ಮುಚ್ಚಿದ ಲಕೋಟೆಯಲ್ಲಿ ತಜ್ಞರ ಹೆಸರು: ಕೇಂದ್ರ ಸರ್ಕಾರದ ಕ್ರಮಕ್ಕೆ ಸುಪ್ರೀಂಕೋರ್ಟ್ ತಿರಸ್ಕಾರ
ಮುಚ್ಚಿದ ಲಕೋಟೆಯಲ್ಲಿ ನೀಡಿದ ಸಲಹೆಯನ್ನು ನಾವು ಸ್ವೀಕರಿಸುವುದಿಲ್ಲ. ಏಕೆಂದರೆ ನಾವು ಪಾರದರ್ಶಕತೆಯನ್ನು ಖಚಿತಪಡಿಸಬಯಸುತ್ತೇವೆ. ಒಂದು ವೇಳೆ ಮುಚ್ಚಿದ ಲಕೋಟೆಯಲ್ಲಿನ ನಿಮ್ಮ ಸಲಹೆ ಸ್ವೀಕರಿಸಿದರೆ, ಅದರರ್ಥ ಇನ್ಯಾರಿಗೂ ಈ ಹೆಸರು ಗೊತ್ತಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ನವದೆಹಲಿ (ಫೆಬ್ರವರಿ 18, 2023): ಹೂಡಿಕೆದಾರರ ಹಿತರಕ್ಷಣೆಗಾಗಿ ರಚಿಸಲು ಉದ್ದೇಶಿಸಿರುವ ವಿಷಯ ತಜ್ಞರ ಸಮಿತಿಗೆ ಸಂಭವನೀಯ ಸದಸ್ಯರ ಪಟ್ಟಿಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡಿದ ಕೇಂದ್ರ ಸರ್ಕಾರದ ಕ್ರಮಕ್ಕೆ ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ ಹಾಗೂ ಪಟ್ಟಿ ತಿರಸ್ಕರಿಸಿದೆ. ‘ಮುಚ್ಚಿದ ಲಕೋಟೆಯಲ್ಲಿ ನೀಡಿದ ಸಲಹೆಯನ್ನು ನಾವು ಸ್ವೀಕರಿಸುವುದಿಲ್ಲ. ಏಕೆಂದರೆ ನಾವು ಪಾರದರ್ಶಕತೆಯನ್ನು ಖಚಿತಪಡಿಸಬಯಸುತ್ತೇವೆ. ಒಂದು ವೇಳೆ ಮುಚ್ಚಿದ ಲಕೋಟೆಯಲ್ಲಿನ ನಿಮ್ಮ ಸಲಹೆ ಸ್ವೀಕರಿಸಿದರೆ, ಅದರರ್ಥ ಇನ್ಯಾರಿಗೂ ಈ ಹೆಸರು ಗೊತ್ತಾಗುವುದಿಲ್ಲ. ಹೀಗಾಗಿ ಹೂಡಿಕೆದಾರರ ಸುರಕ್ಷತೆ ವಿಷಯದಲ್ಲಿ ನಾವು ಪೂರ್ಣ ಪಾರದರ್ಶಕತೆ ಬಯಸುತ್ತೇವೆ. ಹೀಗಾಗಿ ಈ ವಿಷಯದಲ್ಲಿ ನಾವೇ ಅಧ್ಯಯನ ನಡೆಸಿ ಒಂದು ಸಮಿತಿ ರಚಿಸಿ ಆದೇಶ ಹೊರಡಿಸುತ್ತೇವೆ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು. ಅಲ್ಲದೆ ಹಾಲಿ ಜಡ್ಜ್ ಇದಕ್ಕೆ ಸದಸ್ಯ ಆಗಿರುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಅದಾನಿ (Adani) ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಹೂಡಿಕೆದಾರರ (Investors) ಹಿತ ಕಾಪಾಡಲು ನಿವೃತ್ತ ನ್ಯಾಯಮೂರ್ತಿಗಳ (Retired Judges) ನೇತೃತ್ವದಲ್ಲಿ ವಿಷಯ ತಜ್ಞರ ಸಮಿತಿ ರಚಿಸುವಂತೆ ಫೆಬ್ರವರಿ 10ರಂದು ಕೇಂದ್ರ ಸರ್ಕಾರಕ್ಕೆ (Central Government) ಸುಪ್ರೀಂಕೋರ್ಟ್ (Supreme Court) ಸೂಚಿಸಿತ್ತು. ಅದರಂತೆ ಸದಸ್ಯರ ಪಟ್ಟಿಯನ್ನು ಕೇಂದ್ರ ಸರ್ಕಾರ ಶುಕ್ರವಾರ ಮುಚ್ಚಿದ ಲಕೋಟೆಯಲ್ಲಿ (Sealed Cover) ಸಲ್ಲಿಸಿತ್ತು.
ಇದನ್ನು ಓದಿ: ಷೇರುದಾರರ ಹಿತಕ್ಕೆ ಸಮಿತಿ ರಚನೆಗೆ ಸಿದ್ಧ: ಸುಪ್ರೀಂಕೋರ್ಟ್‌ಗೆ ಕೇಂದ್ರ
ಅದಾನಿ ಸಮೂಹ ಕಂಪನಿಗಳ ಷೇರು ಕುಸಿತದ ಬೆನ್ನಲ್ಲೇ, ಷೇರುಪೇಟೆ ಹೂಡಿಕೆದಾರರ ಹಿತ ಕಾಯಲು ಸಮಿತಿ ರಚನೆ ಮಾಡುವಂತೆ ಸುಪ್ರೀಂಕೋರ್ಟ ನೀಡಿದ್ದ ನಿರ್ದೇಶನಕ್ಕೆ ಸೋಮವಾರ ಪ್ರತಿಕ್ರಿಯಿಸಿದ್ದ ಕೇಂದ್ರ ಸರ್ಕಾರ ತಜ್ಞರ ಸಮಿತಿ ರಚನೆ ಮಾಡಲು ಸಿದ್ಧ ಎಂದು ಹೇಳಿತ್ತು. ಹಿಂಡನ್‌ಬರ್ಗ್ ವರದಿಯ ಕುರಿತಾಗಿ ಸುಪ್ರೀಂಕೋರ್ಟ್ ನಿವೃತ್ತ ಜಡ್ಜ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಬೇಕು, ಹಿಂಡನ್‌ಬರ್ಗ್ ಸಂಸ್ಥಾಪಕನ ವಿರುದ್ಧ ವಿಚಾರಣೆ ನಡೆಸಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾ.ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ಪೀಠದ ಎದುರು ಸರ್ಕಾರ ಈ ಮಾಹಿತಿ ನೀಡಿದೆ.
ಸರ್ಕಾರ ಹಾಗೂ ಸೆಬಿಯ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸಮಿತಿ ರಚನೆ ಮಾಡುವುದಕ್ಕೆ ಸರ್ಕಾರದಿಂದ ಯಾವುದೇ ಆಕ್ಷೇಪಗಳಿಲ್ಲ. ಆದರೆ ಸಮಿತಿಯ ತಜ್ಞರ ಹೆಸರನ್ನು ಮೊಹರು ಮಾಡಲಾದ ಕವರ್‌ನಲ್ಲಿ ನೀಡುತ್ತೇವೆ ಎಂದರು. ಬಂಡವಾಳ ಭಾರತದ ಒಳಗೆ ಮತ್ತು ಹೊರಗೆ ಮನಬಂದಂತೆ ಚಲಿಸುತ್ತಿದೆ. ಭವಿಷ್ಯದಲ್ಲಿ ಭಾರತೀಯ ಹೂಡಿಕೆದಾರರನ್ನು ರಕ್ಷಿಸಲಾಗಿದೆ ಎಂದು ಖಚಿತಪಡಿಸಲು ಬಲಿಷ್ಠ ನಿಯಂತ್ರಣ ಸಮಿತಿ ರಚಿಸಬೇಕು ಎಂದು ಸುಪ್ರೀಂಕೋರ್ಟ್, ಶುಕ್ರವಾರ ಸೆಬಿ ಹಾಗೂ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು.
ಇದನ್ನೂ ಓದಿ: ಅದಾನಿ ಕಂಪನೀಲಿ ವಿದೇಶಿ ಹೂಡಿಕೆ ಬಗ್ಗೆ ಸೆಬಿ ತನಿಖೆ; ಹೂಡಿಕೆದಾರರ ಹಿತ ಕಾಯಲು ತಜ್ಞರ ಸಮಿತಿ ರಚಿಸಿ ಎಂದ ಸುಪ್ರೀಂ