ತ್ರಿವಳಿ ತಲಾಖ್, 370ನೇ ವಿಧಿ ರದ್ದತಿ ಬೆನ್ನಲ್ಲೇ ಏಕರೂಪ ನಾಗರಿಕ ಸಂಹಿತೆ ಜಾರಿ?
ಸರ್ಕಾರದ ಮುಂದಿನ ಗುರಿ ಏಕರೂಪ ನಾಗರಿಕ ಸಂಹಿತೆ?| ತ್ರಿವಳಿ ತಲಾಖ್, 370ನೇ ವಿಧಿ ರದ್ದತಿ ಬೆನ್ನಲ್ಲೇ ಚರ್ಚೆ| ರಾಮಮಂದಿರ ವಿವಾದಕ್ಕೆ ಕೋರ್ಟಿನಲ್ಲೇ ಪರಿಹಾರ?
ನವದೆಹಲಿ[ಆ.07]: ಜಮ್ಮು-ಕಾಶ್ಮೀರಕ್ಕೆ 7 ದಶಕಗಳಿಂದ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ 370ನೇ ವಿಧಿಯನ್ನು ಯಾರೂ ಊಹಿಸದ ರೀತಿ ಕೇಂದ್ರ ಸರ್ಕಾರ ರದ್ದುಗೊಳಿಸಿದ ಬೆನ್ನಲ್ಲೇ, ಬಿಜೆಪಿಯ ತುಂಬಾ ಹಳೆಯ ಭರವಸೆಯಾಗಿರುವ ಏಕರೂಪ ನಾಗರಿಕ ಸಂಹಿತೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರಬಹುದೇ ಎಂಬ ಚರ್ಚೆಗಳು ಆರಂಭವಾಗಿವೆ.
ಕಳೆದ ಕೇವಲ 15 ದಿನಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ತ್ರಿವಳಿ ತಲಾಖ್, 370ನೇ ವಿಧಿ ರದ್ದತಿಯಂತಹ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಹೀಗಾಗಿ ಸರ್ಕಾರದ ವೇಗ ನೋಡಿದರೆ, ಏಕರೂಪ ನಾಗರಿಕ ಸಂಹಿತೆ ಜಾರಿ ಎಂಬುದು ತೀರಾ ಸರಳವಲ್ಲದೇ ಹೋದರೂ ಅಸಾಧ್ಯವೇನಲ್ಲ ಎಂಬ ವಾದಗಳು ಕೇಳಿಬರುತ್ತಿವೆ. ತ್ರಿವಳಿ ತಲಾಖ್ ಮಸೂದೆಯನ್ನು ಸೂಕ್ಷ್ಮವಾಗಿ ನಿಭಾಯಿಸಿ, ಕಾಯ್ದೆ ರಚನೆಯಾಗುವಂತೆ ನೋಡಿಕೊಂಡ ಸರ್ಕಾರ, ಈ ವಿಷಯಕ್ಕೂ ಕೈ ಹಾಕಬಹುದು ಎನ್ನಲಾಗುತ್ತಿದೆ.
ಆಪರೇಷನ್ ಕಾಶ್ಮೀರ, ಆರ್ಟಿಕಲ್ 370 ರದ್ದು: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, 370ನೇ ವಿಧಿ ರದ್ದು ಹಾಗೂ ಏಕರೂಪ ನಾಗರಿಕ ಸಂಹಿತೆಗಳು ಬಿಜೆಪಿಯ ಹಳೆಯ ಭರವಸೆಗಳು. ಈ ಪೈಕಿ 370ನೇ ವಿಧಿ ರದ್ದಾಗಿದೆ. ರಾಮಮಂದಿರ ವಿವಾದ ಕುರಿತು ಸುಪ್ರೀಂಕೋರ್ಟಿನಲ್ಲಿ ಅಂತಿಮ ಹಂತದಲ್ಲಿದೆ. ಮಂಗಳವಾರದಿಂದ ನಿತ್ಯ ವಿಚಾರಣೆ ಆರಂಭವಾಗಿದ್ದು, ಕೆಲ ದಿನಗಳಲ್ಲಿ ಕೋರ್ಟಿನಲ್ಲೇ ಅದಕ್ಕೆ ಪರಿಹಾರ ದೊರಕುವ ನಿರೀಕ್ಷೆ ಇದೆ. ಇನ್ನು ಏಕರೂಪ ನಾಗರಿಕ ಸಂಹಿತೆಯನ್ನೂ ಜಾರಿಗೆ ತಂದುಬಿಟ್ಟರೆ ಬಿಜೆಪಿಯ ಹಳೆಯ ಭರವಸೆಗಳೆಲ್ಲಾ ಈಡೇರಿದಂತಾಗುತ್ತದೆ ಎಂಬ ವಾದಗಳು ವ್ಯಕ್ತವಾಗಿವೆ.
ಏನಿದು ಏಕರೂಪ ನಾಗರಿಕ ಸಂಹಿತೆ?
ಹಿಂದು, ಮುಸ್ಲಿಂ, ಕ್ರೈಸ್ತ ಸೇರಿದಂತೆ ದೇಶದಲ್ಲಿರುವ ಎಲ್ಲ ಧರ್ಮಗಳಿಗೂ ಸೇರಿದ ನಾಗರಿಕರಿಗೆ ಅನ್ವಯವಾಗುವ ಒಂದೇ ರೀತಿಯ ವೈಯಕ್ತಿಕ ಕಾನೂನು. ವಿವಾಹ, ವಿಚ್ಛೇದನ, ಆಸ್ತಿ ಹಂಚಿಕೆ, ಉತ್ತರಾಧಿಕಾರಿ ನೇಮಕ ವಿಚಾರವಾಗಿ ಹಿಂದು, ಮುಸ್ಲಿಮರಲ್ಲಿ ಪ್ರತ್ಯೇಕ ವೈಯಕ್ತಿಕ ಕಾನೂನುಗಳಿವೆ. ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದರೆ ಅಂತಹ ಎಲ್ಲ ಕಾಯ್ದೆಗಳೂ ರದ್ದಾಗಿ, ದೇಶಾದ್ಯಂತ ಎಲ್ಲ ಧರ್ಮೀಯರಿಗೂ ಒಂದೇ ಕಾಯ್ದೆ ಬರುತ್ತದೆ.