ಗೆಲುವಿನ ವಿಶ್ವಾಸದಲ್ಲಿರುವ ನಟ ವಿಜಯ್‌ಗೆ ಫಲಿತಾಂಶಕ್ಕೂ ಮೊದಲೇ ಶಾಕ್, ಪಕ್ಷದ ಕಚೇರಿಗೆ ಬೆಂಕಿ, ಮತ ಎಣಿಕಿಗೆ ಕೇವಲ ಮೂರು ದಿನ ಮಾತ್ರ ಬಾಕಿ. ಕೆಲ ಸಮೀಕ್ಷೆಗಳು ವಿಜಯ್ ಪಕ್ಷ ಅಧಿಕಾರಕ್ಕೆ ಬರವು ಸೂಚನೆ ನೀಡಿದ ಬೆನ್ನಲ್ಲೇ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.

ತಿರುಚ್ಚಿ (ಮೇ.01) ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ನಟ ವಿಜಯ್ ಜೊಸೆಫ್ ಚುನಾವಣೋತ್ತರ ಸಮೀಕ್ಷೆ ಬಳಿಕ ಆತ್ಮವಿಶ್ವಾಸ ಹೆಚ್ಚಾಗಿದೆ. ಎಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯಲ್ಲಿ ನಟ ವಿಜಯ್ ಜೊಸೆಫ್ ಅವರ ಟಿವಿಕೆ ಪಕ್ಷ ಅತೀ ಹೆಚ್ಚು ಸ್ಥಾನ ಪಡೆದು ಸರ್ಕಾರ ರಚಿಸುವ ಸಾಧ್ಯತೆಯನ್ನು ಹೇಳಿದೆ. ಮೇ ನಾಲ್ಕರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಫಲಿತಾಂಶ ಘೋಷಣೆಗೆ ಕೆಲ ದಿನ ಇರುವಾಗಲೇ ನಟ ವಿಜಯ್ ಹಾಗೂ ಟಿವಿಕೆ ಪಕ್ಷಕ್ಕೆ ಆಘಾತವಾಗಿದೆ. ಟಿವಿಕೆ ಪಕ್ಷದ ಚುನಾವಣಾ ಕಚೇರಿಗೆ ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ.

ಪೊಲೀಸರಿಗೆ ದೂರು ನೀಡಿದ ಟಿವಿಕೆ ಪಕ್ಷ

ಶ್ರೀರಂಗಂ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಪೆಟ್ಟವೈತ್ತಲೈ ಎಂಬಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಟಿವಿಕೆ ಅಭ್ಯರ್ಥಿ ರಮೇಶ್ ಅವರ ಕಚೇರಿಯನ್ನು ಗುರಿಯಾಗಿಸಿ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಕಚೇರಿಯಲ್ಲಿದ್ದ ಎಲ್ಲಾ ಬ್ಯಾನರ್‌ಗಳನ್ನು ಹರಿದು ಹಾಕಿದ್ದಾರೆ. ಈ ಘಟನೆ ಸಂಬಂಧ ಟಿವಿಕೆ ಯೂನಿಯನ್ ಕಾರ್ಯದರ್ಶಿ ಪೊಲೀಸರಿಗೆ ದೂರು ನೀಡಿದ್ದಾರೆ.

ಶಾಂತಿಯುತವಾಗಿ ಮತ ಎಣಿಕೆ ನಡೆಯಲು ಸಾಧ್ಯವೆ?

ಶುಕ್ರವಾರ ಬೆಳಗ್ಗೆ ದುಷ್ಕರ್ಮಿಗಳು ಕಚೇರಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪಕ್ಷದ ಅಭ್ಯರ್ಥಿ ರಮೇಶ್ ಹೇಳಿದ್ದಾರೆ. "ಎಲ್ಲಾ ಬ್ಯಾನರ್‌ಗಳನ್ನು ಹರಿದು ಹಾಕಿದ್ದಾರೆ. ಹೀಗಾದರೆ, ಶ್ರೀರಂಗಂ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯನ್ನು ಶಾಂತಿಯುತ ವಾತಾವರಣದಲ್ಲಿ ನಡೆಸಲು ಸಾಧ್ಯವೇ?" ಎಂದು ಅವರು ಪ್ರಶ್ನಿಸಿದ್ದಾರೆ.

ತಮಿಳುನಾಡಿನಲ್ಲಿ ತೀವ್ರ ಜಿದ್ದಾಜಿದ್ದಿ

ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಇನ್ನು ಕೇವಲ ಮೂರು ದಿನಗಳು ಬಾಕಿ ಇರುವಾಗಲೇ ಈ ಹಿಂಸಾಚಾರದ ಘಟನೆ ವರದಿಯಾಗಿದೆ. ಇತ್ತೀಚೆಗೆ ಪ್ರಕಟವಾದ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಡಿಎಂಕೆ ಪಕ್ಷಕ್ಕೆ ಮುನ್ನಡೆ ಸಿಗಲಿದೆ ಎಂದು ಭವಿಷ್ಯ ನುಡಿದಿವೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಮೈತ್ರಿಕೂಟವು ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಪೀಪಲ್ಸ್ ಪಲ್ಸ್, ಚಾಣಕ್ಯದಂತಹ ಸಂಸ್ಥೆಗಳು ಡಿಎಂಕೆ ಗೆಲುವನ್ನು ಸೂಚಿಸಿದರೆ, ಜೆವಿಸಿ ಟೈಮ್ಸ್ ನೌ ಸಮೀಕ್ಷೆಯು ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟ ಅಚ್ಚರಿಯ ಜಯ ಸಾಧಿಸಲಿದೆ ಎಂದು ಹೇಳಿದೆ. ಆದರೆ, ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯಲ್ಲಿ ಟಿವಿಕೆಗೆ ಮುನ್ನಡೆ ಸಿಗಲಿದೆ ಎಂದು ವರದಿಯಾಗಿದೆ.

ಟಿವಿಕೆ ಹೊಸ ಸಂಚಲನ

ಇದೇ ವೇಳೆ, ಎಐಎಡಿಎಂಕೆ ಮತ್ತು ಟಿವಿಕೆ ಪಕ್ಷಗಳು ಈ ಚುನಾವಣೋತ್ತರ ಸಮೀಕ್ಷೆಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿವೆ. 150 ಸ್ಥಾನಗಳಲ್ಲಿ ಗೆದ್ದು ಅಧಿಕಾರ ಹಿಡಿಯುತ್ತೇವೆ ಎಂದು ಎಐಎಡಿಎಂಕೆ ವಿಶ್ವಾಸ ವ್ಯಕ್ತಪಡಿಸಿದೆ. ತಮಗೆ ಪೂರಕವಾದ ಫಲಿತಾಂಶ ಬರಲಿದೆ ಎಂದು ಟಿವಿಕೆ ನಾಯಕತ್ವವೂ ಭರವಸೆ ಇಟ್ಟುಕೊಂಡಿದೆ. ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಉಳಿಸಿಕೊಳ್ಳುತ್ತೇವೆ ಎಂದು ಡಿಎಂಕೆ ಪ್ರತಿಕ್ರಿಯಿಸಿದೆ. ತಮಿಳುನಾಡಿನ 234 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶೇ. 84ಕ್ಕಿಂತ ಹೆಚ್ಚು ಮತದಾನವಾಗಿತ್ತು. ಮೇ 4 ರಂದು ಮತ ಎಣಿಕೆ ನಡೆಯಲಿದೆ.