂಪ ಪಡೆದುಕೊಳ್ಳಲಿದೆ ಕಾದು ನೋಡಬೇಕಷ್ಟೇ.

ತ್ರಿವಳಿ ತಲಾಖ್‌, 370ನೇ ವಿಧಿ ರದ್ದತಿ ಬೆನ್ನಲ್ಲೇ ಏಕರೂಪ ನಾಗರಿಕ ಸಂಹಿತೆ ಜಾರಿ?

ಏಕರೂಪ ನಾಗರಿಕ ಸಂಹಿತೆ ಪರ ಸುಪ್ರೀಂ ಬ್ಯಾಟಿಂಗ್‌!

Follow Us:
Download App:
  • android
  • ios