ನಟ ವಿಜಯ್ ತಮಿಳುನಾಡು ಗೆಲ್ಲೋದು ಪಕ್ಕ, 2025ರಲ್ಲಿ ಭವಿಷ್ಯ ನುಡಿದಿದ್ದ ಚಾಣಾಕ್ಷನ ವಿಡಿಯೋ, ನಂಬಿಕೆ ಇಲ್ಲದಿದ್ದರೆ ಈ ವಿಡಿಯೋವನ್ನು ಇಟ್ಟಿಕೊಳ್ಳಿ, ರಿಸಲ್ಟ್ ದಿನ ನೋಡಿ ಎಂದು ಸವಾಲು ಹಾಕಿದ್ದರು.
ನವದೆಹಲಿ (ಮೇ.04) ನಟ ವಿಜಯ್ ಟಿವಿಕೆ ಪಕ್ಷ ತಮಿಳುನಾಡಿನಲ್ಲಿ ಹೊಸ ರಾಜಕೀಯ ಸಂಚಲನ ಸೃಷ್ಟಿಸಿದೆ. ಸದ್ಯಕ್ಕೆ ಲಭ್ಯವಿರುವ ಫಲಿತಾಂಶದ ಪ್ರಕಾರ 105 ಸ್ಥಾನದಲ್ಲಿ ಟಿವಿಕೆ ಮುನ್ನಡೆ ಸಾಧಿಸಿದರೆ , ಅಧಿಕಾರದಲ್ಲಿದ್ದ ಡಿಎಂಕೆ 70 ಸ್ಥಾನಕ್ಕೆ ಕುಸಿದಿದೆ. ನಟ ವಿಜಯ್ ತಮಿಳುನಾಡಿನಲ್ಲಿ ಸರ್ಕಾರ ರಚಿಸುವ ತಯಾರಿಯಲ್ಲಿದ್ದಾರೆ. ನಟ ವಿಜಯ್ ಗೆಲುವನ್ನು ಎಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ನಿರೀಕ್ಷೆ ಮಾಡಿದ್ದರೆ, ಇತರ ಯಾವುದೇ ಸಮೀಕ್ಷೆಗಳು ಭವಿಷ್ಯ ನುಡಿದಿರಲಿಲ್ಲ. ಆದರೆ 2025ರಲ್ಲೇ ಚುನಾವಣಾ ಚಾಣಾಕ್ಷ ಎಂದೇ ಗುರುತಿಸಿಕೊಂಡಿರುವ ಪ್ರಶಾಂತ್ ಕಿಶೋರ್, ನಟ ವಿಜಯ್ ಅವರ ಟಿವಿಕೆ ಗೆಲುವಿನ ಭವಿಷ್ಯ ನುಡಿದಿದ್ದರು.
2025ರಲ್ಲಿ ಖಾಸಗಿ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಪ್ರಶಾಂತ್ ಕಿಶೋರ್ ಈ ಮಾತು ಹೇಳಿದ್ದರು. ಟಿವಿಕೆ ಪಕ್ಷ ಸ್ಥಾಪಿಸಿದ ಒಂದೇ ವರ್ಷಕ್ಕೆ ಪ್ರಶಾಂತ್ ಕಿಶೋರ್ ಈ ಭವಿಷ್ಯ ನುಡಿದಿದ್ದರು. ಸಂದರ್ಶನದಲ್ಲಿ ಪ್ರಶಾಂತ್ ಕಿಶೋರ್, ನಟ ವಿಜಯ್ ಏಕಾಂಗಿಯಾಗಿ ಹೋರಾಡುವ ಇರಾದೆಯಲ್ಲಿದ್ದಾರೆ. ಈ ನಿರ್ಧಾರವನ್ನು ವಿಜಯ್ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ನಟ ವಿಜಯ್ ಏಕಾಂಗಿಯಾಗಿ ಚುನಾವಣೆ ಎದುರಿಸಿದರೆ ತಮಿಳುನಾಡು ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದರು.
ಇದೇ ವೇಳೆ ಸಂದರ್ಶನಕಾರರು, ಅಂದರೆ ಟಿವಿಕೆ ಪಕ್ಷ ತಮಿಳುನಾಡಿನಲ್ಲಿ 118 ಸ್ಥಾನ ಗೆದ್ದು ಸರ್ಕಾರ ರಚಿಸಲಿದೆ ಎಂದು ನೀವು ಹೇಳುತ್ತಿದ್ದಾರಾ ಎಂದಾಗ, ನನ್ನ ಮಾತಿನ ಮೇಲೆ ನಂಬಿಕೆ ಇಲ್ಲದಿದ್ದರೆ, ನೀವು ಇದೇ ವಿಡಿಯೋವನ್ನು ಸೇವ್ ಮಾಡಿ ಇಟ್ಟುಕೊಳ್ಳಿ, ಫಲಿತಾಂಶ ದಿನ ನೋಡಿ ಎಂದು ಪ್ರಶಾಂತ್ ಕಿಶೋರ್ ಸವಾಲು ಹಾಕಿದ್ದರು. ಇದೀಗ ಪ್ರಶಾಂಕ್ ಕಿಶೋರ್ ಹೇಳಿದಂತೆ ವಿಜಯ್ ಯಾವುದೇ ಮೈತ್ರಿ ಮಾಡಿಕೊಳ್ಳದೇ ಏಕಾಂಗಿಯಾಗಿ ಚುನಾವಣೆ ಎದುರಿಸಿ 105 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ವಿಜಯ್ ಅಭಿಮಾನಿಯಿಂದ ದುರಂತ ನಡೆ
ತಮಿಳುನಾಡು ರಾಜಕೀಯದಲ್ಲಿ ಹೊಸ ಬಿರುಗಾಳಿ ಎದ್ದಿದೆ. ಹೊಸದಾಗಿ ಆರಂಭಿಸಿದ ನಟ ವಿಜಯ್ ಜೊಸೆಫ್ ನೇತೃತ್ವದ ಟಿವಿಕೆ ಪಕ್ಷ ತಮಿಳುನಾಡಿನಲ್ಲಿ ಭರ್ಜರಿ ಮುನ್ನಡೆಯೊಂದಿಗೆ ಅಧಿಕಾರದತ್ತ ಮುನ್ನುಗ್ಗಿದೆ. ಡಿಎಂಕೆ ಹಾಗೂ ಎಐಡಿಎಂಕೆ ಪಕ್ಷ 60 ಸ್ಥಾನದಲ್ಲಿ ಮುನ್ನಡೆ ಪಡೆದಿದ್ದರೆ, ಟಿವಿಕೆ ಪಕ್ಷ ಈಗಾಗಲೇ 110 ಸ್ಥಾನದಲ್ಲಿ ಮುನ್ನಡೆ ಪಡೆದುಕೊಂಡಿದೆ. ನಟ ವಿಜಯ್ ತಮಿಳುನಾಡಿನ ಹೊಸ ಮುಖ್ಯಮಂತ್ರಿಯಾಗುವ ದಿನ ದೂರವಿಲ್ಲ. ಇದರ ನಡುವೆ ಪಕ್ಷ ಭಾರಿ ಮುನ್ನಡೆ ಸಾಧಿಸುತ್ತಿದ್ದರೆ, ಇತ್ತ ವಿಜಯ್ ಅಭಿಮಾನಿ ಬದುಕು ಅಂತ್ಯಗೊಳಿಸಲು ಯತ್ನಿಸಿದ ಘಟನೆ ನಡೆದಿದೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ 28 ವರ್ಷದ ಅಭಿಮಾನಿ ಕೆ ಮಹೇಂದ್ರನ್ ಬದುಕು ಅೆಂತ್ಯಗೊಳಿಸಲು ಯತ್ನಿಸಿ ಆಸ್ಪತ್ರೆ ದಾಖಲಾಗಿದ್ದಾನೆ. ತಮಿಳುನಾಡಿನಲ್ಲಿ ಮತ ಎಣಿಕೆ ಆರಂಭಗೊಂಡ ಕೆಲ ಹೊತ್ತಿನ ಬಳಿಕ ಸುದ್ದಿಗಳು ಹರಿದಾಡಿತ್ತು. ಡಿಎಂಕೆ ಮತ್ತೆ ಮುನ್ನಡೆ ಸಾಧಿಸಿದೆ ಎಂಬ ಮಾಹಿತಿ ಬಂದಿತ್ತು. ಇದೇ ವೇಳೆ ವಿಜಯ್ ನೇತೃತ್ವದ ಟಿವಿಕೆ ಭಾರಿ ಹಿನ್ನಡೆ ಕಂಡಿದೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿತ್ತು.ಕೆಲವು ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿ ಟಿವಿಕೆ ಸೋಲು ಕಂಡಿದೆ ಎಂದಿತ್ತು. ಈ ಸುದ್ದಿ ಹಬ್ಬಿದ ಬೆನ್ನಲ್ಲೇ ಟಿವಿಕೆ ಅಭಿಮಾನಿ ಕೆ ಮಹೇಂದ್ರ ಬದುಕು ಅಂತ್ಯಗೊಳಿಸಲು ಯತ್ನಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.


