* ಬಿಜೆಪಿ ಬಗ್ಗೆ ಆಮ್‌ಆದ್ಮಿ ಸಮೀಕ್ಷೆ* ಬಿಜೆಪಿ ಗೂಂಡಾ ಪಕ್ಷ ಹೌದೋ, ಅಲ್ಲವೋ ಎಂದು ಪ್ರಶ್ನೆ!* ಕರೆ, ಮಿಸ್ಡ್‌ ಕಾಲ, ಜಾಲತಾಣಗಳ ಮೂಲಕ ಸಮೀಕ್ಷೆ

ನವದೆಹಲಿ(ಏ.22): ರಾಜಕೀಯ ಪಕ್ಷಗಳು ತಮ್ಮ ಬಗ್ಗೆ ಜನರ ಅಭಿಪ್ರಾಯ ಏನಿದೆ ಎಂದು ತಿಳಿಯಲು ಜನರ ಅಭಿಪ್ರಾಯ ಸಂಗ್ರಹಿಸುವುದು ಸಾಮಾನ್ಯ. ಆದರೆ ಆಮ್‌ಆದ್ಮಿ ಪಕ್ಷ ಇದೀಗ ತನ್ನ ಹಾಗೂ ಬಿಜೆಪಿ ಬಗ್ಗೆ ಜನರ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ. ಇಂಥದ್ದೊಂದು ದೇಶವ್ಯಾಪಿ ಸಮೀಕ್ಷೆಗೆ ಗುರುವಾರ ಅದು ಚಾಲನೆ ನೀಡಿದೆ.

ಪಕ್ಷದ ಕೇಂದ್ರ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಪ್‌ ನಾಯಕಿ ಅತೀಶಿ, ‘ದೇಶಕ್ಕೆ ಕೇವಲ ಎರಡೇ ಆಯ್ಕೆ ಉಳಿದಿವೆæ’ ಎಂದು ಸಮೀಕ್ಷೆ ನಡೆಸಲಾಗುತ್ತದೆ. ಕರೆಗಳು, ಮಿಸ್ಡ್‌ ಕಾಲ್‌ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಬಿಜೆಪಿ ಮತ್ತು ಎಎಪಿ ಬಗ್ಗೆ ದೇಶಾದ್ಯಂತ ಜನರ ಅಭಿಪ್ರಾಯವನ್ನು ಸಂಗ್ರಹ ಮಾಡಲಾಗುತ್ತದೆ ಎಂದು ತಿಳಿಸಿದರು. ಹಾಗೆಯೇ, ಜನರಿಗೆ ಕೇವಲ ಎರಡು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದಕ್ಕೆ ಹೌದು ಅಥವಾ ಇಲ್ಲ ಎಂಬ ಉತ್ತರ ನೀಡಬಹುದು. ಮೊದಲನೇ ಪ್ರಶ್ನೆ- ಬಿಜೆಪಿ ಹಿಂಸಾಚಾರ, ಗಲಭೆ ಸೃಷ್ಟಿಯುವ ಗೂಂಡಾ ಪಕ್ಷ ಎಂದು ನಂಬುತ್ತೀರಾ? ಎಂಬುದು, ಎರಡನೇ ಪ್ರಶ್ನೆ- ಶಾಲೆ, ಆಸ್ಪತ್ರೆ, ಉಚಿತ ವಿದ್ಯುತ್‌ ನೀಡುವ ಎಎಪಿ ಕುರಿತಾಗಿರುತ್ತದೆ ಎಂದು ತಿಳಿಸಿದ್ದಾರೆ.

ಪಂಜಾಬಿನಲ್ಲಿ ಅಭೂತಪೂರ್ವ ಜಯ ಗಳಿಸಿ ಅಧಿಕಾರಕ್ಕೆ ಬಂದಿರುವ ಆಮ್‌ ಆದ್ಮಿ ಪಕ್ಷ ಗುಜರಾತ್‌, ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಗಳ ಮೇಲೆ ಕಣ್ಣಿಟ್ಟು ಭರ್ಜರಿ ಸಿದ್ಧತೆ ನಡೆಸುತ್ತಿದೆ.

ಕೇಜ್ರಿ ಮೇಲೆ ಆರೋಪ: ಮಾಜಿ ಸದಸ್ಯ ವಿಶ್ವಾಸ್‌ ವಿರುದ್ದವೇ ಆಪ್‌ ಕೇಸು

ಕಳೆದ ಪಂಜಾಬ್‌ ವಿಧಾನಸಭೆ ಚುನಾವಣೆಯ ವೇಳೆಯಲ್ಲಿ ದೆಹಲಿ ಮುಖ್ಯಮಂತ್ರಿ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಿದ್ದ ಆಪ್‌ನ ಮಾಜಿ ನಾಯಕ ಕುಮಾರ್‌ ವಿಶ್ವಾಸ್‌ ವಿರುದ್ಧ ಪಂಜಾಬ್‌ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬುಧವಾರ ಅವರ ಮನೆಗೆ ತೆರಳಿದ ಪೊಲೀಸರು ನೋಟಿಸ್‌ ನೀಡಿದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಆಮ್‌ಆದ್ಮಿ ಪಕ್ಷದ ಸ್ಥಾಪಕ ಸದಸ್ಯರಾಗಿರುವ ವಿಶ್ವಾಸ್‌, ಚುನಾವಣೆಯ ಸಮಯದ ಸಂದರ್ಶನದಲ್ಲಿ ಅರವಿಂದ ಕೇಜ್ರಿವಾಲ್‌ ಅವರು ಖಲಿಸ್ತಾನ ಎಂಬ ಸ್ವಾತಂತ್ರ ದೇಶದ ಪ್ರಧಾನಿಯಾಗುವ ಬಯಕೆ ಹೊಂದಿದ್ದಾರೆ ವಿಶ್ವಾಸ್‌ ಆರೋಪಿಸಿದ್ದರು. ವಿಶ್ವಾಸ್‌ ಅವರು ಕೇಜ್ರಿವಾಲ್‌ ವಿರುದ್ಧ ಹೇಳಿಕೆ ನೀಡಿದ ನಂತರ ಹಲವರು ಪ್ರಚಾರದ ವೇಳೆ ಕೇಜ್ರಿವಾಲ್‌ ಅವರನ್ನು ತಡೆದು ಖಲಿಸ್ತಾನಿ ಎಂದು ಕರೆದಿದ್ದಾರೆ. ಹೀಗಾಗಿ ಶಾಂತಿಯುತವಾಗಿರಬೇಕಿದ್ದ ಚುನಾವಣಾ ಪ್ರಕ್ರಿಯೆಗೆ ಧಕ್ಕೆಯಾಗಿದೆ ಎಂದು ದೂರುದಾರರು ಹೇಳಿದ್ದಾರೆ.