ನೀಟ್‌ ಪತ್ರಿಕೆ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ತಮ್ಮ ಹಾಗೂ ತಾಯಿಯ ವಿರುದ್ಧ ಅಸಭ್ಯ ಘೋಷಣೆ ಕೂಗಿದ ಯುವತಿಯ ವಿರುದ್ಧ ಪ್ರಧಾನಿ ಮೋದಿ ಉದಾರತೆ ತೋರಿದ್ದಾರೆ. ಶಿಕ್ಷೆಯ ಬದಲು ದಾರಿ ತಪ್ಪಿದ ಯುವಕರಿಗೆ ಸನ್ಮಾರ್ಗ ತೋರಬೇಕು ಎಂದು ಹೇಳಿದ್ದಾರೆ.

ನವದೆಹಲಿ (ಜು.31): ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ನಡೆಸಿದ ಪ್ರತಿಭಟನೆ ವೇಳೆ ತಮ್ಮ ಹಾಗೂ ತಾಯಿಯ ವಿರುದ್ಧ ಅಸಭ್ಯ ಮತ್ತು ನಿಂದನೀಯ ಪದಗಳನ್ನು ಬಳಸಿ ಘೋಷಣೆ ಕೂಗಿದ ಯುವಕರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಉದಾರತೆ ತೋರಿದ್ದಾರೆ. "ನಿಂದನೆಯಿಂದ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ" ಎಂದು ಹೇಳಿರುವ ಪ್ರಧಾನಿ, ದಾರಿ ತಪ್ಪಿದ ಯುವಕರನ್ನು ಶಿಕ್ಷಿಸುವ ಬದಲು ಸನ್ಮಾರ್ಗಕ್ಕೆ ತರಬೇಕು ಮತ್ತು ತಾವು ಅವರನ್ನು ಕ್ಷಮಿಸಲು ಬಯಸುವುದಾಗಿ ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ 25 ವರ್ಷದ ಯುವತಿ ರುಚಿಕಾ ಸಿಂಗ್‌ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ಶುಕ್ರವಾರ ವೀಡಿಯೊ ಸಂದೇಶವೊಂದನ್ನು ಬಿಡುಗಡೆ ಮಾಡಿ, ಈ ವಿಚಾರದಲ್ಲಿ ಸಂಯಮ ಕಾಯ್ದುಕೊಳ್ಳುವಂತೆ ಹಾಗೂ ಆಕೆಯನ್ನು ಕ್ಷಮಿಸುವಂತೆ ಕರೆ ನೀಡಿದ್ದಾರೆ.

'ನನ್ನನ್ನು ಮತ್ತು ನನ್ನ ದಿವಂಗತ ತಾಯಿಯನ್ನು ನಿಂದಿಸಲಾಗಿದೆ'

ಘಟನೆಯ ಕುರಿತು ವೀಡಿಯೊ ಸಂದೇಶದಲ್ಲಿ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಜಂತರ್ ಮಂತರ್‌ನಲ್ಲಿ ಏನು ನಡೆದಿದೆ ಎಂಬುದನ್ನು ದೇಶ ಮತ್ತು ಜಗತ್ತು ನೋಡಿದೆ. ದಾರಿ ತಪ್ಪಿದ ಕೆಲವು ಯುವಕರು ನಾಗರಿಕ ಸಮಾಜದಲ್ಲಿ ಬಳಸಬಾರದಂತಹ ಭಾಷೆಯನ್ನು ಬಳಸಿದ್ದಾರೆ. ನನ್ನನ್ನು ನಿಂದಿಸಲಾಗಿದೆ, ಮತ್ತು ನನ್ನ ದಿವಂಗತ ತಾಯಿಯನ್ನೂ ನಿಂದಿಸಲಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಪ್ರಧಾನಿ ವಿರುದ್ಧ ಬಳಸಲಾದ ಅಸಭ್ಯ ಪದಗಳು ಕಾನೂನು ಕ್ರಮಕ್ಕೆ ಕಾರಣವಾಗಿದ್ದವು. ಜುಲೈ 23 ರಂದು ಜಂತರ್ ಮಂತರ್‌ನಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ 25 ವರ್ಷದ ಯುವತಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾಳೆ ಎಂಬ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.

ಶಿಕ್ಷೆ ಮತ್ತು ಕೋಪದಿಂದ ಪರಿಹಾರ ಸಿಗೋದಿಲ್ಲ

ಇಂತಹ ನಿಂದನೆಗಳ ಹೊರತಾಗಿಯೂ, ಕೋಪ ಅಥವಾ ಸೇಡಿನಿಂದ ಯಾವುದೇ ಪರಿಹಾರ ಸಿಗುವುದಿಲ್ಲ ಎಂದು ಪ್ರಧಾನಿ ಮೋದಿ ಬಲವಾಗಿ ಹೇಳಿದ್ದಾರೆ. ಬದಲಾಗಿ, ಈ ಯುವಕರು ತಮ್ಮ ತಪ್ಪುಗಳಿಂದ ಕಲಿಯುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ. 'ನಿಂದನೆಗಳು ಯಾವುದಕ್ಕೂ ಪರಿಹಾರವಲ್ಲ. ದಾರಿ ತಪ್ಪಿದವರಿಗೆ ದಾರಿ ತೋರಿಸೋಣ. ಒಟ್ಟಾಗಿ ಕೆಲಸ ಮಾಡೋಣ, ಭಾರತಕ್ಕಾಗಿ ಕೆಲಸ ಮಾಡೋಣ" ಎಂದು ಪ್ರಧಾನಿ ತಮ್ಮ ವೀಡಿಯೊದ ಶೀರ್ಷಿಕೆಯಲ್ಲಿ (Caption) ಬರೆದುಕೊಂಡಿದ್ದಾರೆ.

ಬಾಲ್ಯ ತಪ್ಪುಗಳು ನಡೆಯುತ್ತವೆ, ಮತ್ತು ಆ ತಪ್ಪುಗಳನ್ನು ತಿದ್ದಿಕೊಳ್ಳುವ ಅವಕಾಶವನ್ನು ಯೌವನವೇ ನೀಡುತ್ತದೆ. ಯುವಕರಾಗಿರುವುದರ ಅರ್ಥವೇ ಅದು. ಸಮಾಜದಲ್ಲಿ ಆಕ್ರೋಶವಿದೆ, ಅದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ಈಗ ಈ ಮಕ್ಕಳನ್ನು ಅಪ್ಪಿಕೊಂಡು ಅವರಿಗೆ ಸರಿಯಾದ ದಾರಿಯನ್ನು ತೋರಿಸುವ ಸಮಯ ಇದು. ಅವರು ದಾರಿ ತಪ್ಪಿದ ಮಕ್ಕಳು. ಅವರಿಗೆ ಸರಿಯಾದ ಹಾದಿ ತೋರಿಸುವುದು ನಮ್ಮ ಕರ್ತವ್ಯ. ಅವರನ್ನು ಶಿಕ್ಷಿಸುವುದು, ನ್ಯಾಯಾಲಯಗಳಿಗೆ ಎಳೆಯುವುದು ಮತ್ತು ಕಿರುಕುಳ ನೀಡುವುದರಿಂದ ಪರಿಸ್ಥಿತಿ ಬದಲಾಗುವುದಿಲ್ಲ ಎಂದಿದ್ದಾರೆ.

ತಮ್ಮನ್ನು ನಿಂದಿಸಿದವರನ್ನು ಕ್ಷಮಿಸಲು ಸಿದ್ಧರಿರುವುದಾಗಿ ತಿಳಿಸಿದ ಪ್ರಧಾನಿ, ನಾನು ಅವರನ್ನು ಕ್ಷಮಿಸಲು ಬಯಸುತ್ತೇನೆ. ಸಮಾಜವೂ ನನ್ನ ಮಾತನ್ನು ಸ್ವೀಕರಿಸಬೇಕೆಂದು ವಿನಂತಿಸುತ್ತೇನೆ. ದಾರಿ ತಪ್ಪಿದವರಿಗೆ ಮಾರ್ಗದರ್ಶನ ನೀಡೋಣ ಎಂದು ಮನವಿ ಮಾಡಿದ್ದಾರೆ.

ಎಫ್‌ಐಆರ್ ದಾಖಲು ಮತ್ತು ವಿಪಕ್ಷಗಳ ಪ್ರತಿಕ್ರಿಯೆ

ಶಾಂತಿ ಭಂಗ ಉಂಟುಮಾಡುವುದು, ಸಾರ್ವಜನಿಕ ಅಶಾಂತಿಗೆ ಪ್ರಚೋದನೆ ನೀಡುವುದು ಮತ್ತು ಮಾನನಷ್ಟ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 352, 353(1) ಮತ್ತು 356(1) ರ ಅಡಿಯಲ್ಲಿ ನೋಯ್ಡಾದ ಎಕ್ಸ್‌ಪ್ರೆಸ್‌ವೇ ಪೊಲೀಸ್ ಠಠಣೆಯಲ್ಲಿ 'ಝೀರೋ ಎಫ್‌ಐಆರ್' (Zero FIR) ದಾಖಲಿಸಲಾಗಿದೆ. ಘಟನೆ ನಡೆದ ವ್ಯಾಪ್ತಿಯ ಹೊರಗೆ ಈ ಎಫ್‌ಐಆರ್ ದಾಖಲಾಗಿದ್ದರಿಂದ, ಹೆಚ್ಚಿನ ತನಿಖೆಗಾಗಿ ಇದನ್ನು ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕಾಕ್ರೋಚ್ ಜನತಾ ಪಾರ್ಟಿಯ ವಕ್ತಾರ ಸೌರವ್ ದಾಸ್, ಬಳಸಿದ ಭಾಷೆ ಆಕ್ಷೇಪಾರ್ಹವಾಗಿರಬಹುದು. ಆದರೆ ಯುವಕರ ಮಾತುಗಳಿಗಾಗಿ ಪ್ರತಿಭಟನಾಕಾರರ ವಿರುದ್ಧ ಕ್ರಿಮಿನಲ್ ಕಾಯ್ದೆಯನ್ನು ಬಳಸುವುದು ಸರಿಯಲ್ಲ. ಯಾವುದೇ ನಿಂದನೀಯ ಭಾಷೆ ಬಳಸಿದ್ದರೆ, ಸಂಬಂಧಪಟ್ಟ ವ್ಯಕ್ತಿಯು ಸಿವಿಲ್ ಅಥವಾ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲು ಸ್ವತಂತ್ರರಾಗಿದ್ದಾರೆ. ಆದರೆ ಪ್ರತಿಭಟನಾಕಾರರನ್ನು ಹತೋಟಿಗೆ ತರಲು ಕ್ರಿಮಿನಲ್ ಕಾನೂನು ಬಳಸುವುದು ಖಂಡನೀಯ ಎಂದಿದ್ದರು.

View post on Instagram