ಕಾಸರಗೋಡು (ಫೆ.22)): ಕೇರಳದಲ್ಲಿ ಎಡ ಪಕ್ಷದ ಸರ್ಕಾರ ಲವ್‌ ಜಿಹಾದ್‌ ತಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಭಾನುವಾರ ಕಿಡಿಕಾರಿದ್ದಾರೆ.

ಏಪ್ರಿಲ್‌- ಮೇನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕನ್ನಡ ಬಾಹುಳ್ಯದ ಕಾಸರಗೋಡಿನಲ್ಲಿ ಬಿಜೆಪಿ ವಿಜಯ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಯೋಗಿ ಆದಿತ್ಯನಾಥ್‌, ‘ಲವ್‌ ಜಿಹಾದ್‌ ತಡೆಯದೇ ಇದ್ದರೆ ಕೇರಳ ಇಸ್ಲಾಮಿಕ್‌ ರಾಜ್ಯವಾಗಲಿದೆ ಎಂದು 2009ರಲ್ಲಿ ಕೇರಳ ಹೈಕೋರ್ಟ್‌ ಎಚ್ಚರಿಕೆ ನೀಡಿತ್ತು.

ಇದರ ಹೊರತಾಗಿಯೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ನಿದ್ದೆ ಮಾಡುತ್ತಿದೆ. ಆದರೆ, ತಮ್ಮ ಸರ್ಕಾರ ಲವ್‌ ಜಿಹಾದ್‌ ನಿಯಂತ್ರಣಕ್ಕೆ ಕಾಯ್ದೆಯನ್ನು ಜಾರಿ ಮಾಡಿದೆ’ ಎಂದು ಹೇಳಿದರು.

15 ದಿನಗಳ ವಿಜಯಯಾತ್ರೆ 14 ಜಿಲ್ಲೆಗಳಲ್ಲಿ ಸಂಚರಿಸಿ ಮಾ.7ರಂದು ತಿರುವನಂತಪುರದಲ್ಲಿ ಮುಕ್ತಾಯಗೊಳ್ಳಲಿದೆ.