ನಮ್ಮ ಕೆಲಸ ಅಲ್ಲ ಎಂದ ಎರಡು ರಾಜ್ಯಗಳು: 4 ಗಂಟೆ ಕಾಲ ರಸ್ತೆಯಲ್ಲೇ ಇತ್ತು ಅಪಘಾತ ಸಂತ್ರಸ್ತನ ಶವ
ಎರಡು ರಾಜ್ಯಗಳ ಗಡಿ ವಿವಾದದಿಂದಾಗಿ ಅಪಘಾತದಲ್ಲಿ ಮೃತಪಟ್ಟ ಯುವಕನ ಶವ 4 ಗಂಟೆಗಳ ಕಾಲ ರಸ್ತೆಯಲ್ಲೇ ಬಿದ್ದಿದ್ದಂತಹ ಅಮಾನವೀಯ ಘಟನೆ ನಡೆದಿದೆ.
ನಮ್ಮ ಕೆಲಸ ಅಲ್ಲ ಎಂದ ಎರಡು ರಾಜ್ಯಗಳು: 4 ಗಂಟೆ ಕಾಲ ರಸ್ತೆಯಲ್ಲೇ ಇತ್ತು ಅಪಘಾತ ಸಂತ್ರಸ್ತನ ಶವ
ನಮ್ಮ ದೇಶದಲ್ಲಿ ಹಲವು ರಾಜ್ಯಗಳಿದ್ದು, ಹಲವು ರಾಜ್ಯಗಳು ಪರಸ್ಪರ ಗಡಿಯನ್ನು ಹಂಚಿಕೊಂಡಿರುತ್ತವೆ. ಇಂತಹ ಸ್ಥಳದಲ್ಲಿ ಏನಾದರೂ ಅನಾಹುತವಾದರೆ ವ್ಯಾಪ್ತಿ ನೋಡಿಕೊಂಡು ಎರಡೂ ರಾಜ್ಯಗಳು ಸ್ಪಂದಿಸುತ್ತವೆ. ಆದರೆ ಅಪಘಾತಗಳಾದಂತಹ ಸಂದರ್ಭದಲ್ಲಿ ಯಾರೂ ಕೂಡ ಇಂತಹ ರಾಜಕೀಯ ಆಡಳಿತ ಕಾರಣವನ್ನು ನೋಡದೇ ಸೀದಾ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸುವುದು ಮಾನವೀಯ ಕರ್ತವ್ಯವಾಗಿದೆ. ಅಪಘಾತದ ನಂತರ ಮೊದಲ 1 ಗಂಟೆ ವೈದ್ಯಕೀಯ ಭಾಷೆಯಲ್ಲಿ ಗೋಲ್ಡನ್ ಅವರ್ ಎನಿಸಿದ್ದು, ಇದು ರೋಗಿಯನ್ನು ಬದುಕಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅಳಿವು ಉಳಿವು ಈ ಸಮಯದಲ್ಲಿ ನಿಂತಿರುತ್ತದೆ. ಆದರೆ ಎರಡು ರಾಜ್ಯಗಳ ಬಾರ್ಡರ್‌ನಲ್ಲಿ ನಡೆದ ಅಪಘಾತವೊಂದರಲ್ಲಿ ಮೃತರಾದ ವ್ಯಕ್ತಿಯೊಬ್ಬರ ಶವವನ್ನು ಆಸ್ಪತ್ರೆಗೆ ದಾಖಲಿಸಲು ಅಥವಾ ಸ್ಥಳಾಂತರಿಸಲು ಎರಡು ರಾಜ್ಯಗಳ ಸ್ಥಳೀಯಾಡಳಿತ ರಾಜಕೀಯ ಮಾಡಿದ್ದರಿಂದ ಅಪಘಾತದಲ್ಲಿ ಮೃತರಾದ ವ್ಯಕ್ತಿಯ ಶವವನ್ನು ಮೇಲೆತ್ತದೇ 4 ಗಂಟೆಗಳ ಕಾಲ ರಸ್ತೆಯಲ್ಲೇ ಬಿಟ್ಟಂತಹ ಅಮಾನವೀಯ ಘಟನೆ ಮಧ್ಯ ಪ್ರದೇಶ ಹಾಗೂ ಉತ್ತರ ಪ್ರದೇಶ ಗಡಿ ಭಾಗದಲ್ಲಿ ನಡೆದಿದೆ.
27 ವರ್ಷದ ಯುವಕ ರಾಹುಲ್ ಅಹಿರ್ವರ್ ಅಪಘಾತದಲ್ಲಿ ಮೃತರಾದ ವ್ಯಕ್ತಿ. ಇವರು ದೆಹಲಿಗೆ ತೆರಳುವುದಕ್ಕಾಗಿ ಮನೆಯಿಂದ ಹೊರಟು ಬಂದಿದ್ದರು. ಈ ವೇಳೆ ರಸ್ತೆ ದಾಟುತ್ತಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಹೊರಟು ಹೋಗಿತ್ತು. ಈ ವೇಳೆ ಆ ಪ್ರದೇಶದಲ್ಲಿದ್ದ ಜನ ಮೊದಲಿಗೆ ಮಧ್ಯಪ್ರದೇಶದ ಹರ್‌ಪಲ್‌ಪುರದ ಪೊಲೀಸ್ ಠಾಣೆಗೆ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಇದು ಉತ್ತರ ಪ್ರದೇಶದ ಮಹೋಬ್‌ಕಾಂತ್ ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರುತ್ತದೆ ಎಂಬ ಮಾಹಿತಿ ನೀಡಿ ಶವವನ್ನು ಮೇಲೆತ್ತದೆ ಹೊರಟು ಹೋಗಿದ್ದಾರೆ.
ಇದಾದ ನಂತರ ಗ್ರಾಮಸ್ಥರು ಉತ್ತರ ಪ್ರದೇಶದ ಪೊಲೀಸ್ ಠಾಣೆಯೊಂದಕ್ಕೆ ಮಾಹಿತಿ ನೀಡಿದ್ದಾರೆ. ಅವರು ಕೂಡ ಕರ್ತವ್ಯದಿಂದ ಜಾರಿಕೊಂಡಿದ್ದು, ಇದು ಮಧ್ಯಪ್ರದೇಶದ ಪೊಲೀಸರ ವ್ಯಾಪ್ತಿಗೆ ಸೇರುತ್ತದೆ ಎಂದು ಸ್ಥಳಕ್ಕೆ ಬರಲು ನಿರಾಕರಿಸಿದ್ದಾರೆ. ಇದರಿಂದ ಕುಪಿತಗೊಂಡ ಸ್ಥಳೀಯ ನಿವಾಸಿಗಳು ಅಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಶುರು ಮಾಡಿದ್ದಾರೆ. ಇದಾಗಿ ಸುಮಾರು 4 ಗಂಟೆಗಳ ನಂತರ ಮಧ್ಯಪ್ರದೇಶ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇದಾದ ನಂತರವೇ ಗ್ರಾಮಸ್ಥರು ಪ್ರತಿಭಟನೆ ನಿಲ್ಲಿಸಿ ರಸ್ತೆ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಘಟನಾ ಸ್ಥಳದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೃತ ಯುವಕನ ಕುಟುಂಬದವರು ಶವದ ಮುಂದೆ ಅಳುತ್ತಿರುವುದನ್ನು ತೋರಿಸುತ್ತಿವೆ. ಈ ಬಗ್ಗೆ ಸಂಬಂಧಿಕರೊಬ್ಬರು ಪ್ರತಿಕ್ರಿಯಿಸಿದ್ದು, ನನ್ನ ಸೋದರಸಂಬಂಧಿ ಅಪಘಾತದಿಂದ ನಿಧನರಾದರು, ಈ ಪ್ರದೇಶವು ಮಧ್ಯಪ್ರದೇಶದ ವ್ಯಾಪ್ತಿಗೆ ಬರುತ್ತದೆ, ಆದರೆ ಯಾರೂ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಿಲ್ಲದ ಕಾರಣ ದೇಹವು ಈಗ ಗಂಟೆಗಳ ಕಾಲ ರಸ್ತೆಯ ಮೇಲೆಯೇ ಬಿದ್ದಿದೆ. ಸ್ಥಳಕ್ಕೆ ಬಂದ ಮಧ್ಯಪ್ರದೇಶದ ಪೋಲೀಸರೊಬ್ಬರು ನಮ್ಮನ್ನೇ ನಿಂದಿಸಿದರು ಮತ್ತು ಇದುನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು. ಶವಪರೀಕ್ಷೆಯನ್ನು ಆದಷ್ಟು ಬೇಗ ಮಾಡಬೇಕೆಂದು ನಾವು ಬಯಸುತ್ತೇವೆ, ಜೊತೆಗೆ ಈ ಅಪಘಾತಕ್ಕೆ ಕಾರಣವಾದ ವಾಹನವನ್ನು ಗುರುತಿಸಬೇಕೆಂದು ನಾವು ಬಯಸುತ್ತೇವೆ ಎಂದು ಹೇಳಿದರು. ಮೃತ ರಾಹುಲ್ ಇತ್ತೀಚೆಗಷ್ಟೇ ಮದುವೆಯಾಗಿದ್ದು, ಕೆಲಸ ಅರಸಿ ದೆಹಲಿಗೆ ಹೊರಟಿದ್ದರು. ನಿನ್ನೆ ಸಂಜೆ 7 ಗಂಟೆಗೆ ಅಪಘಾತವಾಗಿದ್ದರೆ ರಾತ್ರಿ 11 ಗಂಟೆಗೆ ರಸ್ತೆಯಿಂದ ಶವವನ್ನು ಮೇಲೆತ್ತಲಾಗಿತ್ತು.