ಐತಿಹಾಸಿಕ ದಿನ: ತ್ರಿವಳಿ ತಲಾಖ್ ಮಸೂದೆ ಅಂಗೀಕರಿಸಿದ ಅವಳಿ ಸದನ!
ಮೋದಿ ಸರ್ಕಾರಕ್ಕೆ ಮತ್ತೊಂದು ಐತಿಹಾಸಿಕ ವಿಜಯ| ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ನಿಷೇಧ ಮಸೂದೆ ಅಂಗೀಕಾರ| ಮಸೂದೆಗೆ ರಾಷ್ಟ್ರಪತಿ ಅಂಗೀಕಾರಕ್ಕೆ ಎದುರು ನೋಡುತ್ತಿದೆ ದೇಶ| ಎಐಎಡಿಎಂಕೆ, ಜೆಡಿಯು ಸಭಾತ್ಯಾಗದಿಂದಾಗಿ ಮಸೂದೆ ಅಂಗೀಕಾರದ ದಾರಿ ಸುಗಮ| ಮುಸ್ಲಿಂ ಮಹಿಳೆಯರ ವಿವಾಹ ಹಕ್ಕು ರಕ್ಷಣಾ ಕಾಯ್ದೆ ಮಸೂದೆ 2019ಕ್ಕೆ ಅನುಮೋದನೆ| ತ್ರಿವಳಿ ತಲಾಖ್ ನೀಡಿದರೆ ಗರಿಷ್ಠ ಮೂರು ವರ್ಷ ಜೈಲು ಶಿಕ್ಷೆ|
ನವದೆಹಲಿ(ಜು.30): ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ತ್ರಿವಳಿ ತಲಾಖೆ ನಿಷೇಧ ಮಸೂದೆಯನ್ನು ರಾಜ್ಯಸಭೆ ಅಂಗೀಕರಿಸಿದೆ. ಈ ಮೂಲಕ ಮೋದಿ ಸರ್ಕಾರಕ್ಕೆ ಐತಿಹಾಸಿಕ ಜಯ ಲಭಿಸಿದ್ದು, ರಾಷ್ಟ್ರಪತಿ ಅಂಗೀಕಾರಕ್ಕೆ ಇಡೀ ದೇಶ ಎದುರು ನೋಡುತ್ತಿದೆ.
ವಿಚಿತ್ರ ತಿರುವಿನಲ್ಲಿ ಲೋಕಸಭೆಯಲ್ಲಿ ಮಸೂದೆಯನ್ನು ವಿರೋಧಿಸಿದ್ದ ಎಐಎಡಿಎಂಕೆ, ಜೆಡಿಯು ಸಭಾತ್ಯಾಗ ಮಾಡುವ ಮೂಲಕ ಹಾಗೂ ಟಿಆರ್’ಎಸ್ ರಾಜ್ಯಸಭೆಯಲ್ಲಿ ಮಸೂದೆಯನ್ನು ಮತಕ್ಕೆ ಹಾಕಿದಾಗ ಗೈರಾಗುವ ಮೂಲಕ ಮಸೂದೆ ಅಂಗೀಕಾರಕ್ಕೆ ಪರೋಕ್ಷ ಬೆಂಬಲ ನೀಡಿದವು.
ಇದಕ್ಕೂ ಮೊದಲು ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ತ್ರಿವಳಿ ತಲಾಖ್ ನಿಷೇಧ ಮಸೂದೆ ಐತಿಹಾಸಿಕವಾಗಿದ್ದು, ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರದ ಆಚೆಗೆ ರಾಜಕೀಯ ಪಕ್ಷಗಳು ಯೋಚಿಸಬೇಕಿದೆ ಎಂದು ಮನವಿ ಮಾಡಿದರು.
ಅದರಂತೆ ಲೋಕಸಭೆಯಲ್ಲಿ ಅನುಮೋದನೆ ಪಡೆದಿದ್ದ ತ್ರಿವಳಿ ತಲಾಖ್ ನಿಷೇಧಿಸುವ, ಮುಸ್ಲಿಂ ಮಹಿಳೆಯರ ವಿವಾಹ ಹಕ್ಕು ರಕ್ಷಣಾ ಕಾಯ್ದೆ ಮಸೂದೆ 2019 ನ್ನು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ರಾಜ್ಯಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದರು.
ಸುದೀರ್ಘ ಚರ್ಚೆಯ ನಂತರ ತ್ರಿವಳಿ ತಲಾಖ್ ಮಸೂದೆಯನ್ನು ಅಂತಿಮವಾಗಿ ಮತಕ್ಕೆ ಹಾಕಿದಾಗ ಮಸೂದೆಯ ಪರ 99 ಹಾಗೂ ಮತ್ತು ವಿರುದ್ಧವಾಗಿ 84 ಮತಗಳು ಬಿದ್ದವು. ಈ ಮೂಲಕ ಎನ್’ಡಿಎ ಸರ್ಕಾರದ ಮಹತ್ವಾಕಾಂಕ್ಷಿ ಮಸೂದೆ ಕೊನೆಗೂ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿತು.
ಈ ಮಸೂದೆ ಪ್ರಕಾರ, ತ್ರಿವಳಿ ತಲಾಖ್ ನೀಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಗರಿಷ್ಠ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲು ಈ ಕಾನೂನಿನಲ್ಲಿ ಅವಕಾಶವಿದೆ.